ಚಲಿಸುವ ಆಟೋ ಮೇಲೆ ಬಿದ್ದ ಬೃಹತ್ ಮರ, ಒಳಗಿದ್ದವರ ಕಥೆಯೇನು?
ಉದ್ಯಾನನಗರಿ ಬೆಂಗಳೂರಿನಲ್ಲಿ ಇಂದು ಭಾರಿ ಅನಾಹುತವೇ ನಡೆದು ಹೋಗಿದೆ. ಚಲಿಸುತ್ತಿದ್ದ ಆಟೋ ರಿಕ್ಷಾಗಳ ಮೇಲೆ ಬೃಹದಾಕಾರದ ಮರಗಳು ಉರುಳಿ ಬಿದ್ದಿರುವ ಘಟನೆಗಳು ವರದಿಯಾಗಿವೆ. ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ಬದುಕಬೇಕಾದ ಪರಿಸ್ಥಿತಿ ರಾಜಧಾನಿಯಲ್ಲಿ ನಿರ್ಮಾಣವಾಗಿದೆ.
ಮೊದಲನೆಯ ಅವಘಡ ನಡೆದಿರುವುದು ಜಯನಗರದ 4 'ಟಿ' ಬ್ಲಾಕ್‌ನ 16ನೇ ಮುಖ್ಯರಸ್ತೆಯಲ್ಲಿ. ಇಲ್ಲಿ ಚಲಿಸುತ್ತಿರುವ ಆಟೋ ಮೇಲೆ ಮರದ ಬೃಹತ್ ಕೊಂಬೆ ಮುರಿದು ಬಿದ್ದಿದೆ. ಈ ವೇಳೆ ಆಟೋದಲ್ಲಿ ಚಾಲಕ ಹಾಗೂ ಇಬ್ಬರು ಪ್ರಯಾಣಿಕರಿದ್ದರು. ಕೊಂಬೆ ಬಿದ್ದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಹಿಂಬದಿ ಕುಳಿತಿದ್ದ ಒಬ್ಬರು ಪ್ರಯಾಣಿಕರಿಗೂ ಗಾಯಗಳಾಗಿವೆ.

ರಕ್ತಸ್ರಾವವಾಗಿದ್ದ ಚಾಲಕನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ ಎಂದು ವರದಿಯಾಗಿದೆ. ಈ ವಿಡಿಯೋ ಕೂಡ ವೈರಲ್ ಆಗಿದ್ದು, ಆಟೋ ಮೇಲೆ ಬಿದ್ದಿದ್ದ ಮರದ ಕೊಂಬೆ ತೆರವು ಮಾಡಲು ಹರಸಾಹಸಪಟ್ಟಿದ್ದಾರೆ. ಬಳಿಕ ಬಿಬಿಎಂಪಿ ಅರಣ್ಯ ಘಟಕದ ಸಹಯೋಗದೊಂದಿಗೆ ಮರದ ಕೊಂಬೆಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಳ್ಳಲಾಗಿದೆ.
ಈ ಬಗ್ಗೆ ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕವು ಆಕ್ರೋಶ ವ್ಯಕ್ತಪಡಿಸಿದೆ. ಇದು ಬಿಬಿಎಂಪಿ ಮತ್ತು ಅರಣ್ಯ ಇಲಾಖೆಯ ಬೇಜವಾಬ್ದಾರಿಯ ಪರಮಾವಧಿ ಎಂದು ಟೀಕಿಸಿದೆ.

ಬೆಂಗಳೂರಿನ ಜಯನಗರದ 4ನೇ ಬ್ಲಾಕ್ ರಸ್ತೆಯಲ್ಲಿ ಆದಂತಹ ದುರ್ಘಟನೆ ಇದು. ಬೃಹತ್ ಗಾತ್ರದ ಮರವೊಂದು ಆಟೋ ಮೇಲೆ ಬಿದ್ದಿರುವ ಪರಿಣಾಮ ಆಟೋ ಚಾಲಕ ಸೇರಿ ಇಬ್ಬರಿಗೆ ಗಾಯಗಳಾಗಿವೆ. ಒಂದು ವೇಳೆ ಅವರ ಪ್ರಾಣಕ್ಕೆ ತೊಂದರೆ ಆಗಿದ್ದರೆ ಯಾರು ಹೊಣೆಯಾಗುತ್ತಿದ್ದರು? ದಯಮಾಡಿ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಹಾಗೂ ಬಿಬಿಎಂಪಿ ಆಯುಕ್ತರು ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು. ಜೊತೆಗೆ ಗಾಯಾಳುಗಳಿಗೆ ಉಚಿತವಾಗಿ ಸರ್ಕಾರದ ವತಿಯಿಂದ ಚಿಕಿತ್ಸೆ ಕೊಡಿಸಬೇಕು ಎಂದು ಆಗ್ರಹಿಸಿದೆ.
ಮತ್ತೊಂದು ಅನಾಹುತ ಮಲ್ಲೇಶ್ವರದ ಬಿಇಎಸ್ ಕಾಲೇಜು ಬಳಿಯ 16ನೇ ಮುಖ್ಯರಸ್ತೆಯಲ್ಲಿ ನಡೆದಿದೆ. ಥೇಟ್ ಇದೇ ಮಾದರಿಯಲ್ಲಿ ಚಲಿಸುತ್ತಿದ್ದ ಆಟೋ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಇದರಿಂದ ಈ ಭಾಗದಲ್ಲಿ ಸಂಚಾರಕ್ಕೂ ಭಾರಿ ಸಮಸ್ಯೆಯಾಗಿತ್ತು. ಬಳಿಕ ಮರ ತೆರವು ಮಾಡಿ, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇತ್ತೀಚೆಗೆ ಸುರಿದ ಮಳೆ ಹಾಗೂ ಗಾಳಿಯಿಂದಾಗಿ ಈ ಅವಘಡಗಳು ನಡೆದಿವೆ ಎಂದು ಹೇಳಲಾಗುತ್ತಿದೆ.
ಅದೃಷ್ಟವಶಾತ್ ಈ ಘಟನೆಗಳಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೂ ಬೆಂಗಳೂರಿನ ರಸ್ತೆಗಳಲ್ಲಿ ಜನ ಆತಂಕದಲ್ಲೇ ಓಡಾಡುವ ಸ್ಥಿತಿಯಂತೂ ನಿರ್ಮಾಣವಾಗಿದೆ. ಮಳೆಗಾಲ ಆಗಿರುವುದರಿಂದ ಬಿಬಿಎಂಪಿಯವರು ಅಲರ್ಟ್ ಆಗಿರಬೇಕು. ಇಲ್ಲದಿದ್ದರೆ ಅನಾಹುತಗಳು ತಪ್ಪಿದ್ದಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.












Click it and Unblock the Notifications