ಏರೋ ಇಂಡಿಯಾ-2021: ಯಲಹಂಕ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ
ಬೆಂಗಳೂರು, ಜನವರಿ.16: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಬೆಂಗಳೂರಿನಲ್ಲಿ ಏರೋ ಇಂಡಿಯಾ-2021 ಪ್ರದರ್ಶನ ಆಯೋಜಿಸುವುದು ಸರ್ಕಾರಕ್ಕೆ ಸವಾಲಾಗಿದೆ. ರಾಜ್ಯ ಸರ್ಕಾರ ಎಲ್ಲ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
2021ನೇ ಸಾಲಿನ ಏರೋ ಇಂಡಿಯಾ ಪ್ರದರ್ಶನ ಆಯೋಜನೆ ಹಿನ್ನೆಲೆ ಯಲಹಂಕ ವ್ಯಾಪ್ತಿಯಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. ಜನವರಿ.17ರಿಂದ ಫೆಬ್ರವರಿ.09ರವರೆಗೂ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.
ಬೆಂಗಳೂರಿನಲ್ಲಿ 2021ನೇ ಏರೋ-ಇಂಡಿಯಾಗೆ ಹೇಗಿದೆ ಸಿದ್ಧತೆ?
ಯಲಹಂಕದ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಮಾಂಸ ಮಾರಾಟ ಅಂಗಡಿ ಮತ್ತು ಡಾಬಾಗಳಲ್ಲಿ ಮಾಂಸ ಮಾರಾಟವನ್ನು ಮಾಡದಂತೆ ಬಿಬಿಎಂಪಿ ಆದೇಶದಲ್ಲಿ ಸೂಚಿಸಲಾಗಿದೆ. ಏರೋ ಇಂಡಿಯಾ 2021ರ ದೃಷ್ಟಿಯಿಂದ ಎಲ್ಲ ಹೋಟೆಲ್, ಡಾಬಾ ಮತ್ತು ಮಾಂಸ ಮಾರಾಟ ಕೇಂದ್ರಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ನಿಯಮ ಉಲ್ಲಂಘಿಸಿದರೆ ಅಂಥವರ ವಿರುದ್ಧ ಕೆಎಂಸಿ ಕಾಯ್ದೆ ಮತ್ತು ಇಂಡಿಯನ್ ಏರ್ ಕ್ರಾಫ್ಟ್ ರೂಲ್ಸ್ 1937ರ ಅಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಮೂರು ದಿನಕ್ಕೆ ತಗ್ಗಿದ ಏರೋ ಇಂಡಿಯಾ-2021:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿಯ ನಡುವೆ ಏರೋ ಇಂಡಿಯಾ 2021ರ ಕಾರ್ಯಕ್ರಮವನ್ನು ಫೆಬ್ರವರಿ. 3 ರಿಂದ 5 ರವರೆಗೆ ನಿಗದಿಗೊಳಿಸಲಾಗಿದೆ. ಪ್ರತಿವರ್ಷ ಐದು ದಿನಗಳ ಕಾಲ ನಡೆಯುತ್ತಿದ್ದ ಏರ್ ಇಂಡಿಯಾ ಶೋವನ್ನು ಈ ಬಾರಿ ಕೇವಲ ಮೂರು ದಿನಕ್ಕೆ ಇಳಿಕೆ ಮಾಡಲಾಗಿದೆ. ಲೋಹದ ಹಕ್ಕಿಗಳ ಹಾರಾಟಕ್ಕೂ ಕೊರೊನಾ ಸೋಂಕಿನ ಭೀತಿ ಎದುರಾಗಿದೆ. ಹೀಗಾಗಿ ಸಾರ್ವಜನಿಕರ ಪ್ರವೇಶಕ್ಕೆ ಬ್ರೇಕ್ ಹಾಕಲಾಗಿದೆ. ಈ ಮೂಲಕ ಲೋಹದ ಹಕ್ಕಿಗಳ ಹಾರಾಟ ಕಣ್ ತುಂಬಿಕೊಳ್ಳುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ನೀಡಿದೆ.