ಕಾಮುಕರಿಂದ ಸ್ತ್ರೀಯರ ರಕ್ಷಣೆಗೆ ಬಂದಿದೆ ಉಂಗುರ!
ಬೆಂಗಳೂರು, ಸೆ.15 : ಬೀದಿ ಕಾಮಣ್ಣರಿಂದ ರಕ್ಷಣೆ ಪಡೆಯಲು ಬೆಂಗಳೂರಿನ ಮಹಿಳೆಯರಿಗೆ ಮತ್ತೂಂದು ಪ್ರಮುಖ ಅಸ್ತ್ರ ಸಿಕ್ಕಿದೆ. ಇಷ್ಟು ದಿವಸ 'ಪೆಪ್ಪರ್ ಸ್ಪ್ರೈ ಮೊರೆ ಹೋಗುತ್ತಿದ್ದ ಸ್ತ್ರೀಯರು ಇನ್ನು ಬೆರಳಿಗೆ ಒಂದು ಉಂಗುರ ತೊಟ್ಟು ಕಾಮುಕರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು.
ಹೆಚ್ಚುತ್ತಿರುವ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯಗಳಿಂದ ಸ್ವಯಂ ರಕ್ಷಣೆ ಪಡೆಯಲು ಸೇವ್ ಮೈ ಸಿಸ್ಟರ್ ಟ್ರಸ್ಟ್ ಇಂತಹ ನೂತನ ರಕ್ಷಣಾ ಪರಿಕಲ್ಪನೆಯೊಂದಿಗೆ ಈ ಉಂಗುರ ಪರಿಚಯಿಸಿದೆ. ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ, ನಿವೃತ್ತ ಡಿಜಿಪಿ ಶಂಕರ ಬಿದರಿ ಮತ್ತು ನಟಿ ತಾರಾ ಅವರು ಶನಿವಾರ ಇದನ್ನು ಬಿಡುಗಡೆ ಮಾಡಿದ್ದಾರೆ.
ಉಂಗುರ ಬಿಡುಗಡೆ ಮಾಡಿ ಮಾತನಾಡಿದ ತಾರಾ, ನಾನಾ ರೀತಿಯಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಹೆಣ್ಣಿಗೆ ಸಮಾಜವೇ ರಕ್ಷಣೆಯಾಗಿ ನಿಲ್ಲುವಂತಾಗಬೇಕು. ಹೊಸದಿಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿರುವುದು ಶ್ಲಾಘನೀಯ ಎಂದರು.
ಈ ಉಂಗುರದಲ್ಲಿ ರಾಸಾಯನಿಕ ತುಂಬಿದ ಟ್ಯಾಂಕ್ ಹಾಗೂ ಸಣ್ಣ ಸೂಜಿ ಇದ್ದು, ಅದನ್ನು ಕಾಮಣ್ಣರಿಗೆ ಚುಚ್ಚಿದರೆ ಅವರು ನೋವು, ತುರಿಕೆ ಹಾಗೂ ಉರಿಯಿಂದ ಒದ್ದಾಡುತ್ತಾರೆ. ಈ ಉಂಗುರದ ಬೆಲೆ 1999 ರೂ. ಆಗಿದೆ.

ಉಂಗುರ ಹೇಗಿದೆ?
ಕಿರಿದಾದ ಟ್ಯಾಂಕ್, ಸಣ್ಣ ಸೂಜಿ, ಪಂಪ್, ಎರಡು ಕೀಲಿಗಳನ್ನು ಉಂಗುರ ಹೊಂದಿದ್ದು, ಇದರಲ್ಲಿನ ಕಿರಿದಾದ ಟ್ಯಾಂಕ್‌ನಲ್ಲಿ ಕ್ಯಾಪ್ಸಸಿಸ್ ಎಂಬ ರಾಸಾಯನಿಕವಿರುತ್ತದೆ. ದೌರ್ಜನ್ಯ ಎಸಗಲು ಯತ್ನಿಸಿದ ವ್ಯಕ್ತಿಯ ದೇಹಕ್ಕೆ ರಾಸಾಯನಿಕ ಚುಚ್ಚಲು ಅನುವಾಗುವಂತೆ ಚಿಕ್ಕ ಪಂಪ್ ಹಾಗೂ ಸೂಜಿ ಅಳವಡಿಸಲಾಗಿದೆ.

ಸೇವ್ ಮೈ ಸಿಸ್ಟರ್ ಟ್ರಸ್ಟ್ ಕಾರ್ಯ
ಹೆಚ್ಚುತ್ತಿರುವ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯಗಳಿಂದ ಸ್ವಯಂ ರಕ್ಷಣೆ ಪಡೆಯಲು ಸೇವ್ ಮೈ ಸಿಸ್ಟರ್ ಟ್ರಸ್ಟ್ ಈ ಉಂಗುರವನ್ನು ಪರಿಚಯಿಸಿದೆ ಎಂದು ಟ್ರಸ್ಟ್ ಅಧ್ಯಕ್ಷ ಇಮ್ರಾನ್‌ಖಾನ್ ಹೇಳಿದ್ದಾರೆ.

ದುರ್ಬಳಕೆ ಅಸಾಧ್ಯ
ಪ್ರತಿ ಉಂಗುರಕ್ಕೂ ಆರ್ಎಫ್ಐಡಿ ಟ್ಯಾಗ್ ಇದ್ದು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಇಮ್ರಾನ್ ಖಾನ್ ಮಾಹಿತಿ ನೀಡಿದ್ದಾರೆ. ಒಂದು ಉಂಗುರವನ್ನು ಐದು ಮಂದಿಗೆ ಚುಚ್ಚಬಹುದು.

ಸ್ವಯಂ ರಕ್ಷಣೆ ಸಾಧ್ಯ
ಈ ಉಂಗುರವನ್ನು ಬಳಸುವ ಮಹಿಳೆಯರು ಎರಡು ಕೀಲಿಗಳನ್ನು ತೆಗೆಯುವ ಮೂಲಕ ಸ್ವಯಂ ರಕ್ಷಣೆಗೆ ಅಣಿಯಾಗಬಹುದು. ಉಂಗುರದಲ್ಲಿನ ರಾಸಾಯನಿಕ ಅತಿಯಾದ ನೋವು, ತುರಿಕೆ ಹಾಗೂ ಉರಿಯನ್ನು ಉಂಟು ಮಾಡುತ್ತದೆ. ಈ ಉಂಗುರವನ್ನು ನಾಶ ಮಾಡುವುದು ಕಷ್ಟ ಸಾಧ್ಯ.

ಬೆಲೆ ಎಷ್ಟು?
ಉಂಗುರದಿಂದಲೇ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಸಾಧ್ಯವಿಲ್ಲ. ಹೀಗಾಗಿ, ಟ್ರಸ್ಟ್ ಆರು ಸಾವಿರ ವಕೀಲರನ್ನು ನೇಮಿಸಿ ಮಹಿಳೆಯರಿಗೆ ಉಚಿತ ಕಾನೂನು ಸೇವೆ ನೀಡಲಿದೆ.ಮಹಿಳಾ ಸೇವಾ ಅಭಿಯಾನವನ್ನೂ ಪ್ರಾರಂಭಿಸಲಿದ್ದು, ಇದರಲ್ಲಿ ಭಾಗವಹಿಸುವವರಿಗೆ ಉಂಗುರವನ್ನು ಉಚಿತವಾಗಿ ನೀಡಲಾಗುತ್ತದೆ. ಕೂಡಲೇ ಉಂಗುರ ಬೇಕಿದ್ದರೆ 1,999 ರೂ. ಪಾವತಿಸಬೇಕು. ಹೆಚ್ಚಿನ ವಿವರಗಳಿಗೆ ಸೇವ್ ಮೈ ಸಿಸ್ಟರ್ ದೂ. ಸಂಖ್ಯೆ 080-64500112 ಗೆ ಕರೆ ಮಾಡಬಹುದು.












Click it and Unblock the Notifications