ಖ್ಯಾತ ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ನಟ ದರ್ಶನ್
ಬೆಂಗಳೂರು, ನವೆಂಬರ್, 26: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿಯಾದ ಶ್ರೀಮತಿ ಲೀಲಾವತಿರವರ ಅನಾರೋಗ್ಯದ ಹಿನ್ನೆಲೆ ಇಂದು (ನವೆಂಬರ್ 26) ಅವರ ನಿವಾಸಕ್ಕೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದರು. ಹಾಗೆಯೇ ಇದೇ ವೇಳೆ ಅವರು, ಅದಷ್ಟು ಬೇಗ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು ಹೇಳಿದರು.
ಅನಾರೋಗ್ಯದ ಕಾರಣದಿಂದ ಹಾಸಿಗೆ ಹಿಡಿದಿರುವ ಲೀಲಾವತಿ ಅವರನ್ನು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಭೇಟಿಯಾಗಿ ವಿನೋದ್ ರಾಜ್ ಬಳಿ ಯೋಗಕ್ಷೇಮ ವಿಚಾರಿಸಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ಲೀಲಾವತಿ ಅವರ ಮನೆಯಲ್ಲಿದ್ದು, ನಟ ವಿನೋದ್ ರಾಜ್ ಅವರ ಬಳಿ ಲೀಲಾವತಿರವರ ಆರೋಗ್ಯದ ಬಗ್ಗೆ ಚರ್ಚೆ ಮಾಡಿದ್ದಾರೆ.

ವಿನೋದ್ ರಾಜ್ ಅವರು ಸೋಲದೇವನಹಳ್ಳಿಯಲ್ಲಿ ಪಶು ವೈದ್ಯಕೀಯ ಆಸ್ಪತ್ರೆಯೊಂದನ್ನು ನಿರ್ಮಾಣ ಮಾಡಿದ್ದಾರೆ. ಶನಿವಾರ (ನವೆಂಬರ್ 25) ಆ ಆಸ್ಪತ್ರೆಯಲ್ಲಿ ಹೋಮ ಹವನಗಳನ್ನು ನೆರವೇರಿಸಿದ್ದಾರೆ. ಇಂದು (ನವೆಂಬರ್ 26) ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು. ವಿನೋದ್ ರಾಜ್ ಜೊತೆ ಕೆಲ ಕಾಲ ಮಾತನಾಡಿ ಬಳಿಕ ಲೀಲಾವತಿ ಅವರ ಆರೋಗ್ಯ ವಿಚಾರಿಸಿ ತೆರಳಿದರು.
ಕೆಲವು ದಿನಗಳ ಹಿಂದೆಯಷ್ಟೆ ನಟ ಅರ್ಜುನ್ ಸರ್ಜಾ, ಸೋಲದೇವನಹಳ್ಳಿಗೆ ಭೇಟಿ ನೀಡಿ ಲೀಲಾವತಿ ಅವರ ಆರೋಗ್ಯ ವಿಚಾರಿಸಿದ್ದರು. ವಿನೋದ್ ರಾಜ್ ಜೊತೆ ಸೇರಿ ಅವರ ತೋಟದಲ್ಲಿ ಸುತ್ತಾಡಿ ಖುಷಿ ಪಟ್ಟಿದ್ದರು. ಅವರ ತೋಟದ ಕೆಲಸದವರ ಜೊತೆ ಚಿತ್ರಗಳನ್ನು ತೆಗೆಸಿಕೊಂಡಿದ್ದರು. ವಿನೋದ್ ರಾಜ್ಗೆ ಹಾಗೂ ಲೀಲಾವತಿ ಅವರಿಗೆ ಧೈರ್ಯ ತುಂಬಿದರು ಎಂದು ತಿಳಿದುಬಂದಿದೆ.
ಇದಕ್ಕೂ ಮುಂಚೆಯೇ ನಟಿಯರಾದ ಮಾಳವಿಕಾ ಅವಿನಾಶ್, ಶ್ರುತಿ, ಸುಧಾರಾಣಿ ಅವರು ಕೂಡ ಹೋಗಿ ಲೀಲಾವತಿ ಅವರ ಆರೋಗ್ಯವನ್ನು ವಿಚಾರಿಸಿ ಬಂದಿದ್ದರು. ನಂತರ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು, ಪದಾಧಿಕಾರಿಗಳು ಭೇಟಿ ನೀಡಿದ್ದರು. ಬಳಿಕ ಶ್ರೀನಾಥ್, ಶ್ರೀಧರ್, ಟೆನ್ನಿಸ್ ಕೃಷ್ಣ, ದೊಡ್ಡಣ್ಣ ಸೇರಿದಂತೆ ಹಲವು ಹಿರಿಯ ನಟರು, ನಟಿಯರು ಲೀಲಾವತಿಯವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು.
ಬರೀ ಅಷ್ಟೇ ಅಲ್ಲದೇ ಎಲ್ಲ ಸ್ಯಾಂಡಲ್‌ವುಟ್ ನಟರು ಬಸ್ ಮಾಡಿಕೊಂಡು ಒಟ್ಟಾಗಿ ಲೀಲಾವತಿ ಮನೆಗೆ ಭೇಟಿ ನೀಡಿ ಅಲ್ಲಿ ಅವರ ಮುಂದೆ ಹಾಡು, ನೃತ್ಯಗಳನ್ನು ಮಾಡಿ ಅವರವನ್ನು ಮನರಂಜಿಸುವ ಕೆಲಸವನ್ನು ಮಾಡಿದ್ದರು.












Click it and Unblock the Notifications