ಬೆಂಗಳೂರು: 15 ವರ್ಷಗಳಿಂದ ನೆನೆಗುದಿಗೆ ಬಿದ್ದ 'ವೆಲ್ಲಾರ್ ಜಂಕ್ಷನ್' ಕಾಮಗಾರಿ ಆರಂಭಕ್ಕೆ ಹೆಚ್ಚಾಯ್ತು ಒತ್ತಡ
ಬೆಂಗಳೂರು, ಜುಲೈ 16: ಬೆಳೆಯುತ್ತಿರುವ ರಾಜಧಾನಿ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ, ಜನದಟ್ಟಣೆ, ಟ್ರಾಫಿಕ್ ಜಾಮ್ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಪರಿಹಾರಾರ್ಥವಾಗಿ ರಾಜ್ಯ ಸರ್ಕಾರ ರೂಪಿಸುವ ಯೋಜನೆಗಳು ಕೆಲವೊಂದು ಆರಂಭವಾಗುವುದೇ ಇಲ್ಲ. ಆರಂಭವಾದರೂ ಗಡುವಿನೊಳಗೆ ಪೂರ್ಣಗೊಳ್ಳುವುದಿಲ್ಲ.
ಸದ್ಯ ಇದೇ ವಿಚಾರವಾಗಿ ಬೆಂಗಳೂರಿನಲ್ಲಿ ಒಂದೂವರೆಗೆ ದಶಕದಿಂದ ನೆನೆಗುದಿಗೆ ಬಿದ್ದ ಯೋಜನೆಯ ಕಾಮಗಾರಿಯನ್ನು ಪುನಾರಂಭಿಸಬೇಕು ಎಂಬ ಒತ್ತಾಯ ಹೆಚ್ಚಾಗುತ್ತಿದೆ.

ಹೌದು, ಬೆಂಗಳೂರಿನಲ್ಲಿ ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ 'ವೆಲ್ಲಾರ್ ಜಂಕ್ಷನ್' ಹಾಗೂ ವೈಟ್ ಫೀಲ್ಡ್ ವರೆಗಿನ ಸಿಗ್ನಲ್ ಫ್ರೀ ಕಾರಿಡಾರ್ ಕಾಮಗಾರಿ ಯನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮಂಗಳವಾರ ಅದೇ ಜಂಕ್ಷನ್ ನಲ್ಲಿ ಪ್ರತಿಭಟಿಸಿದರು.
ಯೋಜನೆಯಿಂದ ವಾಹನ ಸವಾರರಿಗೆ ಅನುಕೂಲ
ನಗರದ ಹಳೆ ಏರ್ ಪೋರ್ಟ್ ರಸ್ತೆಯ ಮಣಿಪಾಲ ಆಸ್ಪತ್ರೆಯ ಜಂಕ್ಷನ್ ಸುತ್ತಮುತ್ತಲಿನ ಜನರು ಸೇರಿದಂತೆ ಅನೇಕ ವಾಹನ ಸವಾರರಿಗೆ ಈ ಕಾಮಗಾರಿಯಿಂದ ಅನುಕೂಲವಾಗುತ್ತದೆ. ಆದ್ದರಿಂದ ಶೀಘ್ರವೇ ಕಾಮಗಾರಿ ಆರಂಭಿಸಬೇಕು ಎಂದು ಎಎಪಿ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಜಗದೀಶ್ ಬಾಬು ತಿಳಿಸಿದರು.
15 ವರ್ಷಗಳ ಹಿಂದೆಯೇ ಈ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಆದರೆ ಸರ್ಕಾರವು ಈ ರಸ್ತೆಯಲ್ಲಿ ದೇಶದ ಪ್ರಧಾನ ಮಂತ್ರಿಗಳು, ಪ್ರಮುಖ ಮಂತ್ರಿಗಳು ಸೇರಿದಂತೆ ಅನೇಕ ಪ್ರತಿಷ್ಠಿತ ರಾಜಕಾರಣಿಗಳು ಓಡಾಡುತ್ತಾರೆ ಎಂಬ ಕಾರಣ ನೀಡಿ ಈ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ.
ಇಚ್ಛಾಶಕ್ತಿ ಇಲ್ಲದ ರಾಜ್ಯ ಸರ್ಕಾರ
ಸರ್ಕಾರಕ್ಕೆ ಪ್ರಭಾವಿ ರಾಜಕಾರಣಿಗಳ ಹಿತಾಸಕ್ತಿಯೇ ಮುಖ್ಯವಾಗಿದೆಯೇ ಹೊರತು, ಪ್ರತಿನಿತ್ಯ ಸಂಚಾರ ಸಮಸ್ಯೆಯಿಂದ ಯಾತನೆ ಅನುಭವಿಸುತ್ತಿರುವ ಲಕ್ಷಾಂತರ ಪ್ರಯಾಣಿಕರ ಸಮಸ್ಯೆಯನ್ನು ಬಗೆಹರಿಸುವ ಇಚ್ಛಾಶಕ್ತಿಯೇ ಇಲ್ಲದಾಗಿದೆ ಎಂದು ಅವರು ಆರೋಪಿಸಿದರು.
ಈ ಭಾಗದಲ್ಲಿ ಎಚ್ಎಎಲ್, ಎನ್ಎಎಲ್ ಹಾಗೂ ಡಿಆರ್ ಡಿಓ ದಂತಹ ರಕ್ಷಣಾ ಸಂಸ್ಥೆಗಳ ಸ್ಥಾಪನೆಯಿಂದ ಬೆಂಗಳೂರಿಗೆ ಬ್ರಾಂಡ್ ತಂದಿರುವ ಹಿರಿಮೆ ಈ ರಸ್ತೆಗೆ ಇದೆ. ಸದಾ 'ಬ್ರ್ಯಾಂಡ್ ಬೆಂಗಳೂರು' ಎಂದು ಮಾತನಾಡುವ ಉಪ ಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್ ಈ ಕಡೆ ಗಮನಹರಿಸಬೇಕು. ಕೂಡಲೇ ಈ ಭಾಗದ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವಂತೆ ಅವರು ಒತ್ತಾಯಿಸಿದರು.
ಪ್ರತಿಭಟನೆ ವೇಳೆ ಎಎಪಿ ಮುಖಂಡರುಗಳಾದ ಅನಿಲ್ ನಾಚಪ್ಪ, ಲೋಕೇಶ್ ಕುಮಾರ್, ಭಾನುಪ್ರಿಯ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.












Click it and Unblock the Notifications