ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭ್ರಷ್ಟ ಬಿಜೆಪಿ ನಾಯಕರ ಆಸ್ತಿ ಹರಾಜು ಹಾಕಿ ಮಳೆ ಸಂತ್ರಸ್ತರಿಗೆ ಪರಿಹಾರ ನೀಡಿ: ಮೋಹನ್‌ ದಾಸರಿ

|
Google Oneindia Kannada News

ಬೆಂಗಳೂರು, ಮೇ 18: ಮಂಗಳವಾರ ರಾತ್ರಿ ಬೆಂಗಳೂರು ನಗರದಲ್ಲಿ ಸುರಿದ ಮಳೆ ಅವಾಂತರ ಸೃಷ್ಟಿ ಮಾಡಿದೆ. ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಟೀಕಿಸಿದರು.

ಬುಧವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ರಾಜ ಕಾಲುವೆ ಹೆಸರಿನಲ್ಲಿ ಬಿಜೆಪಿ ಸರ್ಕಾರವು ಸಾವಿರಾರು ಕೋಟಿ ರೂಪಾಯಿಯನ್ನು ಲೂಟಿ ಮಾಡಿದ ಪರಿಣಾಮ, ಜನರು ರಸ್ತೆಗಳಲ್ಲಿ ಓಡಾಡಲು ದೋಣಿಯನ್ನು ಬಳಸಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ತಗ್ಗು ಪ್ರದೇಶದಲ್ಲಿರುವ ಜನರು ಮಳೆಗಾಲ ಬಂತೆಂದರೆ ಜೀವ ಕೈಯಲ್ಲಿಟ್ಟುಕೊಂಡು ಜೀವನ ನಡೆಸುವಂತಾಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

"ತಾವಿದ್ದ ಸ್ಥಳದಲ್ಲಿ ನೀರು ತುಂಬಿಕೊಂಡಿದ್ದರಿಂದ ಮಂಗಳವಾರ ರಾತ್ರಿ ಇಬ್ಬರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಗಿರುವ ಭ್ರಷ್ಟ ಬಿಜೆಪಿ ನಾಯಕರ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು, ಅದನ್ನು ಹರಾಜು ಹಾಕಿ, ಬಂದ ಹಣದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಬೇಕು" ಎಂದು ಆಗ್ರಹಿಸಿದರು.

AAP Slams BJP Governement For Bengaluru Flood

ರಾಜಕಾಲುವೆ ಒತ್ತುವರಿ ತೆರವಿಗೆ ಒತ್ತಾಯ; "ಸಿಲಿಕಾನ್‌ ಸಿಟಿಯಲ್ಲಿ ಸಣ್ಣ ಮಳೆಯಾದರೂ ಕಟ್ಟಡಗಳಿಗೆ ನೀರು ನುಗ್ಗಿ ಜಲಪ್ರಳಯವಾಗುವುದು ಸಾಮಾನ್ಯವಾಗಿದೆ. ರಾಜಕಾಲುವೆ ಒತ್ತುವರಿಯಾಗಿರುವುದೇ ಅವಾಂತರಕ್ಕೆ ಮುಖ್ಯ ಕಾರಣ" ಎಂದು ಆರೋಪಿಸಿದರು.

"2016 ರಿಂದಲೂ ರಾಜಕಾಲುವೆ ಒತ್ತುವರಿ ತೆರವು ಮಾಡುತ್ತಲೇ ಇದ್ದಾರೆ. 2626 ಕಟ್ಟಡಗಳ ಪೈಕಿ 1480 ಕಟ್ಟಡಗಳು ತೆರವಾಗಿದ್ದು, 714 ಕಟ್ಟಡಗಳ ತೆರವಿಗೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ರಾಜಕಾಲುವೆ ಮೇಲೆ ವಸತಿ ಮತ್ತು ವಾಣಿಜ್ಯ ಕಟ್ಟಡಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವುಗಳನ್ನು ತೆರವುಗೊಳಿಸಲು ಪಾಲಿಕೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ" ಎಂದು ಮೋಹನ್‌ ದಾಸರಿ ದೂರಿದರು.

AAP Slams BJP Governement For Bengaluru Flood

ಒತ್ತುವರಿ ತೆರವುಗೊಳಿಸಲು ಬಿಬಿಎಂಪಿ ವಿಳಂಬ; ರಾಜಕಾಲುವೆ ಒತ್ತುವರಿ ತೆರವು ಮಾಡುತ್ತೇವೆ ಎಂದು ಬಿಬಿಎಂಪಿ ಹೇಳಿತ್ತು. ಒತ್ತುವರಿ ಮಾಡಿ ನಿರ್ಮಿಸಿರುವ 714 ಕಟ್ಟಡಗಳ ಪಟ್ಟಿಯನ್ನು ಸಿದ್ಧಪಡಿಸಿತ್ತು. ಪೂರ್ವ ವಲಯದಲ್ಲಿ 110 ಕಟ್ಟಡ, ಪಶ್ಚಿಮ ವಲಯದಲ್ಲಿ 59, ದಕ್ಷಿಣ ವಲಯದಲ್ಲಿ 20, ಕೋರಮಂಗಲ ವ್ಯಾಲಿ ವಲಯದಲ್ಲಿ 3, ಯಲಹಂಕ ವಲಯದಲ್ಲಿ 103, ಮಹದೇವಪುರ ವಲಯದಲ್ಲಿ 184, ಬೊಮ್ಮನಹಳ್ಳಿ ವಲಯದಲ್ಲಿ 92, ಆರ್. ಆರ್. ನಗರ ವಲಯದಲ್ಲಿ 9 ಹಾಗೂ ದಾಸರಹಳ್ಳಿ ವಲಯದಲ್ಲಿ 134 ಕಟ್ಟಡಗಳನ್ನು ತೆರವು ಮಾಡಲು ಪಟ್ಟಿ ಮಾಡಲಾಗಿದೆ. ಆದರೆ ಇರುವರೆಗೂ ಕ್ರಮ ಮಾತ್ರ ಕೈಗೊಂಡಿಲ್ಲ ಎಂದು ಎಎಪಿ ಆರೋಪಿಸಿದೆ.

ನಗರದ ಬಹುತೇಕ ಆಸ್ಪತ್ರೆಗಳು, ಕಮರ್ಷಿಯಲ್ ಬಿಲ್ಡಿಂಗ್ಗಳು, ಉದ್ಯಮಿಗಳು, ರಾಜಕಾರಿಣಿಗಳು ಸೇರಿದಂತೆ ಹಲವು ಪ್ರಭಾವಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ. ಇದರ ತೆರವು ಕಾರ್ಯಾಚಾರಣೆ ಮಾತ್ರ ನಡೆದಿಲ್ಲ. ರಾಜಾಜಿನಗರ, ಕೆ. ಆರ್. ಪುರ, ಕೆಂಗೇರಿ, ಆರ್. ಆರ್. ನಗರ, ಹೆಬ್ಬಾಳ, ಯಲಹಂಕ, ಲಗ್ಗೆರೆ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಜಕಾಲುವೆಗಳ ಒತ್ತುವರಿ ಆಗಿದೆ. ಪಾಲಿಕೆ ಅಧಿಕಾರಿಗಳನ್ನು ಕೇಳಿದರೆ, ಸಮೀಕ್ಷೆ ಮಾಡುತ್ತಿದ್ದೇವೆ, ಆದಷ್ಟು ಬೇಗ ವರದಿ ಸಿದ್ಧವಾಗುತ್ತದೆ ಎನ್ನುತ್ತಾರೆ. ಆದರೆ ಬಿಬಿಎಂಪಿ ಮುಖ್ಯ ಕಚೇರಿಯ ಕೂಗಳತೆ ದೂರದಲ್ಲಿರುವ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಕೂಡ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಎಎಪಿ ದೂರಿದೆ.

ನ್ಯಾಯಮಂಡಳಿ ಆದೇಶಕ್ಕೂ ಬೆಲೆ ಇಲ್ಲ; ರಾಜಕಾಲುವೆ ಮೀಸಲು ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ನಿರ್ಮಾಣವಾಗಿರುವ ಅಪಾರ್ಟ್‍ಮೆಂಟ್‍ಗಳನ್ನು ತೆರವು ಮಾಡುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯೂ ಆದೇಶ ನೀಡಿದೆ. ಆದರೆ ತೆರವು ಕಾರ್ಯಾಚರಣೆ ಮಾತ್ರ ಮುಂದುವರೆದಿಲ್ಲ. ಈ ಬಾರಿಯೂ ಬಿಬಿಎಂಪಿಯು ಜೋರು ಮಳೆ ಬಿದ್ದಾಗ ಪ್ರವಾಹ ಪರಿಸ್ಥಿತಿ ಉಂಟಾಗುವ 209 ಪ್ರದೇಶಗಳನ್ನು ಗುರುತಿಸಿದೆ. ಪ್ರತಿ ವರ್ಷವೂ ಮಳೆಯಿಂದ ಕೋಟ್ಯಂತರ ರೂ. ಆಸ್ತಿಪಾಸ್ತಿ ನಷ್ಟವಾಗುತ್ತಿದೆ. ಕೆಲವರು ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಇಷ್ಟಾದರೂ ಪಾಲಿಕೆಯು ಯುದ್ಧ ಕಾಲದಲ್ಲಿ ಶಸ್ತ್ರಾಸ್ತ್ರ ಅಭ್ಯಾಸ ಎಂಬಂತೆ ಮಳೆಗಾಲ ಶುರುವಾದ ಬಳಿಕ ಕೆಲವೊಂದು ಕಾಮಗಾರಿಗಳನ್ನು ಕೈಗೊಂಡು ಜನರ ಕಣ್ಣೊರೆಸುವ ತಂತ್ರವನ್ನು ಅನುಸರಿಸುತ್ತಲೇ ಬರುತ್ತಿದೆ" ಎಂದು ಮೋಹನ್‌ ದಾಸರಿ ಹೇಳಿದರು.

English summary
BJP govermnent and BBMP delaying in encroachment clearance drive in Bengaluru. This is the main reason for the flood alleged AAP leader Mohan Dasari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X