ಕೊಲೆಯಾಗಲಿ ಎಂದು ಕಾದಿರುತ್ತೀರಾ: ಪೊಲೀಸರಿಗೆ ಹೈಕೋರ್ಟ್ ಪ್ರಶ್ನೆ
ಬೆಂಗಳೂರು, ಏಪ್ರಿಲ್ 27: ಸಿವಿಲ್ ವ್ಯಾಜ್ಯವೊಂದರ ವಿಚಾರಣೆ ವೇಳೆ ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಇತ್ತೀಚೆಗೆ ಸಿವಿಲ್ ವ್ಯಾಜ್ಯಗಳಲ್ಲೇ ಕೊಲೆಗಳು ನಡೆಯುತ್ತಿವೆ. ಆದರೆ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೊಲೆಗಳು ನಡೆಯಲಿ ಎಂದೇ ಕಾದು ಕುಳಿತಿರುತ್ತೀರಾ.? ಕೊಲೆ ನಡೆದರೆ ಮಾತ್ರ ನೀವು ಮಧ್ಯ ಪ್ರವೇಶಿಸುತ್ತೀರಾ ?
ಪೊಲೀಸರ ವಿರುದ್ಧ ಪ್ರತಿದಿನ ರಿಟ್ ಅರ್ಜಿ ದಾಖಲಾಗುತ್ತಿವೆ. ಪೊಲೀಸರು ತನಿಖೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇತ್ತೀಚೆಗೆ ಬಹುತೇಕ ಪ್ರಕರಣಗಳಲ್ಲಿ ಪೊಲೀಸರಿಂದ ಸೂಕ್ತ ತನಿಖೆಗಳು ನಡೆಯುತ್ತಿಲ್ಲ.

ಕರ್ನಾಟಕ ದೇಶದಲ್ಲೇ ಉತ್ತಮ ಆಡಳಿತ ವ್ಯವಸ್ಥೆಯ ರಾಜ್ಯವಾಗಿರಬೇಕು. ಆದರೆ ಪೊಲೀಸರ ಕಾರ್ಯವೈಖರಿ ಗಮನಿಸಿದರೆ ಬಿಹಾರ ಹಾಗೂ ಜಾರ್ಖಂಡ್ ರಾಜ್ಯಗಳೊಂದಿಗೆ ಕರ್ನಾಟಕ ಪೊಲೀಸರು ಸ್ಪರ್ಧಿಸುತ್ತಿರುವಂತೆ ಕಾಣುತ್ತಿದೆ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿದೆ.
ಪ್ರಕರಣದಲ್ಲಿ ಸೋದರನಿಂದಲೇ ಜೀವ ಬೆದರಿಕೆ ಇದ್ದು, ಈ ಸಂಬಂಧ ಅರ್ಜಿದಾರರು ಪೊಲೀಸರಿಗೆ 2014ರಲ್ಲೇ ದೂರು ನೀಡಿದ್ದಾರೆ. ಆದರೆ ಪೊಲೀಸರು ಕೇವಲ ಎಫ್ಐಆರ್ ದಾಖಲಿಸಿ ಸುಮ್ಮನಾಗಿದ್ದಾರೆ. ಪೊಲೀಸರ ಪ್ರತಿ ತನಿಖೆ ತಾರ್ಕಿಕ ಅಂತ್ಯ ಕಾಣಬೇಕು. ಕರ್ತವ್ಯಲೋಪ ಎಸಗುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ. ಕೋರ್ಟ್‌ಗೆ ಖುದ್ದು ಹಾಜರಿದ್ದ ಐಜಿಪಿ ದಯಾನಂದ್ ಗೆ ಹೈಕೋರ್ಟ್ ಸೂಚನೆ ನೀಡಿದೆ.
ಅರ್ಜಿದಾರರು ನೀಡಿರುವ ದೂರಿನ ಆಧಾರದ ಆರೋಪಿಯ ಮೇಲೆ ಎಫ್‌ಐಆರ್ ದಾಖಲಿಸಿ, ಪ್ರಕರಣದ ಸಂಬಂಧ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸುವಂತೆ ಸೂಚಿಸಿ ಹೈಕೋರ್ಟ್ ವಿಚಾರಣೆ ಮುಂದೂಡಿದೆ.












Click it and Unblock the Notifications