ತೆನೆ ಹೊತ್ತ ಮಳೆ ಹುಡುಗಿ ಪೂಜಾ ಗಾಂಧಿ, ಜೆಡಿಎಸ್‌ಗೆ ಹೆಚ್ಚಿದ ತಾರಾ ಬಲ
ಬಿಎಸ್‌ಆರ್ ಕಾಂಗ್ರೆಸ್‌ನಿಂದ ಕಳೆದ ಚುನಾವಣೆಯಲ್ಲಿ ರಾಯಚೂರಿನಿಂದ ಸ್ಪರ್ಧಿಸಿ ಸೋಲು ಕಂಡಿದ್ದ ನಟಿ ಪೂಜಾ ಗಾಂಧಿ ಇದೀಗ ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಇಂದು ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಪಿಜಿಆರ್ ಸಿಂಧ್ಯ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡ ಪೂಜಾ ಗಾಂಧಿ ಅವರು, ಜೆಡಿಎಸ್ ಪ್ರಚಾರಕ್ಕೆ ಇನ್ನಷ್ಟು ತಾರಾ ಮೆರಗು ತುಂಬಲಿದ್ದಾರೆ.
ಇತ್ತೀಚೆಗಷ್ಟೆ ನಟಿ ಅಮೂಲ್ಯಾ ಮತ್ತು ಹಿರಿಯ ನಟ ಶಶಿಕುಮಾರ್ ಅವರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದರು.
ನಟಿ ಪೂಜಾ ಗಾಂಧಿ ಅವರು ಬಿಗ್‌ಬಾಸ್ ನಲ್ಲಿಯೂ ಕೂಡ ಸ್ಪರ್ಧಿಸಿ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದರು. ಪೂಜಾ ಗಾಂಧಿ ಅವರ ಜನಪ್ರಿಯ ಚಿತ್ರಗಳು, ಮುಂಗಾರು ಮಳೆ, ಕೃಷ್ಣ, ತಾಜ್ ಮಹಲ್, ಬುದ್ಧಿವಂತ, ಅಭಿನೇತ್ರಿ, ತಿಪ್ಪಾಜಿ ಸರ್ಕಲ್, ಮುಂಗಾರು ಮಳೆ ನಂತರ ಅವರಿಗೆ ಹೆಚ್ಚಿನ ಖ್ಯಾತಿ ದೊರಕಿಸಿಕೊಟ್ಟಿದ್ದು ದಂಡುಪಾಳ್ಯ ಚಿತ್ರ. ಇದರ ಮೂರೂ ಅವತರಣಿಕೆಗಳಲ್ಲಿ ಪೂಜಾ ಗಾಂಧಿ ನಟಿಸಿದ್ದಾರೆ.

ಪೂಜಾ ಗಾಂಧಿ ಬಿಜೆಪಿ ಸೇರಲು ವಿರೋಧ
ಶ್ರೀರಾಮುಲು ಸ್ಥಾಪಿಸಿದ್ದ ಬಿಎಸ್‌ಆರ್ ಕಾಂಗ್ರೆಸ್ ನಿಂದ ರಾಯಚೂರು ಕ್ಷೇತ್ರಕ್ಕೆ ಚುನಾವಣೆಗೆ ನಿಂತಿದ್ದ ಪೂಜಾ ಗಾಂಧಿ ಅವರು ಹೀನಾಯ ಸೋಲನುಭವಿಸಿದ್ದರು. ಆ ನಂತರ ಅವರು ಕ್ಷೇತ್ರದತ್ತ ಮುಖಮಾಡಿ ನೋಡಿರಲಿಲ್ಲ. ನಂತರ ಶ್ರೀರಾಮುಲು ಮತ್ತೆ ಬಿಜೆಪಿ ಸೇರ್ಪಡೆಗೊಂಡಾಗ ಪೂಜಾ ಗಾಂಧಿ ಸಹ ಬಿಜೆಪಿ ಸೇರ್ಪಡೆಗೆ ಪ್ರಯತ್ನಿಸದರಾದರೂ ಕಾರ್ಯಕರ್ತರು ಹಾಗೂ ಕಲವು ಮುಖಂಡರು ವಿರೋಧಿಸಿದ್ದರು ಹಾಗಾಗಿ ಅವರು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

ಸಿನಿಮಾ-ರಾಜಕೀಯ ಏಳು ಬೀಳು
ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಸಿನಿಮಾ ಪ್ರವೇಶಿಸಿದ ಕೆಲವು ಉತ್ತಮ ಸಿನಿಮಾಗಳಲ್ಲಿ ಕಾಣಿಸಿಕೊಂಡು ಯಶಸ್ವಿ ನಾಯಕಿ ಎನಿಸಿಕೊಂಡರು. ಆದರೆ ನಂತರದಲ್ಲಿ ಸಿನಿಮಾದಲ್ಲಿ ಅವಕಾಶಗಳು ಕಡಿಮೆ ಆಗಿ ರಾಜಕೀಯದತ್ತ ಮುಖ ಮಾಡಿದ್ದರು ಆದರೆ ಅಲ್ಲಿಯೂ ಯಶಸ್ವಿ ಆಗಲಿಲ್ಲ, ಈಗ ಜೆಡಿಎಸ್ ಸೇರ್ಪಡೆ ಆಗಿ ಹೊಸ ಅಧ್ಯಾಯ ಪ್ರಾರಂಭ ಮಾಡಿದ್ದಾರೆ.

ತಾರಾ ಮೌಲ್ಯ ಹೆಚ್ಚಿಸಿಕೊಂಡ ಜೆಡಿಎಸ್
ನಟಿ ಅಮೂಲ್ಯ ಮತ್ತು ನಟ ಶಶಿಕುಮಾರ್ ಅವರುಗಳು ಸಹ ಇತ್ತೀಚೆಗೆ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಅಮೂಲ್ಯ ಅವರ ಮಾವ ರಾಮಚಂದ್ರಪ್ಪ ಅವರಿಗೆರಾಜರಾಜೇಶ್ವರಿ ನಗರಕ್ಷೇತ್ರದಿಂದ ಟಿಕೆಟ್ ಗಿಟ್ಟದ ಕಾರಣ ಅವರು ಜೆಡಿಎಸ್ ಸೇರ್ಪಡೆಗೊಂಡರು ಅವರೊಂದಿಗೆ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಕೂಡ ಜೆಡಿಎಸ್ ಸೇರಿದರು. ಇನ್ನು ಹೊಸದುರ್ಗದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದ ಶಶಿಕುಮಾರ್ ಅವರೂ ಸಹ ಟಿಕೆಟ್ ಸಿಗದ ಕಾರಣ ಜೆಡಿಎಸ್‌ಗೆ ಸೇರ್ಪಡೆಗೊಂಡರು.

ರಾಜಕೀಯಕ್ಕೆ ಬಂದು ತಪ್ಪು ಮಾಡಿದ್ದೆ ಎಂದಿದ್ದರು
ಇತ್ತೀಚೆಗಷ್ಟೆ ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಡುವ ಟಾಕ್ ಶೋನಲ್ಲಿ ಭಾಗವಹಿಸಿದ್ದ ಪೂಜಾ ಗಾಂಧಿ ಅವರು ರಾಜಕೀಯಕ್ಕೆ ಬಂದು ತಪ್ಪು ಮಾಡಿದೆ ಎಂದಿದ್ದರು. 'ನನ್ನ ಜೀವನದಲ್ಲಿ ರಾಜಕೀಯದ ಚಾಪ್ಟರ್ ಬೇಗ ಬಂದು ಬಿಟ್ಟಿತು, ಇಷ್ಟು ಬೇಗ ರಾಜಕೀಯಕ್ಕೆ ಬಂದು ತಪ್ಪು ಮಾಡಿದೆ' ಎಂದು ಹೇಳಿದ್ದರು.












Click it and Unblock the Notifications