ವೈರಲ್ ವಿಡಿಯೋ: ಸಂಚಾರ ಪೊಲೀಸರ ದಂಡ ಪ್ರಯೋಗಕ್ಕೆ ಮುಗ್ಧ ಯುವಕನ ಪ್ರಾಣವೇ ಹೋಯ್ತು!
ಬೆಂಗಳೂರು, ಡಿ.12: ಸಂಚಾರ ಪೊಲೀಸರ ದಂಡ ವಸೂಲಿ ದಾಹಕ್ಕೆ ಮುಗ್ಧ ಯುವಕನೊಬ್ಬ ಸ್ವಯಂ ಅಪಘಾತಕ್ಕೀಡಾಗಿ ತನ್ನ ಜೀವ ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅಪಘಾತದ ಭೀಕರತೆ ಬೆಚ್ಚಿ ಬೀಳಿಸುತ್ತದೆ. ಸಂಚಾರ ಪೊಲೀಸರು ದಂಡ ವಸೂಲಿ ವಿಚಾರದಲ್ಲಿ ಜನರಲ್ಲಿ ಎಷ್ಟು ಭೀತಿ ಹುಟ್ಟಿಸಿದ್ದಾರೆ ಎಂಬುದನ್ನು ಈ ಪ್ರಕರಣ ಸಾಕ್ಷೀಕರಿಸುತ್ತಿದೆ. ಸಂಚಾರ ಪೊಲೀಸರ ಬಗ್ಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.
ಘಟನೆ ಹಿನ್ನೆಲೆ: ಶನಿವಾರದಂದು ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದರು. ಅತ್ತಿಗುಪ್ಪೆ ಸಮೀಪ ವಿಜಯನಗರ ಸಂಚಾರ ಠಾಣೆ ಪೊಲೀಸರು ನಿಯಮ ಉಲ್ಲಂಘನೆ ಮಾಡುವರ ವಿರುದ್ಧ ದಂಡ ವಸೂಲಿ ಮಾಡಲು ನಿಂತಿದ್ದರು. ಈ ವೇಳೆ ಕೌಶಿಕ್ ಮತ್ತು ಆತನ ಸ್ನೇಹಿತ ಹೆಲ್ಮೆಟ್ ಇಲ್ಲದೇ ಬೈಕ್‌ನಲ್ಲಿ ಬರುತ್ತಿದ್ದರು. ಹೆಲ್ಮೆಟ್ ಇಲ್ಲದ ಯುವಕರನ್ನು ನೋಡಿದ ಸಂಚಾರ ಪೊಲೀಸರು ಬೈಕ್ ತಡೆದು ದಂಡ ವಸೂಲಿಗೆ ಪ್ರಯತ್ನ ಮಾಡಿದ್ದಾರೆ.
ವಿಜಯನಗರ ಸಂಚಾರ ಪೊಲೀಸರ ದಂಡ ಪ್ರಯೋಗಕ್ಕೆ ಹೆದರಿ ಬೈಕ್ ಸವಾರ ಯು ಟರ್ನ್ ತೆಗೆದುಕೊಳ್ಳುವ ವೇಳೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ತೀವ್ರಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.#Bengaluru #BengaluruNews pic.twitter.com/AonyEE7d0J
— oneindiakannada (@OneindiaKannada) December 12, 2021
ಪೊಲೀಸರ ಚಲನವಲನ ಗಮನಿಸಿದ ಕೌಶಿಕ್ ಸ್ನೇಹಿತ ದ್ವಿಚಕ್ರ ವಾಹನವನ್ನು ಯು ಟರ್ನ್ ಮಾಡಿ ವಾಪಸು ತೆರಳಲು ಯತ್ನಿಸಿದ್ದಾನೆ. ಈ ವೇಳೆ ಆಯತಪ್ಪಿದ ದ್ವಿಚಕ್ರ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ವಾಹನ ನೂರು ಮೀಟರ್ ರಸ್ತೆಯಲ್ಲಿಯೇ ಜಾರಿಕೊಂಡು ಹೋಗಿದೆ. ಹಿಂಬದಿ ಕೂತಿದ್ದ ಕೌಶಿಕ್ ತಲೆಗೆ ತೀವ್ರತರ ಪೆಟ್ಟಾಗಿದೆ. ಆತನನ್ನು ಮೇಲಕ್ಕೆ ಎತ್ತಿ ಉಪಚರಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಲೆಗೆ ತೀವ್ರತರ ಪೆಟ್ಟಾಗಿದ್ದ ಕೌಶಿಕ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಪೋಷಕರ ಆರೋಪ
ಸಂಚಾರ ಪೊಲೀಸರು ಅಟ್ಟಾಡಿಸಿಕೊಂಡು ಹೋಗಿದ್ದರಿಂದಲೇ ಕೌಶಿಕ್ ಸಾವನ್ನಪ್ಪಿದ್ದಾನೆ. ನಮ್ಮ ಮಗನ ಸಾವಿಗೆ ಪೊಲೀಸರೇ ಕಾರಣ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ. ಪೊಲೀಸರು ವಶಕ್ಕೆ ಪಡೆದು ದಂಡ ವಿಧಿಸುತ್ತಾರೆ ಎಂಬ ಭಯದಲ್ಲಿಯೇ ಅವಘಡ ಸಂಭವಿಸಿದೆ ಎಂಬು ದೂರಿದ್ದಾರೆ.

ಸಿಸಿಟಿವಿ ದೃಶ್ಯ ವೈರಲ್
ಇನ್ನು ಅಪಘಾತಕ್ಕೆ ಒಳಗಾಗಿ ಜಾರಿಕೊಂಡು ಬರುವ ಬೈಕ್‌ನ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೌಶಿಕ್ ತಲೆಗೆ ಪೆಟ್ಟಾಗಿ ಕುಸಿದು ಬಿದ್ದಿರುವುದು ಕಾಣುತ್ತಿದೆ. ಈ ವಿಡಿಯೋ ನೋಡಿ ಸಂಚಾರ ಪೊಲೀಸರ ದಂಡದ ವರ್ತನೆ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದರವರು ಧೈರ್ಯವಾಗಿ ದಂಡ ಕಟ್ಟುವಂತುವ ವಾತಾವರಣ ಇರಬೇಕು.

ಮರದ ಮರೆಯಲ್ಲಿ ನಿಂತು ದಂಡ ವಿಧಿಸಿ ಭೀತಿ
ಸಂಚಾರ ಪೊಲೀಸರು ಮರದ ಮರೆಯಲ್ಲಿ ನಿಂತು ದಂಡ ವಿಧಿಸಿ ಭೀತಿ ಹುಟ್ಟಿಸುವುದು, ನಿಯಮ ಉಲ್ಲಂಘನೆ ಮಾಡಿದವರನ್ನು ಅಟ್ಟಾಡಿಸಿಕೊಂಡು ಹೋಗಿ ಹಿಡಿಯುವ ಸಂಪ್ರದಾಯ ಮೊದಲಿನಿಂದಲೂ ಇದೆ. ಇದರಿಂದ ಅನೇಕರು ತಮ್ಮ ಜೀವಕ್ಕೆ ಅಪಾಯ ತಂದೊಡ್ಡಿಕೊಂಡಿದ್ದಾರೆ. ಸಂಚಾರ ಪೊಲೀಸರು ದಂಡ ವಿಧಿಸುವ ಮೊದಲು ಅವರಿಗೆ ಮೊದಲು ಶಿಸ್ತು ಕಲಿಸಬೇಕು. ಅವರ ವರ್ತನೆಗೆ ಇದೇ ರೀತಿ ಅನೇಕರು ಬಿದ್ದು ಜೀವಕ್ಕೆ ತೊಂದರೆ ಮಾಡಿಕೊಂಡಿದ್ದಾರೆ. ಈ ಕುರಿತು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರೇ ಉತ್ತರಿಸಬೇಕು ಎಂಬ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದೆ.

ಒಂದೆರಡು ದುರಂತವಲ್ಲ
ರಾಜಧಾನಿಯಲ್ಲಿ ಸುಗಮ ಸಂಚಾರಕ್ಕೆ ನಿಯಮಗಳ ಪಾಲನೆ, ನಿಯಂತ್ರಣ ಅಗತ್ಯ. ಸಂಚಾರ ಪೊಲೀಸರು ಅಗತ್ಯ. ಆದರೆ ಸಂಚಾರ ನಿಯಮ ಉಲ್ಲಂಘನೆ ಮಾಡಿದವರನ್ನೇ ದೊಡ್ಡ ಅಪರಾಧಿಗಳಂತೆ ಕಾಣುವ ಸಂಚಾರ ಪೊಲೀಸರ ಮನಸ್ಥಿತಿ ಬದಲಾವಣೆ ಆಗಬೇಕು. ಸಂಚಾರ ಪೊಲೀಸರ ಬಗ್ಗೆ ಭೀತಿ ಇದ್ದರೆ ಮಾತ್ರ ಈ ರೀತಿ ಅವಘಡಗಳು ಸಂಭವಿಸಲು ಕಾರಣ. ಇದೇ ರೀತಿ ಸಾಕಷ್ಟು ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿವೆ. ಇಷ್ಟಾಗಿಯೂ ಸಂಚಾರ ಪೊಲೀಸರ ಮನಸ್ಥಿತಿ ಬದಲಾವಣೆ ಮಾಡಿಕೊಳ್ಳದಿರುವುದು ಬೇಸರದ ಸಂಗತಿ. ಮನುಷ್ಯನ ಬದುಕಿಗಿಂತಲೂ ದಂಡವೇ ದೊಡ್ಡದಾ ಎನ್ನುವ ಪ್ರಜ್ಞೆ ಪೊಲೀಸರನ್ನು ಕಾಡುವುದಿಲ್ಲವೇ? ಈ ಕುರಿತು ನಾನು ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications