ಜೈಲನ್ನು ತನ್ನ ಆಸ್ತಿಯಂತೆ ನಡೆಸುತ್ತಿರುವ ಈ ರೌಡಿಗಳು ಯಾರು?-ನಟ ಚೇತನ್ ಅಹಿಂಸಾ
ಬೆಂಗಳೂರು, ಆಗಸ್ಟ್ 27: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ಆರೋಪಗಳು ಜೋರಾಗಿ ಕೇಳಿ ಬರುತ್ತಿದೆ. ಈ ಆರೋಪಕ್ಕೆ ಪುಷ್ಠಿಕೊಡುವಂತೆ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದೆ. ದರ್ಶನ್ ಟೀ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾ ಎನ್ನುವ ರೌಡಿಶೀಟರ್ ಜೊತೆಗೆ ಜೈಲಿನ ಆವರಣದ ಒಳಗೆ ಕುಳಿತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.
ಪರಪ್ಪನ ಅಗ್ರಹಾರದ ಸರ್ಪಗಾವಲಿನಲ್ಲೂ ವಿಚಾರಣಾಧೀನ ಕೈದಿಗಳಿಗೆ ಸಿಕ್ಕ ಸೌಲಭ್ಯಗಳು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಈಗಾಗಲೇ ಜೈಲು ವಾಸ ಅನುಭವಿಸಿರುವ ನಟ ಚೇತನ್ ಅಹಿಂಸಾ ಪ್ರತಿಕ್ರಿಯಿಸಿದ್ದಾರೆ. 'ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ವಿಶೇಷ ಸೌಲಭ್ಯಗಳನ್ನು ಪಡೆಯುತ್ತಿರುವುದನ್ನುಇತ್ತೀಚಿನ ಚಿತ್ರವೊಂದು ತೋರಿಸುತ್ತದೆ.

ನನ್ನ 2 ಬಾರಿ ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾನು ನೋಡಿದ 1,000ಕ್ಕೂ ಹೆಚ್ಚು ಕೈದಿಗಳಲ್ಲಿ, ಈ ಫೋಟೋದಲ್ಲಿ ದರ್ಶನ್‌ರಂತೆ ಒಬ್ಬರಿಗೂ ಕುರ್ಚಿ, ಟೇಬಲ್, ಮಗ್, ಚಹಾ/ಕಾಫಿ, ಕರವಸ್ತ್ರ ಅಥವಾ ಸಿಗರೇಟ್ ಸಿಗಲಿಲ್ಲ. ಈ ಚಿತ್ರವು ನಿಜವಾಗಿದ್ದರೆ, ಹಣ ಮತ್ತು ಪ್ರಭಾವವು ಅದ್ಭುತಗಳನ್ನು ಮಾಡುತ್ತವೆ' ಎಂದು ಹೇಳಿದ್ದರು.
ನಟ ದರ್ಶನ್ ಪೋಟೋಗಳು ವೈರಲ್ ಆದ ಹಿನ್ನಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ ವೇಲು ಎನ್ನುವವನಿಗೆ ದರ್ಶನ್ ಜೊತೆ ಫೋಟೋದಲ್ಲಿ ಕಾಣಿಸಿಕೊಂಡ ವಿಲ್ಸನ್ ಗಾರ್ಡನ್ ನಾಗ ಥಳಿಸಿದ್ದಾನೆ ಎಂದು ವರದಿಯಾಗಿತ್ತು. ಈ ಘಟನೆ ಬಗ್ಗೆಯೂ ಪ್ರತಿಕ್ರಿಯಿಸಿರುವ ನಟ ಚೇತನ್ ಅಹಿಂಸಾ, 'ವೈರಲ್ ಆಗಿರುವ ಫೋಟೋದಲ್ಲಿ ನಟ ದರ್ಶನ್ ಪಕ್ಕದಲ್ಲಿ ಕುರ್ಚಿಯಲ್ಲಿ ಕುಳಿತಿದ್ದ ಭೂಗತ ವ್ಯಕ್ತಿಯು ಚಿತ್ರವನ್ನು ಸೋರಿಕೆ ಮಾಡಿದ ಕೈದಿಯನ್ನು ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಜೈಲಿನಲ್ಲಿ ವಿಶೇಷ ವಿಐಪಿ ಸವಲತ್ತುಗಳನ್ನು ಪಡೆಯುವುದಲ್ಲದೆ, ಜೈಲನ್ನು ತನ್ನ ಆಸ್ತಿಯಂತೆ ನಡೆಸುತ್ತಿರುವ ಈ ರೌಡಿಗಳು ಯಾರು?
ಗೃಹ ಸಚಿವ ಪರಮೇಶ್ವರ್ ಅವರು ನಮ್ಮ ದೋಷಪೂರಿತ ಕರ್ನಾಟಕ ಜೈಲು ವ್ಯವಸ್ಥೆಯನ್ನು ಸಕ್ರಿಯವಾಗಿ ಸುಧಾರಿಸಬೇಕು' ಎಂದು ಚೇತನ್ ಅಹಿಂಸಾ ತೀವ್ರವಾಗಿ ಆಗ್ರಹಿಸಿದ್ದಾರೆ.
ನಟ ಚೇತನ್‌ಗೆ ಜೈಲಿನ ಕಹಿ ಅನುಭವ ಹೇಗಿತ್ತು..?
ಇನ್ನು ಈ ಹಿಂದೆ ತಮ್ಮ ಜೈಲಿನ ಕಹಿ ಅನುಭವ ಹೇಳಿಕೊಂಡಿದ್ದ ಚೇತನ್, 'ನಾನು ಜೈಲಿನಲ್ಲಿದ್ದಾಗ ನನ್ನ ಕುಟುಂಬಸ್ಥರನ್ನು ಯಾರನ್ನೂ ಬಿಡಲಿಲ್ಲ. ನನ್ನನ್ನು ನೋಡಲು ಯಾರಿಗೂ ಅವಕಾಶ ಕೊಡಲಿಲ್ಲ. ನನ್ನ ಹುಟ್ಟುಹಬ್ಬದ ದಿನ ಕೂಡ ಅವರನ್ನು ವಾಪಸ್ ಕಳುಹಿಸಿಬಿಟ್ಟಿದ್ದರು. ನನ್ನನ್ನು ಮೊದಲ ಬಾರಿಗೆ ಜೈಲಿಗೆ ಹಾಕಿದಾಗ ಆರು ಜನರಿರುವ ಸೆಲ್‌ನಲ್ಲಿ ಹಾಕಿದ್ದರು. ಎರಡನೇ ಸಲ ನೆಲವತ್ತು ಜನರಿರುವ ಬಾರೆಕ್ಸ್‌ನಲ್ಲಿ ಹಾಕಿದ್ದರು.
ಅಲ್ಲಿ ಸಮಯ ಕಳೆಯುವುದು ತುಂಬಾ ಕಷ್ಟ. ಒಳಗಡೆನೇ ಇರಬೇಕು. ರಾತ್ರಿ ಗಟ್ಟಿ ನೆಲದಲ್ಲೇ ಮಲಗಬೇಕು. ಅಲ್ಲಿನ ಬಾತ್‌ರೂಮ್ ಅಂತೂ ಸಣ್ಣದಾದ ಒಂದು ರೂಮ್. ಅಲ್ಲೇ ಕೈ ತೊಳೆದುಕೊಳ್ಳುವುದು. ಅಲ್ಲೇ ಟಾಯ್ಲೆಟ್ ಬಳಸಬೇಕು. ಸ್ನಾನ ಮಾಡುವುದು, ಹಲ್ಲು ಉಜ್ಜುವುದು, ಕಸದ ಬುಟ್ಟಿ ಎಲ್ಲಾ ಒಂದು ಚಿಕ್ಕ ಜಾಗದಲ್ಲಿ ಇತ್ತು. ಅದು ತಿಪ್ಪೆಗುಂಡಿ ಅಂದರೆ ತಿಪ್ಪೆಗುಂಡಿ. ಅದು ತುಂಬಾ ಕಷ್ಟ ಆಯ್ತು ಅಲ್ಲಿ. ಜೈಲಿನಲ್ಲಿ ಬಾರೆಕ್ಸ್ ಎನ್ನುವುದು ತುಂಬಾ ಕಷ್ಟ. ಆದರೆ ಸೆಲ್‌ನಲ್ಲಿ ಇರಬಹುದು' ಎಂದರು.












Click it and Unblock the Notifications