Rajajinagar: ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ವಿರುದ್ಧ ಇಡಿ ತನಿಖೆಗೆ ಎಎಪಿ ಆಗ್ರಹ
ಬೆಂಗಳೂರು, ಮೇ 04: ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಬೆಂಗಳೂರಿನ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ಹಣ ವರ್ಗಾವಣೆ ಅವ್ಯಾಹತವಾಗಿ ನಡೆಯುತ್ತಿದೆ. ಆದ್ದರಿಂದ ಇಲ್ಲಿನ ಅಭ್ಯರ್ಥಿ ವಿರುದ್ಧ ಜಾರಿ ನಿರ್ದೇಶನಾಲಯ (ED) ಶೀಘ್ರವೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಬೆಂಗಳೂರಿನಲ್ಲಿ ಆಮ್ ಆದ್ಮಿ ಪಾರ್ಟಿಯ ನಗರಾಧ್ಯಕ್ಷ ಡಾ. ಸತೀಶ್ ನೇತೃತ್ವದ ನಿಯೋಗವು ಬುಧವಾರ ಚುನಾವಣಾ ಆಯೋಗಕ್ಕೆ ಈ ಕುರಿತು ದೂರು ನೀಡಿದರು. ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜಾಜಿನಗರದಲ್ಲಿ ಚುನಾವಣಾ ಅಕ್ರಮ ಅವ್ಯಾಹತವಾಗಿ ನಡೆಯುತ್ತಿದೆ. ಭಾರೀ ಪ್ರಮಾಣದ ಅಕ್ರಮ ಹಣವು ವರ್ಗಾವಣೆಯಾಗುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ವಿರುದ್ಧ ಆರೋಪಿಸಿದರು.

ರಾಜರಾಜಿನಗರದಲ್ಲಿ ಚುನಾವಣಾ ನೀತಿ ಸಂಹಿತೆ ಕಾಯಿದೆ 1961, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಮತ್ತು ಜನಪ್ರತಿನಿಧಿಗಳ ಕಾಯಿದೆ 1951 ಮುಂತಾದ ಕಾನೂನುಗಳ ಉಲ್ಲಂಘನೆಯಾಗಿದೆ. ಹಣ ವರ್ಗಾವಣೆ ಸಂಬಂಧ ರಾಜಾಜಿನಗರದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ, ಮಾಜಿ ಉಪಮೇಯರ್ ರಂಗಣ್ಣ ರಘುವೀರ್, ಪದ್ಮರಾಜ್, ವಿಜಯಕುಮಾರ್, ಕೃಷ್ಣಮೂರ್ತಿ, ಯಶಸ್, ರವಿ, ಗಿಳಿ ವೆಂಕಟೇಶ್, ಮುನಿರಾಜ್, ಪಳನಿಕಾಂತ್, ರಾಜಣ್ಣ ವಿರುದ್ಧ ದೂರು ನೀಡಲಾಗಿದೆ ಎಂದು ಅವರು ವಿವರಿಸಿದರು.
ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ, ಜಂಟಿ ಮುಖ್ಯ ಚುನಾವಣಾಧಿಕಾರಿ ಮತ್ತು ರಾಜಾಜಿನಗರದ ಸ್ಥಳಿಯ ಚುನಾವಣಾಧಿಕಾರ (ಆರ್ಓ) ಅವರು ನಮ್ಮ ದೂರು ಸ್ವೀಕರಿಸಿದ್ದಾರೆ. ಇದೊಂದು ಗಂಭೀರ ಪ್ರಕರಣವಾಗಿದೆ. ಚುನಾವಣಾ ಪ್ರಕ್ರಿಯೆಯಿಂದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣರವರನ್ನು ಅನರ್ಹ ಮಾಡಬೇಕೆಂದು ಆಗ್ರಹಿಸಿದ್ದೇವೆ ಎಂದು ಡಾ. ಸತೀಶ್ ಮನವಿ ಮಾಡಿದರು.

ಚುನಾವಣೆಯು ಅಸಲಿ ಮತ್ತು ನಕಲಿಗಳ ಮಧ್ಯದ ಹೋರಾಟ
ಆಮ್ ಆದ್ಮಿ ಪಾರ್ಟಿಯು ದೆಹಲಿ ಹಾಗೂ ಪಂಜಾಬ್‌ನಲ್ಲಿ ಜಾರಿಗೆ ತಂದಿರುವ ಯೋಜನೆಗಳನ್ನು ಬೇರೆ ಪಕ್ಷಗಳು ನಕಲು ಮಾಡಿ ಕರ್ನಾಟಕದಲ್ಲಿ ಆಶ್ವಾಸನೆಗಳನ್ನು ನೀಡುತ್ತಿವೆ. ಈ ಚುನಾವಣೆಯು ಅಸಲಿ ಮತ್ತು ನಕಲಿಗಳ ನಡುವಿನ ಹೋರಾಟವಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಮಾಧ್ಯಮಗಳ ಜೊತೆ ಸಂವಾದ ನಡೆಸುವುದು ಒಳ್ಳೆಯ ಬೆಳವಣಿಗೆ. ಆಮ್ ಆದ್ಮಿ ಪಾರ್ಟಿಯು ಇಡೀ ದೇಶದ ರಾಜಕೀಯದಲ್ಲಿ ಬದಲಾವಣೆ ತಂದಿದೆ. ಕರ್ನಾಟಕದ ಚುನಾವಣೆಯಲ್ಲೂ ಭಾರೀ ಬದಲಾವಣೆಯನ್ನು ನೋಡುತ್ತಿದ್ದೇವೆ.
ಜನ ಜನಪರ ಆಡಳಿತ ಬಯಸುತ್ತಿದ್ದಾರೆ
ಈ ಹಿಂದಿನ ಚುನಾವಣೆಗಳಲ್ಲಿ ಮತದಾರರು ಕೊನೆ ಹಂತದ ಭಾವನಾತ್ಮಕ ವಿಚಾರಗಳಿಂದ ಕೇವಲ ಜಾತಿ ಹಾಗೂ ಧರ್ಮ ನೋಡಿ ಮತದಾನ ಮಾಡುತ್ತಿದ್ದರು. ಆದರೆ ಈ ಚುನಾವಣೆಯಲ್ಲಿ 'ಮತದಾನದಿಂದ ನಮಗೇನು ಲಾಭವಾಗುತ್ತದೆ?' ಎಂದು ಯೋಚಿಸಲು ಆರಂಭಿಸಿದ್ದಾರೆ. ಈ ಮೂಲಕ ಜನಪರ ಆಡಳಿತವನ್ನು ಜನರು ಬಯಸಲು ಶುರು ಮಾಡಿದ್ದಾರೆ ಎಂದು ಹೇಳಿದರು.
ಬೆಂಗಳೂರಿನ ಶಾಲೆಗಳ ದುಬಾರಿ ಶುಲ್ಕವನ್ನು ಪಾವತಿಸಿ ಇಲ್ಲಿ ಶಿಕ್ಷಣ ಕೊಡಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರಿಗೆ ಶಿವಮೊಗ್ಗದಲ್ಲಿ ಶಿಕ್ಷಣ ಕೊಡಿಸಿ, ನಾನೊಬ್ಬನೇ ಬೆಂಗಳೂರಿನಲ್ಲಿ ಇದ್ದೇನೆ. ಎರಡು ವಾರಕ್ಕೊಮ್ಮೆ ಶಿವಮೊಗ್ಗಕ್ಕೆ ಹೋಗಿ ಮಾತನಾಡಿಸುತ್ತೇನೆ ಎಂದು ಬೆಂಗಳೂರಿನಲ್ಲಿರುವ ಶಿವಮೊಗ್ಗ ಮೂಲದ ಹಿರಿಯ ಪತ್ರಕರ್ತರು ತಿಳಿಸಿದ್ದರು. ಇಂತಹ ಪರಿಸ್ಥಿತಿ ತೊಲಗಬೇಕಾದರೆ ಸರ್ಕಾರಿ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರಬೇಕು ಎಂದರು.












Click it and Unblock the Notifications