ಲೋಕಾಯುಕ್ತರಿಗೆ ಚಾಕು ಇರಿದಿದ್ದ ಆರೋಪಿಗೆ ಮಂಪರು ಪರೀಕ್ಷೆ
ಬೆಂಗಳೂರು, ಜುಲೈ 11: ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರಿಗೆ ಚೂರಿ ಇರಿದಿದ್ದ ಆರೋಪಿ ತೇಜರಾಜ ಶರ್ಮನನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಆರೋಪಿ ತೇಜರಾಜ ಶರ್ಮ ಮಾರ್ಚ್ 7ರಂದು ಲೋಕಾಯುಕ್ತ ಕಚೇರಿಯಲ್ಲಿಯೇ ನ್ಯಾಯಮೂರ್ತಿ ವೀಶ್ವನಾಥ ಶೆಟ್ಟಿ ಅವರಿಗೆ ಚಾಕು ಇರಿದಿದ್ದ. ವಿಶ್ವನಾಥ ಶೆಟ್ಟಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾದರು.
ಆರೋಪಿಯನ್ನು ಕೂಡಲೇ ವಶಕ್ಕೆ ಪಡೆದಿದ್ದ ಪೊಲೀಸರು, ಕೆಲವು ದಿನಗಳ ಹಿಂದೆಯಷ್ಟೆ ನ್ಯಾಯಾಲಯಕ್ಕೆ 60 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಕ್ಕಾಗಿ ತಾನು ಈ ಕೃತ್ಯ ಎಸಗಿದ್ದಾಗಿ ಆರೋಪಿ ಹೇಳಿದ್ದಾನೆ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿತ್ತು.

ದೋಷರೋಪ ಪಟ್ಟಿಗೆ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರು ಆರೋಪಿ ಹೇಳಿದ್ದನ್ನಷ್ಟೆ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆತನ ಹಿಂದೆ ಇರಬಹುದಾದ ಕಾಣದ ಕೈಗಳ ಬಗ್ಗೆ ತನಿಖೆ ಮಾಡಿಲ್ಲ ಎಂದಿದ್ದರು.
ಇದರಿಂದಾಗಿ ಹೆಚ್ಚಿನ ತನಿಖೆ ನಡೆಸಲೆಂದು ಆರೋಪಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ನ್ಯಾಯಾಲಯದಿಂದ ಅನುಮತಿ ಪಡೆದಿದ್ದು, ಆತನನ್ನು ಗುಜರಾತ್‌ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕೊಂಡೊಯ್ಯಲಾಗಿದೆ.












Click it and Unblock the Notifications