ಕಾವೇರಿ ಬಗ್ಗೆ ನನ್ನನ್ನಲ್ಲ ನೀರಾವರಿ ತಜ್ಞರ ಅಭಿಪ್ರಾಯ ಕೇಳಿ: ಪ್ರಕಾಶ್ ರೈ
ಬೆಂಗಳೂರು, ಏಪ್ರಿಲ್ 20: ಬಹುಭಾಷಾ ನಟ ಪ್ರಕಾಶ್ ರೈಗೆ ಹೊದಲ್ಲೆಲ್ಲಾ ಕಾವೇರಿ ವಿವಾದದ ಪ್ರಶ್ನೆ ಎದುರಾಗುವುದು ಸಾಮಾನ್ಯ ಇಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಕೂಡಾ ಕಾವೇರಿ ವಿವಾದದ ಪ್ರಶ್ನೆ ಎದುರಾಯಿತು ಆದರೆ ಅದಕ್ಕೆ ಪ್ರಕಾಶ್ ರೈ ಅವರು ನಾಜೂಕು ಉತ್ತರ ನೀಡಿ ಸುಮ್ಮನಾದರು.
ಕಾವೇರಿ ವಿವಾದದ ಬಗ್ಗೆ ನಿಲವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರೈ, ಕಾವೇರಿ ಬಗ್ಗೆ ಮಾತನಾಡಲು ನಾನು ಜಲತಜ್ಞನಲ್ಲ, ಆದರೆ ಒಂದಂತೂ ಹೇಳಬಲ್ಲೆ ರಾಜಕಾರಣ ಬೆರೆತು ಕಾವೇರಿ ನದಿ ದೊಡ್ಡ ವಿವಾದದ ಕೇಂದ್ರವಾಗಿದೆ ಎಂದರು.
ಸದಾ ರಾಜಕಾರಣಿಗಳು, ಸಿನಿಮಾ ತಾರೆಯರು, ಸಂಘ ಸಂಸ್ಥೆಗಳಷ್ಟೆ ಕಾವೇರಿ ಬಗ್ಗೆ ಮಾತನಾಡುತ್ತಾರೆ, ಆದರೆ ನಿಜವಾಗಿ ಮಾತನಾಡಬೇಕಾದವರು ನೀರಾವರಿ ತಜ್ಞರು ಅವರ ಮಾತನ್ನು ಬಿಟ್ಟು ನಮ್ಮಂತಹವರನ್ನು ಕಾವೇರಿ ಬಗ್ಗೆ ಕೇಳಲಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನೈಲ್ ನದಿಯನ್ನು 2 ರಾಷ್ಟ್ರ ಹಂಚಿಕೊಳ್ಳುತ್ತಿವೆ
ಒಂದು ನೈಲ್ ನದಿಯನ್ನು ಎರಡು ರಾಷ್ಟ್ರಗಳೇ ಹಂಚಿಕೊಂಡಿರಬೇಕಾದರೆ, ಕಾವೇರಿಯಂತಹಾ ಜೀವನದಿಯನ್ನು ಎರಡು ರಾಜ್ಯಗಳು ಹಂಚಿಕೊಳ್ಳಲು ಸಾಧ್ಯವಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಕೇಂದ್ರಕ್ಕೆ ಕಾವೇರಿ ರಾಜಕೀಯ ದಾಳವಷ್ಟೆ
ಕೇಂದ್ರ ಕಾವೇರಿ ವಿವಾದದಲ್ಲಿ ನಾಟಕ ಮಾಡುತ್ತಿದೆ ಎಂದು ಕೇಂದ್ರದೆಡೆ ಬೊಟ್ಟು ಮಾಡಿದ ಅವರು, ಮಂಡಳಿ ರಚಿಸಿದರೆ ಕರ್ನಾಟಕದ ದ್ವೇಷ ಕಟ್ಟಿಕೊಳ್ಳಬೇಕಾಗುತ್ತದೆ, ರಚನೆ ಮಾಡಲಿಲ್ಲವೆಂದರೆ ತಮಿಳುನಾಡಿನ ಸಿಟ್ಟಿಗೆ ಗುರಿ ಆಗಬೇಕಾಗುತ್ತದೆ. ಕೇಂದ್ರ ಕಾವೇರಿ ವಿವಾದವನ್ನು ಸಮಸ್ಯೆಯಾಗಿ ನೋಡದೆ ರಾಜಕೀಯದ ದಾಳವಾಗಿ ನೋಡುತ್ತಿದೆ ಎಂದು ಅವರು ಹೇಳಿದರು.

ರಾಜಕಾರಣಿಗಳಿಂದ ನದಿ ಹಾಳು
'ಈಗ ನನಗಿರುವ ಮಾಹಿತಿ ಪ್ರಕಾರ ರಾಜಕಾರಣಿಗಳು ಕಾವೇರಿಯನ್ನು ಜೀವ ನದಿಯಾಗಿ ಉಳಿಸಿಲ್ಲ, ಕಾವೇರಿಯಲ್ಲಿ ಎರಡು ರಾಜ್ಯಗಳು ಹಂಚಿಕೊಳ್ಳಬಹುದಾದಷ್ಟು ನೀರೇ ಇಲ್ಲವಾಗಿದೆ, ಕಾವೇರಿಗೆ ಮತ್ತೆ ಜೀವ ತುಂಬುವ ಕಾರ್ಯ ಆಗಬೇಕಿದೆ' ಎಂದು ಅವರು ಹೇಳಿದರು.

ಟಿವಿ ಶೋ ಬಿಟ್ಟು ಎದ್ದು ಹೋಗಿದ್ದ ರೈ
ಹಿಂದೊಮ್ಮೆ ಇದೇ ಕಾವೇರಿ ವಿವಾದದ ಬಗ್ಗೆ ಕೇಳಿದ್ದಕ್ಕೆ ಗರಂ ಆಗಿ ಟಿವಿ ಕಾರ್ಯಕ್ರಮದಿಂದಲೇ ಪ್ರಕಾಶ್ ರೈ ಅವರು ಎದ್ದು ಹೋಗಿ ಬಿಟ್ಟಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಪ್ರಕಾಶ್ ರೈ ಮೇಲೆ ಮೂದಲಿಕೆಗಳ ಸುರಿಮಳೆ ಆಗಿತ್ತು.











Click it and Unblock the Notifications