ಚಂದ್ರಶೇಖರ್ ಪಾಟೀಲ್‌ರಿಗೆ ಎಲ್ಲಾ ಬಣ್ಣದ ವಂದನೆಗಳು
ಹಿರಿಯ ಸಾಹಿತಿ, ನಾಟಕಕಾರ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಸೋಮವಾರ ಬೆಳಗ್ಗೆ ನಿಧನರಾಗಿದ್ದು, ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
"ಈ ಚಾನಲ್‌ಗಳು ಒಂಥರಾ ಗೋಶಾಲೆಗಳಿದ್ದಂಗೆ, ನಾವು ಮುದಿ ದನಗಳು, ನಮಗೂ ಈ ಗೋಶಾಲೆಗಳೇ ಖಾಯಂ," ಹೀಗೆಂದವರು ಚಂದ್ರಶೇಖರ್ ಪಾಟೀಲ್ (ಚಂಪಾ).
ಅದೊಂದು ದಿನ ಸಮಯ ಟಿವಿ ಲೈವ್ ಕಾರ್ಯಕ್ರಮಕ್ಕೆಂದು ಚಂಪಾ ಅವರನ್ನು ಆಹ್ವಾನಿಸಿದ್ದೆವು. ಕಾರ್ಯಕ್ರಮ ಏನೆಂಬುದು ನೆನಪಿನಲ್ಲಿಲ್ಲ. ಸಮಯ ಟಿವಿ ಕಚೇರಿಗೆ ಬರುವಷ್ಟರಲ್ಲಿ ಜನಶ್ರೀ ಟಿವಿಯ ಕಾರ್ಯಕ್ರಮ ಮುಗಿಸಿ ಬಂದಿದ್ದರು. ನಮ್ಮ ಚಾನಲ್‌ಗೆ ಬಂದಾಕ್ಷಣ ಅವರನ್ನು ರಿಸೀವ್ ಮಾಡಿದ ನಮ್ಮನ್ನು ನೋಡಿ ಮೇಲಿನಂತೆ ಹೇಳಿದ್ದರು.

ಚಂಪಾ ತಮ್ಮನ್ನು ತಾವು ಮುದಿ ದನ ಎಂದು ಕರೆದುಕೊಂಡಿದ್ದು ಮೇಲ್ನೋಟಕ್ಕೆ ತಮಾಷೆಯಾಗಿ ಕಂಡರೂ ನನಗಂತೂ ಬಹಳ ಇಷ್ಟವಾಗಿತ್ತು. ಮುದಿ ಅಂದರೆ ಅನುಭವ, ಮುದಿ ಎಂದರೆ ಜ್ಞಾನ ಭಂಡಾರ, ಮುದಿ ಎಂದರೆ ಗತಿಸಿಹೋದ ಘಟನೆಗಳ ಕಣ್ ಸಾಕ್ಷಿ. ಅಷ್ಟೇ ಅಲ್ಲ ಮುದಿ ಎಂದರೆ ನಾಡಿನ ಅಸ್ಮಿತೆಯೂ ಹೌದು.
ಹೊಸ ಕಾಲಮಾನದ ಪತ್ರಕರ್ತರಿಗೆ ನಾಡು ನುಡಿ, ನೆಲ, ಜನ, ರಾಜಕೀಯ, ಇತಿಹಾಸ ಪರಂಪರೆಯ ಜ್ಞಾನ ದಾಟಿಸುವ ನಡೆದಾಡುವ ಎನ್ಸೈಕ್ಲೋಪೀಡಿಯಾದಂತಹ ಚಂಪಾರಂಥ ಹಿರಿಯರನ್ನು ಕಳೆದುಕೊಂಡ ನಷ್ಟ ಅವರ ಕುಟುಂಬಕ್ಕಷ್ಟೇ ಅಲ್ಲ. ಅವರ ನಿಧನ ಈ ನಾಡಿನ ಅತಿ ದೊಡ್ಡ ನಷ್ಟ ಎಂದೇ ಹೇಳಬೇಕು.
ಚಂಪಾ ಅವರೊಳಗೆ ಕವಿ ಅಥವಾ ನಾಟಕಕಾರನಷ್ಟೇ ಇರಲಿಲ್ಲ. ಅವರಲ್ಲೊಬ್ಬ ಸಂಘಟಕ, ಹೋರಾಟಗಾರ, ಎದುರು ಕಂಡ ತಪ್ಪನ್ನು ನಿರ್ದಾಕ್ಷಿಣ್ಯವಾಗಿ ಹೇಳುವ "ಗಾಂಧಿ"ಯೂ ಇದ್ದ.
If you don't resist evil you are committing sin ಎಂಬ ಗಾಂಧಿ ಮಾತಿನಂತೆ ಬದುಕಿ ನಡೆದು ಹೋದವರು ಚಂಪಾ. ಚಂಪಾ ನಿಮಗೆ ಲಾಲ್ ಸಲಾಂ ಅಷ್ಟೇ ಸಾಲದು. ನಿಮಗಿದೂ ಹಸಿರು ವಂದನೆಗಳು, ನೀಲಿ ವಂದನೆಗಳು, ಕಪ್ಪು ವಂದನೆಗಳು, ಹರಿಶಿಣ- ಕುಂಕುಮ ವಂದನೆಗಳು.












Click it and Unblock the Notifications