Bengaluru Tunnel Road: ಟನಲ್ ರಸ್ತೆಗೆ ಪ್ರಕಾಶ್ ಬೆಳವಾಡಿ ವಿರೋಧ! ಇದು ಅವೈಜ್ಞಾನಿಕ ಹೇಗೆ? ಇಲ್ಲಿದೆ ವಿವರಣೆ
Tunnel Road Project: ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಗಳಲ್ಲಿ ಟನಲ್ ರಸ್ತೆ ಸಹ ಒಂದು. ಬೆಂಗಳೂರಿನಲ್ಲಿ ಹೆಬ್ಬಾಳ ಎಸ್ಟಿಂ ಮಾಲ್‌ನಿಂದ -ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಸುರಂಗ ರಸ್ತೆ (Bengaluru Tunnel Road Project) ಯೋಜನೆ ಮಾಡಿಯೇ ತೀರುತ್ತೇವೆ ಎಂದಿದ್ದಾರೆ. ಇತ್ತ ಈ ಬಗ್ಗೆ ನಟ ಪ್ರಕಾಶ್ ಬೆಳವಾಡಿ (Prakash Belawadi) ಅವರು ಸುರಂಗ ರಸ್ತೆ ಸೂಕ್ತವಲ್ಲ ಎಂಬುದನ್ನು ವೈಜ್ಞಾನಿಕ ಕಾರಣಗಳ ಸಮೇತ ವಿವರಿಸಿದ್ದಾರೆ. ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಧೋರಣೆ ಹೀಗೆ ಮುಂದುವರಿದರೆ, ನೀವು ಗೆದ್ದ ಬರದಂತೆ ಪ್ರಾರ್ಥಿಸುವೆ ಎಂದಿದ್ದಾರೆ.
ನಟ ಪ್ರಕಾಶ್ ಬೆಳವಾಡಿ ಅವರು 'ಸಂವಾದ' ಚಾನಲ್ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಟನಲ್ ರಸ್ತೆ ಯೋಜನೆನ್ನು ಪ್ರಶ್ನೆ ಮಾಡಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ''ಜನರು ನಿಮಗೆ ಅಧಿಕಾರ ಕೊಟ್ಟಿರುವುದು ಜನರಿಗೆ ಬೇಕಾಗಿದ್ದನ್ನು ಮಾಡಲು ಹೊರತು ನಿಮಗೆ ಬೇಕಾಗಿದ್ದನ್ನು ಮಾಡಲು ಅಧಿಕಾರ ಕೊಟ್ಟಿಲ್ಲ'' ಎಂದರು.

''ನಮ್ಮ ಮೆಟ್ರೋ ಗುಲಾಬಿ ಸುರಂಗ ಮಾರ್ಗಕ್ಕಿಂತಲೂ ಆರು ಪಟ್ಟು ಹೆಚ್ಚು ಕೊರೆಯಬೇಕಾದ ಸುರಂಗ ರಸ್ತೆ ಯೋಜನೆ ಇದಾಗಿದೆ. 2017ರಲ್ಲಿ ಗುಲಾಬಿ ಮಾರ್ಗ ಆರಂಭಿಸಿದ್ದೀರಿ, 2025 ಬಂದರೂ ಸಹ ಆಯೋಜನೆ ಸಾಕಾರವಾಗಿಲ್ಲ. ಜನರಿಗೆ ಸೇವೆ ಲಭ್ಯವಾಗಿಲ್ಲ. ಈ ಟನಲ್ ರಸ್ತೆ ಯೋಜನೆ ಸುರಂಗ ಮೆಟ್ರೋ ಮಾರ್ಗಕ್ಕಿಂತಲೂ ಉದ್ದವಿದೆ. ಸುಮಾರು 17.5 ಕಿಲೋ ಮೀಟರ್ ಉದ್ದದ ಟನಲ್ ರಸ್ತೆಯನ್ನು ಎರಡು ವರ್ಷದಲ್ಲಿ ನಿರ್ಮಿಸುವ ಬಗ್ಗೆ ಸರ್ಕಾರದ ಸಚಿವರು ಹೇಳಿದ್ದಾರೆ. ಎರಡೇ ವರ್ಷದಲ್ಲಿ ಟನಲ್ ನಿರ್ಮಿಸಲು ಇವರಿಗೆ ಸಾಮರ್ಥ್ಯ ಇದಿಯಾ? ಎಂದು ಪ್ರಶ್ನಿಸಿದ್ದಾರೆ.
ಒಂದು ವೇಳೆ ವಾಹನ ಟನಲ್‌ನಲ್ಲಿ ಕೆಟ್ಟು ನಿಂತರೆ ಅದಕ್ಕೆ ಪರ್ಯಾಯ ವ್ಯವಸ್ಥೆ ಏನಿರುತ್ತೆ? ನಾಗಾವರ ಕೆರೆ, ಲಾಲ್ ಬಾಗ್ ಕೆರೆ, ಹೆಬ್ಬಾಳ ಕೆರೆ ಈ ಟನಲ್ ರಸ್ತೆಯಿಂದ ಒಣಗುತ್ತಾ? ಇಲ್ಲವಾ? ಟನಲ್‌ನಲ್ಲಿ ಮಳೆ ನೀರು ತುಂಬಿಕೊಂಡರೆ ಏನು ಮಾಡುತ್ತೀರಿ? ಎಂದೆಲ್ಲ ಪ್ರಶ್ನೆ ಮಾಡಿದ್ದಾರೆ. ಟನಲ್ ರಸ್ತೆ ಸೂಕ್ತವೇ ಅಲ್ಲವಾ ಎಂಬುದು ಅವರ ಮಾತಿನಲ್ಲಿ ತಿಳಿಯುತ್ತದೆ. ಈಗಾಗಲೇ ತಜ್ಞರು, ವಿಪಕ್ಷ ನಾಯಕರು ಸಹ ಯೋಜನೆ ವಿರೋಧಿಸಿದ್ದಾರೆ.
ಯಾರಿಗಾಗಿ ಈ ಟನಲ್ ರಸ್ತೆ ನಿರ್ಮಾಣ?
ಒಂದು ಕಾರಿನ ಪೆಟ್ರೋಲ್ ಬೆಲೆ ಎಷ್ಟಾಗುತ್ತೋ, ಅದರ ದುಪ್ಪಟ್ಟು ಟೋಲ್ ದರ ಕಟ್ಟಬೇಕಾಗುತ್ತದೆ. ಈ ಟನಲ್‌ನಲ್ಲಿ ಬಸ್‌ಗಳು ಹೋಗೊಕೆ ಆಗಲ್ಲ. ಸ್ಕೂಟರ್, ಬೈಕ್ ಅಲ್ಲಿ ಹೋಗೊಕೆ ಬಿಡುವುದಿಲ್ಲ. ಒಂದು ಕಾರು ಬೆಂಗಳೂರಿನ ಒಂದು ಕಡೆಯಿಂದ ಮತ್ತೊಂದು ಕಡೆ ಟನಲ್ ಮೂಲಕ ಹೋಗಲು 400-500 ರೂಪಾಯಿ ಟೋಲ್ ಶುಲ್ಕ ಕಟ್ಟಬೇಕಾಗುತ್ತೆ? ಬೆಂಗಳೂರಲ್ಲಿ ಬರೀ ಕಾರು ಹೊಂದಿದವರು ಮಾತ್ರವೇ ಇದ್ದಾರಾ? ನೀವು ಯಾರಿಗೆ ಟನಲ್ ನಿರ್ಮಿಸುತ್ತಿದ್ದೀರಿ? ಎಂದು ಜನರ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಸುಮಾರ 17.5 ಕಿಲೋ ಮೀಟರ್ ಟನಲ್ ರಸ್ತೆ ನಿರ್ಮಿಸಲು ಮೊದಲ ಹಂತದಲ್ಲಿ 17,000 ಕೋಟಿ ರೂಪಾಯಿ ಖರ್ಚು ಮಾಡುವುದಾಗಿ ಹೇಳಿದ್ದೀರಿ. ಮುಂದೆ ಈ ಹಣ ನಾಲ್ಕು ಪಟ್ಟು ಹೆಚ್ಚಾಗಲೂಬಹುದು. ಇಷ್ಟು ಹಣ ನಿಮ್ಮಲ್ಲಿ ಇದ್ದರೆ ನಗರದಲ್ಲಿ ಈಗಾಗಲೇ ನೆನೆಗೂದಿಗೆ ಬಿದ್ದ ಅನೇಕ ಕಾಮಗಾರಿ ಯೋಜನೆಗಳನ್ನು ಪೂರ್ಣ ಮಾಡಬಹುದಲ್ಲವೇ?. ಮುಂದೆ 20 ವರ್ಷದ ಬಳಿಕ ಸುರಂಗ ರಸ್ತೆ ಅಗತ್ಯವೆನಿಸಿದರೆ ಆ ಬಗ್ಗೆ ಯೋಚಿಸಿ ಎಂದಿದ್ದಾರೆ.
ನೀವು ಮತ್ತೆ ಗೆದ್ದು ಬರಬಾರದು..
ಸರ್ಕಾರಕ್ಕೆ ಬೆಂಗಳೂರು ಟನಲ್ ರಸ್ತೆ ಯೋಜನೆ ಒಳ್ಳೆಯದು ಎಂದು ಅದರ ಮೇಲೆ ಅಷ್ಟು ಭರವಸೆ ಇದ್ದರೇ ನೀವ್ಯಾಕೆ ಯೋಜನೆ ಬಗ್ಗೆ ಸಾರ್ವಜನಿಕ ಸಮಾಲೋಚನೆ ಮಾಡುವುದಿಲ್ಲ ಎಂದು ಪ್ರಶ್ನಿಸಿದರು. ಸರ್ಕಾರದ ಧೋರಣೆ ಹೀಗೆ ಮುಂದುವರಿದರೆ, ನಿಮ್ಮಂಥವರು ಮುಂದೆ ಮತ್ತೆ ಗೆದ್ದು ಬರದಂತೆ ನಾವು ಪ್ರಾರ್ಥಿಸುತ್ತೇವೆ ಎಂದು ಎಚ್ಚರಿಸಿದ್ದಾರೆ. ವೈಜ್ಞಾನಿಕವಾಗಿ ನೋಡಿದರೆ ಈ ಸುರಂಗ ರಸ್ತೆ ಸೂಕ್ತವಲ್ಲ ಎಂದು ಅವರು ವಿವರಿಸುವ ಪ್ರಯತ್ನ ಮಾಡಿದ್ದಾರೆ.
ಈ ಹಿಂದೆ ಡಿಪಿಆರ್ ರಚನೆ ಮಾಡುವಾಗಲೂ ಸಹ ಬೆಂಗಳೂರು ಟನಲ್ ರಸ್ತೆ ಯೋಜನೆ ಅಷ್ಟು ಸೂಕ್ತ ಅಲ್ಲ. ಇದರಿಂದ ಅಂತಜರ್ಲಕ್ಕೆ ಹೊಡೆತ ಬೀಳಲಿದೆ. ಸಂಚಾರಕ್ಕೆ ತೊಂದರೆ ಆಗಬಹುದು. ದೊಡ್ಡ ಟನಲ್ ಕೊರೆಯುವುದು ಸುಲಭದ ಮಾತಲ್ಲ. ಇದರಿಂದ ಸಾಕಷ್ಟು ದುಷ್ಪರಿಣಾಮ ಬೀಳಲಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಹೀಗಿದ್ದೂರು ಬೆಂಗಳೂರು ಸಂಚಾರ ದಟ್ಟಣೆ ಕಡಿವಾಣಕ್ಕೆ ಟನಲ್ ರಸ್ತೆಯೊಂದೆ ಪರಿಹಾರ ಎಂದು ಡಿಕೆ ಶಿವಕುಮಾರ್ ಆಗಾಗ ಪುನರುಚ್ಚರಿಸಿದ್ದಾರೆ.












Click it and Unblock the Notifications