Amit Shah: ಅಮಿತ್ ಶಾ ರೋಡ್ ಶೋಗೆ ಬಂದಿದ್ದ ಬಿಜೆಪಿ ಕಾರ್ಯಕರ್ತರ ವಾಹನ ಅಪಘಾತ; 11 ಮಂದಿಗೆ ಗಾಯ
2023ರ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ಆರಂಭಿಸಿದ್ದು, ತಮ್ಮ ಅಭ್ಯರ್ಥಿಗಳ ಪರವಾಗಿ ಕೇಂದ್ರ ನಾಯಕರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಈಗಾಗಲೇ ನಾಮಪತ್ರ ಸಲ್ಲಿಕೆ ಮತ್ತು ನಾಮಪತ್ರ ಪರಿಶೀಲನೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಏಪ್ರಿಲ್ 24 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.
ಇಂದು (ಏಪ್ರಿಲ್ 21) ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವಿಜಯಪುರದಲ್ಲಿ ರೋಡ್ ಶೋನಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದರು. ಆದರೆ, ದೇವನಹಳ್ಳಿ ಸುತ್ತಮುತ್ತ ಮಳೆ ಸುರಿದ ಕಾರಣ, ಕೊನೆಯ ಕ್ಷಣದಲ್ಲಿ ರೋಡ್ಶೋ ರದ್ದಾಯಿತು.

ಹೀಗಾಗಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಬೆಂಗಳೂರಿನ ತಾಜ್ವೆಸ್ಟ್ ಎಂಡ್ ಹೋಟೆಲ್‌ಗೆ ಬಂದ ಅಮಿತ್ ಶಾ ಅವರು ರಾತ್ರಿ 7.45ರಿಂದ 9ರವರೆಗೆ ರಾಜ್ಯ ಬಿಜೆಪಿ ನಾಯಕರ ಜೊತೆ ಸಭೆ ನಡೆಸಿದರು.
ಶುಕ್ರವಾರ ರಾತ್ರಿ ರೇಸ್ಕೋರ್ಸ್ ರಸ್ತೆಯ (ಡಾ. ಅಂಬರೀಶ್ ರಸ್ತೆ) ಹೋಟೆಲ್ನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಶನಿವಾರ ಬೆಳಿಗ್ಗೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆಯಲಿರುವ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ನಂತರ ಮಧ್ಯಾಹ್ನ 12 ಗಂಟೆಗೆ ದೆಹಲಿಗೆ ವಾಪಸಾಗಲಿದ್ದಾರೆ.
ಬಿಜೆಪಿ ಕಾರ್ಯಕರ್ತರ ವಾಹನ ಅಪಘಾತ
ಬಿಜೆಪಿಗೆ ಮಳೆಯಿಂದಾಗಿ ಅಮಿತ್ ಶಾ ರೋಡ್ ಶೋ ರದ್ದಾದ ನಿರಾಸೆ ಒಂದು ಕಡೆಯಾದರೆ, ಮತ್ತೊಂದೆಡೆ ರೋಡ್ ಶೋಗೆ ಆಗಮಿಸಿದ್ದ ಕಾರ್ಯಕರ್ತರ ವಾಹನ ಅಪಘಾತವಾಗಿ 11 ಜನರು ಗಾಯಗೊಂಡಿರುವ ಘಟನೆ ದೇವನಹಳ್ಳಿ ತಾಲ್ಲೂಕು ವಿಜಯಪುರ ಮಾರ್ಗದ ಕುರುಬರಕುಂಟೆ ಬಳಿ ನಡೆದಿದೆ.

ರೋಡ್ ಶೋಗೆ ಬಂದಿದ್ದ ಬಿಜೆಪಿ ಕಾರ್ಯಕರ್ತರ ಟಾಟಾ ಏಸ್ ವಾಹನ ಅಪಘಾತಕ್ಕೆ ಒಳಗಾಗಿದ್ದು, ದೇವನಹಳ್ಳಿ ತಾಲೂಕಿನ ದೊಡ್ಡಚೀಮನಹಳ್ಳಿ ಗ್ರಾಮದಿಂದ ಆಗಮಿಸಿದ್ದ 11 ಕಾರ್ಯಕರ್ತರು ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಟಾಟಾ ಏಸ್‌ನಲ್ಲಿ ಹೆಚ್ಚಿನ ಜನರನ್ನು ತುಂಬಿದ್ದ ಕಾರಣ ಸ್ಕಿಡ್ ಆಗಿ ಅಪಘಾತವಾಗಿರುವ ಶಂಕೆ ವ್ಯಕ್ತವಾಗಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ ತತ್‌ಕ್ಷಣವೇ ದೇವನಹಳ್ಳಿ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಟಾಟಾ ಏಸ್ ವಾಹನ ಚಾಲಕ ಹಾಗೂ ಹಿಂಬದಿಯಲ್ಲಿ ಇದ್ದವರಿಗೆ ಗಾಯಗಳಾಗಿವೆ.
ಸೇಬಿಗಾಗಿ ಜನರ ಕಿತ್ತಾಟ
ಇದೇ ವೇಳೆ ಕೇಂದ್ರ ಬಿಜೆಪಿ ನಾಯಕ ಅಮಿತ್ ಶಾ ಅವರ ರೋಡ್ ಶೋ ರದ್ದಾದ ಕಾರಣ, ಅವರಿಗೆ ಹಾಕಲು ತಂದಿದ್ದ ಸೇಬಿನ ಹಾರಕ್ಕೆ ಜನರು ಮುಗಿಬಿದ್ದ ಘಟನೆ ನಡೆಯಿತು.
ಮಳೆ ಬರುತ್ತಿರುವ ಹಿನ್ನೆಲೆ ಅಮಿತ್ ಶಾ ಅವರ ರೋಡ್ ಶೋ ಮುಂದೂಡಿಕೆ ಮಾಡಿದ್ದೇವೆ. ಮಳೆ ಇರುವ ಕಾರಣ ತಮಗೆ ತೊಂದರೆ ಆಗಬಹುದು. ಮುಂದಿನ ದಿನಗಳಲ್ಲಿ ದಿನಾಂಕ ನಿಗದಿ ಮಾಡಿ ರೋಡ್ ಶೋ ಮಾಡುತ್ತೇವೆ ಎಂದು ಕರ್ನಾಟಕ ವಿಧಾನಸಭೆ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ತಿಳಿಸಿದ್ದಾರೆ.
ವಿಜಯಪುರದಲ್ಲಿ ರೋಡ್ ಶೋ ರದ್ದಾದ ಹಿನ್ನೆಲೆ ಕ್ರೇನ್‌ನಲ್ಲಿ ನೇತು ಹಾಕಲಾಗಿದ್ದ 250 ಕೆಜಿ ತೂಕದ ಸೇಬು ಹಣ್ಣಿನ ಹಾರವನ್ನು ಕೆಳಗಿಳಿಸಲಾಯಿತು. ಈ ವೇಳೆ ಸ್ಥಳದಲ್ಲಿ ನೆರೆದಿದ್ದ ಜನರು ಹಾಗೂ ಕಾರ್ಯಕರ್ತರು ತಾ ಮುಂದು ನಾ ಮುಂದು ಎಂಬಂತೆ ಸೇಬು ಹಣ್ಣು ಕಿತ್ತುಕೊಳ್ಳಲು ಮುಂದಾದರು. ಕೆಲವೇ ಕ್ಷಣಗಳಲ್ಲಿ ಸೇಬಿನ ಹಾರ ಇಲ್ಲದಂತೆ ಮಾಡಿದರು.












Click it and Unblock the Notifications