'ನನ್ನ ಕ್ಷಮಿಸಿಬಿಡಿ': ಕೈ ಮುಗಿದು ಕ್ಷಮೆ ಕೇಳಿದ ದರ್ಶನ್ ಅಭಿಮಾನಿ ಚೇತನ್
ಕನ್ನಡ ಚಿತ್ರರಂಗದ ನಿರ್ಮಾಪಕ ಉಮಾಪತಿ ಗೌಡ ವಿರುದ್ಧ ದರ್ಶನ್ ಅಭಿಮಾನಿಗಳಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಸವೇಶ್ವರ ನಗರ ಪೊಲೀಸರು ದರ್ಶನ್ ಅಭಿಮಾನಿಯನ್ನು ಬಂಧಿಸಿದ್ದಾರೆ. ಚೇತನ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಚೇತನ್ ಎನ್ನುವಾತ ಬಹಿರಂಗವಾಗಿ ಉಮಾಪತಿ ಗೌಡಗೆ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಉಮಾಪತಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋಗಳನ್ನು ನೋಡಿದ ನಿರ್ಮಾಪಕ ಉಮಾಪತಿ ಗೌಡ ಬೆದರಿಕೆ ಹಾಕಿದ್ದ ಯುವಕನ ಬಗ್ಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ನಟ ದರ್ಶನ್ ಅಭಿಮಾನಿ ಚೇತನ್ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಐಪಿಸಿ ಸೆಕ್ಷನ್ 504,506 ಅಡಿಯಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು. ಕೂಡಲೇ ಕ್ರಮ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅಂದು ಚೇತನ್ ಹೇಳಿದ್ದೇನು..?
ಬಾಸು ಒಳಗಡೆ ಇದ್ದಾರೆ ಎಂದು ಬೇಜಾನ್ ಮಾತನಾಡುತ್ತಿದ್ದಾನೆ. ತಗಡೇ ಎಂದಾಗ ಮಾತನಾಡುವ ಯೋಗ್ಯತೆ ಇಲ್ಲ. ಅವನ ಮುಖ ನೋಡಿ ಬಾಸ್ ದುಡ್ಡು ಹಾಕಿಲ್ಲ. ಅವನಿಗೆ ಏನು ಬೇಕಾದರೂ ಮಾಡಬಹುದು ಎಂದು ನಿರ್ಮಾಪಕ ಉಮಾಪತಿ ಗೌಡ ವಿರುದ್ಧ ದರ್ಶನ್ ಅಭಿಮಾನಿಗಳಿಗೆ ಪ್ರಚೋದನೆ ನೀಡಿರುವ ಚೇತನ್ ಹೇಳಿಕೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಮೇರೆಗೆ ಚೇತನ್‌ನನ್ನು ಬಂಧಿಸಲಾಗಿತ್ತು. ಬಂಧನದ ಬಳಿಕ ಚೇತನ್ ಕ್ಷಮಾಪಣೆ ಕೇಳಿದ್ದು, ಸದ್ಯ ಈ ವಿಡಿಯೋ ಕೂಡ ವೈರಲ್ ಆಗುತ್ತಿದೆ. ' ಸರ್ ನನ್ನ ಹೆಸರು ಚೇತನ್ ಅಂತಾ ನಾನು ದರ್ಶನ್ ಅಭಿಮಾನಿ. ಅವತ್ತು ಅನ್ನಪೂಣೇಶ್ವರಿ ಠಾಣೆಯ ಬಳಿ ಹೋಗಿದ್ದೆ. ಅಲ್ಲಿ ತಪ್ಪಾಗಿ ಮಾತನಾಡಿದ್ದೇನೆ. ಉಮಾಪತಿ ಶ್ರೀನಿವಾಸ್ ಹಾಗೂ ಪ್ರತಾಪ್‌ಗೆ ಮಾತನಾಡಿದ್ದೇನೆ.
ಕಾನೂನು ಪ್ರಕಾರ ಏನಿದೆ ಅದಕ್ಕೆ ನಾನು ತಲೆ ಬಾಗುತ್ತೇನೆ. ನನ್ನಿಂದ ಏನೇ ತಪ್ಪಾಗಿದ್ದರೂ ನನ್ನನ್ನು ಕ್ಷಮಿಸಿ ಬಿಡಿ' ಎಂದು ದರ್ಶನ್ ಅಭಿಮಾನಿ ಚೇತನ್ ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಚೇತನ್ ಮೊದಲು ಮಾತನಾಡಿರುವ ವಿಡಿಯೋ ಹಾಗೂ ಈಗ ಕ್ಷಮೆ ಕೇಳಿರುವ ಎರಡೂ ವಿಡಿಯೋವನ್ನು ಒಟ್ಟಿಗೆ ಹಾಕಿ ಸಖತ್ ಟ್ರೋಲ್ ಮಾಡಲಾಗುತ್ತಿದೆ. ಟ್ರೋಲ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications