ಫ್ರಿಡ್ಜ್‌ನಲ್ಲಿ ಮಹಿಳೆ ದೇಹ ಪೀಸ್ ಪೀಸ್! ಮರಣೋತ್ತರ ಪರೀಕ್ಷೆಗೆ ಬೆಚ್ಚಿದ ವೈದ್ಯರು
ವೀಕೆಂಡ್ ಮೂಡ್‌ನಲ್ಲಿದ್ದ ಬೆಂಗಳೂರಿಗರನ್ನು ಇಂದು ಆ ವಿಚಾರ ಬೆಚ್ಚಿಬೀಳಿಸಿದೆ. ಕೊಲೆಯಾಗಿದ್ದ ಮಹಿಳೆಯೊಬ್ಬರ ಮೃತದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟಿರುವ ಭಯಾನಕ ಸಂಗತಿಯೊಂದು ನಗರದ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ವಿಚಾರ ಕೇಳಿ ಸದ್ಯ ಬೆಂಗಳೂರಿಗರು ಶಾಕ್‌ಗೆ ಒಳಗಾಗಿದ್ದಾರೆ.
ಈ ಹಿಂದೆ ದೆಹಲಿಯಲ್ಲಿ ನಡೆದ ಶ್ರದ್ಧಾ ಕೊಲೆ ಮಾದರಿಯಲ್ಲೇ ಈ ಕೊಲೆಯೂ ನಡೆದಿದೆ ಎನ್ನಲಾಗಿದೆ. ಆದರೆ, ಶ್ರದ್ಧಾ ಕೇಸ್‌ಗಿಂತ ಇಲ್ಲಿ ಕೊಲೆಯಾಗಿರುವ ಮಹಾಲಕ್ಷ್ಮಿಯವರ ಕೇಸ್ ಇನ್ನೂ ಬೆಚ್ಚಿಬೀಳಿಸುವಂತಿದೆ. ನೇಪಾಳ ಮೂಲದ ಮಹಾಲಕ್ಷ್ಮಿ ಎಂಬ ಮಹಿಳೆಯನ್ನು ಕೊಲೆ ಮಾಡಲಾಗಿದ್ದು, ಮೃತದೇಹವನ್ನು 50 ತುಂಡುಗಳಾಗಿ ಕತ್ತರಿಸಿ ಮನೆಯ ಫ್ರಿಡ್ಜ್‌ನಲ್ಲಿ ಇಡಲಾಗಿದೆ. ಈ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಮಹಾಲಕ್ಷ್ಮಿಯ ಕೊಲೆ ಮಾಡಿದ್ದು ಯಾರು ಎನ್ನುವ ಮಾಹಿತಿ ಇಲ್ಲಿವರೆಗೆ ಪತ್ತೆಯಾಗಿಲ್ಲ. ಮನೆಯಲ್ಲಿ ಕೆಟ್ಟ ವಾಸನೆ ಬರುತ್ತಿದ್ದ ಅನುಮಾನದ ಮೇರೆಗೆ ಮಾಲೀಕರು ಈಕೆಯ ಸಂಬಂಧಿಕರಿಗೆ ಮಾಹಿತಿ ನೀಡಿದ ಬಳಿಕ ಮೃತಳ ತಾಯಿ ಮನೆಗೆ ಬಂದಿದ್ದರು. ಫ್ರಿಡ್ಜ್ ತೆರೆದು ನೋಡಿದಾಗ ಒಳಗೆ ಮಹಾಲಕ್ಷ್ಮಿಯ ಮೃತದೇಹ ಕಂಡು ಕಿರುಚಿಕೊಂಡು ಓಡಿದ್ದಾರೆ ಎನ್ನಲಾಗಿದೆ.
ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಮೃತರ ತಾಯಿ ಸೀಮಾ ನೀಡಿದ್ದ ದೂರಿನ ಮೇರೆಗೆ ಕೇಸ್ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

ಪ್ರಕರಣ ಕೈಗೆತ್ತಿಕೊಂಡಿರುವ ಪೊಲೀಸರು ಮಹಾಲಕ್ಷ್ಮಿಯ ದೇಹದ ತುಂಡುಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆದರೆ, ದೇಹದ ಭಾಗಗಳು ತುಂಡಾಗಿರುವುದನ್ನು ಕಂಡ ವೈದ್ಯರು ಕೂಡ ಬೆಚ್ಚಿಬಿದ್ದಿದ್ದಾರೆ. ಈ ದುಸ್ಥಿತಿಯಲ್ಲಿ ಮರಣೋತ್ತರ ಪರೀಕ್ಷೆ ಮಾಡುವುದು ಕೂಡ ವೈದ್ಯರಿಗೆ ದೊಡ್ಡ ಸವಾಲಾಗಿದೆ ಎಂದು ವರದಿಯಾಗಿದೆ. ಮೊದಲಿಗೆ ಪೀಸ್ ಆಗಿರುವ ತುಂಡುಗಳನ್ನು ಜೋಡಿಸಿ, ಬಳಿಕ ಮರಣೋತ್ತರ ಪರೀಕ್ಷೆ ನಡೆಯಲಿದೆ. ಸದ್ಯ ಫ್ರೀಜರ್‌ನಲ್ಲೇ ತುಂಡುಗಳನ್ನು ಶೇಖರಿಸಿ ಇಡಲಾಗಿದೆ ಎಂದು ಹೇಳಲಾಗಿದೆ.
ಸ್ಥಳೀಯರು ಹೇಳಿದ್ದೇನು?: ಮಹಾಲಕ್ಷ್ಮಿ ಕುಟುಂಬ ಈ ಹಿಂದೆ ನೆಲಮಂಗಲದಲ್ಲಿ ವಾಸವಿತ್ತು. ಇತ್ತೀಚೆಗೆ ಮಹಾಲಕ್ಷ್ಮಿ ತನ್ನ ಪತಿಯೊಂದಿಗೆ ಗಲಾಟೆ ಮಾಡಿಕೊಂಡು ಇಲ್ಲಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ. ಮನೆಯಲ್ಲಿ ಮಹಾಲಕ್ಷ್ಮಿ ಒಬ್ಬರೇ ಇದ್ದರು. ಆದರೆ, ಆಗಾಗ ಯುವಕನೊಬ್ಬ ಅಲ್ಲಿಗೆ ಬರುತ್ತಿದ್ದ. ಮಹಾಲಕ್ಷ್ಮಿಯನ್ನು ಪಿಕ್‌ಅಪ್, ಡ್ರಾಪ್ ಕೂಡ ಮಾಡುತ್ತಿದ್ದ. ಕೆಲಸ ಮುಗಿಸಿ ಮಹಾಲಕ್ಷ್ಮಿ ರಾತ್ರಿ ಮನೆಗೆ ಬರುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ಮೃತ ಮಹಾಲಕ್ಷ್ಮಿ ಉತ್ತರಾಖಂಡದ ಅಶ್ರಫ್ ಎಂಬಾತನ ಜೊತೆ ಸಲುಗೆಯಿಂದ ಇದ್ದರು. ಮೆನ್ಸ್ ಬ್ಯೂಟಿ ಪಾರ್ಲರ್ನಲ್ಲಿ ಈ ಪುರುಷನೊಂದಿಗೆ ಈ ಮಹಾಲಕ್ಷ್ಮಿ ಸಲುಗೆಯಿಂದ ಇದ್ದರು ಎನ್ನಲಾಗಿದೆ. ಈ ಸಂಬಂಧ ಮಹಾಲಕ್ಷ್ಮಿ ಗಂಡ ಹಾಗೂ ಕುಟುಂಬಸ್ಥರು ಈತನ ವಿರುದ್ಧ ದೂರು ಕೂಡ ನೀಡಿದ್ದಾರೆ. ಸದ್ಯ ಈತನ ಮೇಲೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಆತ ಸದ್ಯ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಆತನಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.
ಅಶ್ರಫ್ ಅಲ್ಲದೆ ಮಹಾಲಕ್ಷ್ಮಿ ಜೊತೆಗೆ ಕೆಲಸ ಮಾಡುತ್ತಿದ್ದರು ಎನ್ನಲಾದ ಮುಕ್ತ, ಶಶಿಧರ್, ಸುನೀಲ್ ಎಂಬುವವರ ಮೇಲೆಯೂ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಇವರ ನಡುವೆ ಇತ್ತೀಚೆಗೆ ಗಲಾಟೆ ಕೂಡ ನಡೆದಿತ್ತು ಎನ್ನಲಾಗಿದೆ. ಹೀಗಾಗಿ ಸದ್ಯ ಈ ನಾಲ್ವರ ವಿರುದ್ಧವೂ ಅನುಮಾನ ವ್ಯಕ್ತವಾಗಿರುವುದರಿಂದ ಎಲ್ಲರನ್ನೂ ವಶಕ್ಕೆ ಪಡೆಯಲು ಖಾಕಿ ಪಡೆ ಮುಂದಾಗಿದೆ. ಈ ಭೀಕರ ಕೊಲೆಯು ಮತ್ತೆ ದೇಶದಾದ್ಯಂತ ಸದ್ದು ಮಾಡುತ್ತಿದೆ.












Click it and Unblock the Notifications