ಬೆಂಗಳೂರಿನಲ್ಲಿ ಈ ನಿಯಮ ಉಲ್ಲಂಘಿಸಿರುವ ಆಸ್ತಿಗಳ ಮೇಲೆ ಕ್ರಮ: ಜಿಬಿಎ ಕಮಿಷನರ್ ಸೂಚನೆ!
ಬೆಂಗಳೂರಿನಲ್ಲಿ ನಿಯಮ ಉಲ್ಲಂಘನೆ ಮಾಡಿ ಹಾಗೂ ನಿಯಮ ಮೀರಿ ಮಳಿಗೆಗಳನ್ನು ಬಾಡಿಗೆ ನೀಡಿರುವವರು ಸೇರಿದಂತೆ ಕೆಲವು ಆಸ್ತಿದಾರರಿಗೆ ಬಿಸಿ ಮುಟ್ಟಿಸುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ.
ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವರ್ಚುವಲ್ ಮೂಲಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದ 5 ನಗರ ಪಾಲಿಕೆಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್/ಬ್ಯಾನರ್ ಗಳನ್ನು ತೆರವುಗೊಳಿಸಿ, ಅಳವಡಿಸಿರುವವರ ಮೇಲೆ ದೂರು ದಾಖಲಿಸಿ ದಂಡ ವಿಧಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಮಿಷನರ್ ಮಹೇಶ್ವರ್ ರಾವ್ ಅವರು ಸೂಚನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಆಸ್ತಿದಾರರಿಗೂ ಕೆಲವೊಂದು ಪ್ರಮುಖ ಸೂಚನೆಗಳನ್ನು ಕೊಡಲಾಗಿದೆ.

ಜಿಬಿಎ ವ್ಯಾಪ್ತಿಯಲ್ಲಿ ಅನಧಿಕೃತ ಫೆಕ್ಸ್ ಗಳನ್ನು ತೆರವುಗೊಳಿಸಿ ದಂಡ ವಿಧಿಸುವ ಜೊತೆಗೆ ದೂರು ದಾಖಲಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 5 ನಗರ ಪಾಲಿಕೆಗಳಲ್ಲಿ ಬರುವ 10 ವಲಯಗಳಲ್ಲಿ ಒಂದು ವಲಯದಲ್ಲಿ 50 ಕೆಟ್ಟ ಪರಿಸ್ಥಿತಿಯಲ್ಲಿರುವ ಪಾದಚಾರಿ ಸ್ಥಳಗಳನ್ನು ಗುರುತಿಸಿ ಅವುಗಳನ್ನು ದುರಸ್ಥಿಪಡಿಸಿ, ಸರಿಪಡಿಸಿರುವ ಸ್ಥಳಗಳ ಪಟ್ಟಿ ಸಿದ್ದಪಡಿಸಿ ವರದಿ ನೀಡಲು ಸೂಚನೆ ನೀಡಿದ್ದಾರೆ.
ಬೆಂಗಳೂರಿನ ಆಸ್ತಿದಾರರಿಗೆ ಪ್ರಮುಖ ಎಚ್ಚರಿಕೆ
ಇನ್ನು ಬೆಂಗಳೂರಿನ ಆಸ್ತಿದಾರರಿಗೆ ಇದೇ ಸಂದರ್ಭದಲ್ಲಿ ಪ್ರಮುಖ ಎಚ್ಚರಿಕೆಯನ್ನೂ ಮಹೇಶ್ವರ್ ರಾವ್ ಅವರು ನೀಡಿದ್ದಾರೆ. ಕಟ್ಟಡಗಳ ಬೇಸ್ಮೆಂಟ್ ಗಳಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ವಾಣಿಜ್ಯ ಕಾರ್ಯ ನಡೆಸುವವರ ಮೇಲೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಅಲ್ಲದೇ ಬೆಂಗಳೂರಿನ ಪೇಯಿಂಗ್ ಗೆಸ್ಟ್ ಕಟ್ಟಡಗಳಲ್ಲಿ ತ್ಯಾಜ್ಯ ಹಾಕಲು ಕಡ್ಡಾಯವಾಗಿ ಹಸಿ ಹಾಗೂ ಒಣ ತ್ಯಾಜ್ಯಕ್ಕೆ ಪ್ರತ್ಯೇಕವಾದ ಬಿನ್‌ಗಳನ್ನು ಬಳಸಲು ಕ್ರಮವಹಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಂದುವರಿದು ಟೋಯಿಂಗ್ ಯಂತ್ರಗಳನ್ನು ತ್ವರಿತವಾಗಿ ಖರೀದಿಸುವುದು, ಸುರಕ್ಷಾ 75 ಜಂಕ್ಷನ್‌ಗಳನ್ನು ಕಾಲಮಿತಿಯೊಳಗಾಗಿ ಅಭಿವೃದ್ಧಿಪಡಿಸಿ, ಸುಪ್ರೀಂ ಕೋರ್ಟ್‌ನ ಆದೇಶದಂತೆ ಬೀದಿ ನಾಯಿಗಳಿಗೆ ಆಯಾ ನಗರ ಪಾಲಿಕೆಗಳಲ್ಲಿ ಶೆಲ್ಟರ್ ಗಳನ್ನು ಗುರುತಿಸಿ. ಬೀದಿ ದೀಪಗಳನ್ನು ಅಳವಡಿಸಿ ಸರಿಯಾಗಿ ನಿರ್ವಹಣೆ ಮಾಡಲು ಕ್ರಮವಹಿಸಿ ಎಂದು ಸೂಚಿಸಿದ್ದಾರೆ.
ಪಾದಚಾರಿ ಮಾರ್ಗಗಳನ್ನು ಸರಿಯಾಗಿ ನಿರ್ವಹಣೆ ಮಾಡಿ ಸ್ವಚ್ಛತೆಯಿಂದಿರುವಂತೆ ನೋಡಿಕೊಳ್ಳಿ. ಆಯಾ ನಗರ ಪಾಲಿಕೆಗಳಲ್ಲಿ ವಿಧಾನಸಭಾ ಕ್ಷೇತ್ರಕ್ಕೊಂದು ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಾಣಕ್ಕೆ ಸ್ಥಳಗಳನ್ನು ಗುರುತಿಸಿ ಕಾಮಗಾರಿ ಪ್ರಾರಂಭಿಸಬೇಕು ಹಾಗೂ ನಗರದಲ್ಲಿ ರಸ್ತೆ ಬದಿ, ಖಾಲಿ ಜಾಗದಲ್ಲಿ ಕಸ ಬಿಸಾಡುವವರನ್ನು ಗುರುತಿಸಿ ಅವರಿಗೆ ದಂಡ ವಿಧಿಸುವ ಕೆಲಸ ಮಾಡಬೇಕು. ಹೆಚ್ಚು ಕಸ ಬಿಸಾಡುವ ಹಾಗೂ ಕೊಳಗೇರಿ ಪ್ರದೇಶಗಳ ಬಳಿ ಕಸದ ಕಿಯೋಸ್ಕ್ ಅಳವಡಿಸಲು ಸೂಚನೆ ಕೊಡಲಾಗಿದೆ.
ಈ ವೇಳೆ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಡಿ.ಎಸ್, ರಮೇಶ್ ಕೆ.ಎನ್, ಕರೀಗೌಡ, ಹೆಚ್ಚುವರಿ ಆಯುಕ್ತರಾದ ದಲ್ಜಿತ್ ಕುಮಾರ್, ದಿಗ್ವಿಜಯ್ ಬೋಡ್ಕೆ, ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರರು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications