Akhanda Srinivas Murthy Resigns: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಖಂಡ ಶ್ರೀನಿವಾಸಮೂರ್ತಿ
ಬೆಂಗಳೂರು ಏಪ್ರಿಲ್ 17: ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಭಾನುವಾರ ರಾತ್ರಿ ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದರು.
ಕಾಂಗ್ರೆಸ್ ಟಿಕೆಟ್ ಘೋಷಣೆಯಾಗದೇ ಇದ್ದದ್ದರಿಂದ ಬೇಸರಗೊಂಡು ಶ್ರೀನಿವಾಸಮೂರ್ತಿ ಅಸಮಧಾನಗೊಂಡು ರಾಜೀನಾಮೆಯನ್ನು ನೀಡಿದ್ದಾರೆ. ಕಾಂಗ್ರೆಸ್ ಈಗಾಗಲೇ ಮೂರು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೂರನೇ ಪಟ್ಟಿಯಲ್ಲಿ ಶ್ರೀನಿವಾಸಮೂರ್ತಿ ಹೆಸರು ಬರಬಹುದು ಎನ್ನುವ ನಿರೀಕ್ಷೆಯಿತ್ತು. ಪುಲಕೇಶಿನಗರ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಆಗಲೇ ಇಲ್ಲ. ಶ್ರೀನಿವಾಸಮೂರ್ತಿ ಬೆಂಬಲಿಗರು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಕೂಡ ಮಾಡಿಸಿದ್ದರು. ಆದರೂ ಟಿಕೆಟ್ ಘೋಷಣೆಯಾಗದೇ ಪಕ್ಷ ತೊರೆಯಲು ಶ್ರೀನಿವಾಸಮೂರ್ತಿ ನಿರ್ಧಾರಿಸಿದ್ದಾರೆ.

ಜೊತೆಗೆ ಪಕ್ಷದಲ್ಲಿ ಪುಲಕೇಶಿನಗರಕ್ಕೆ ಬೇರೆಯವರಿಗೆ ಟಿಕೆಟ್ ನೀಡುವ ಮಾತುಕತೆಗಳು ನಡೆಯುತ್ತಿರುವುದರಿಂದಲೂ ಅವರು ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಶ್ರೀನಿವಾಸ ಮೂರ್ತಿ ಪರ ಇದ್ದರೆ ಡಿಕೆ ಶಿವಕುಮಾರ್ ಬೇರೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಇಚ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೂ ಕೂಡ ಶ್ರೀನಿವಾಸಮೂರ್ತಿ ಪಕ್ಷ ಬಿಡುವುದಕ್ಕೆ ಕಾರಣ ಎನ್ನಲಾಗುತ್ತಿದೆ.
ಇನ್ನೂ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಶ್ರೀನಿವಾಸ ಮೂರ್ತಿ ಭಾಗಿಯಾಗಿದ್ದಾರೆ ಎನ್ನುವ ವಿಚಾರಗಳು ದಟ್ಟವಾಗಿವೆ. ಈ ಆರೋಪಗಳನ್ನು ಮಾಡಿದ ಅಲ್ಪಸಂಖ್ಯಾತ ಮುಖಂಡರು ಶ್ರೀನಿವಾಸಮೂರ್ತಿಗೆ ಕಾಂಗ್ರೆಸ್ ಟಿಕೆಟ್ ನೀಡದಂತೆ ಕೈ ನಾಯಕರಿಗೆ ಒತ್ತಾಯಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪುಲಿಕೇಶಿನಗರ ಗೊಂದಲದ ಗೂಡಾಗಿದೆ. ಈ ಎಲ್ಲಾ ಅಸಮಾಧಾನಗಳಿಂದಾಗಿ ಶ್ರೀನಿವಾಸಮೂರ್ತಿ ರಾಜೀನಾಮೆ ನೀಡಿದ್ದಾರೆ. ಮತ್ತೆ ಜೆಡಿಎಸ್‌ಗೆ ಹೋಗುವ ಸಾಧ್ಯತೆಗಳೂ ದಟ್ಟವಾಗಿವೆ.

ಜೆಡಿಎಸ್‌ನಿಂದ ಅಮಾನತುಗೊಂಡು ಕಾಂಗ್ರೆಸ್ ಸೇರಿದ್ದ 7 ಶಾಸಕರಲ್ಲಿ ಅಖಂಡ ಶ್ರೀನಿವಾಸಮೂರ್ತಿ ಸಹ ಒಬ್ಬರು. 2019ರ ಚುನಾವಣೆಯಲ್ಲಿ ಅವರು 97,574 ಮತಗಳನ್ನು ಪಡೆದು 81,626 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಪುಲಿಕೇಶಿ ನಗರ ಕ್ಷೇತ್ರದಲ್ಲಿ ಜೆಡಿಎಸ್‌ನ ಬಿ. ಪ್ರಸನ್ನ ಕುಮಾರ್ ವಿರುದ್ಧ ಜಯಗಳಿದ್ದರು.
ಕೆಜಿಹಳ್ಳಿ, ಡಿಜೆ ಹಳ್ಳಿ ಗಲಾಟೆ
'ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕಟಿಸಲಾಗಿದೆ' ಎಂದು ಆರೋಪಿಸಿ 500ಕ್ಕೂ ಹೆಚ್ಚು ಜನರು, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕಾವಲ್ ಬೈರಸಂದ್ರದಲ್ಲಿ 2020ರ ಆಗಸ್ಟ್ 10ರಂದು ವಾಹನಗಳಿಗೆ ಬೆಂಕಿಹಚ್ಚಿ, ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯ ಮೇಲೂ ದಾಳಿ ನಡೆದಿತ್ತು. ಪೊಲೀಸರ ಗುಂಡೇಟಿಗೆ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದರು.
ಅವಹೇಳನಕಾರಿ ಪೋಸ್ಟ್ ಹಾಕಿದ್ದ ಎನ್ನಲಾದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಘಟನೆಗೆ ಸಂಬಂಧಿಸಿದಂತೆ 111 ಜನರನ್ನು ಪೊಲೀಸರು ಬಂಧಿಸಿದ್ದರು. ಹಿಂಸಾಚಾರದಲ್ಲಿ 500ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು ಎಂದು ಹೇಳಲಾಗಿತ್ತು.
ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 13 ರಂದು ಚುನಾವಣೆಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.












Click it and Unblock the Notifications