ಕುಟ್ಟಿ ಸೈತಾನ್ ಪೂಜೆಗೆ ಮಗು ಬಲಿ ಬೇಕೆಂದ ಪತಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ
ಬೆಂಗಳೂರು, ಅಕ್ಟೋಬರ್ 29: ಹಿಂದೂ ಯುವಕ ಎಂದು ನಂಬಿಸಿ ಮದುವೆಯಾಗಿ, ಮಗುವಾದ ಮೇಲೆ ಕುಟ್ಟಿ ಸೈತಾನ್ ಎನ್ನುವ ಹೆಸರಿನ ಪೂಜೆ ಮಾಡಲು ಮಗನನ್ನೇ ಬಲಿ ಕೊಡಲು ಹೊರಟ ಸೈಕೋ ಪತಿ ವಿರುದ್ಧ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ದೂರು ನೀಡಿದರೂ ಕ್ರಮ ತೆಗೆದುಕೊಳ್ಳದ ಸ್ಥಳೀಯ ಪೊಲೀಸರ ನಡೆಗೆ ಬೇಸತ್ತು ಕೊನೆಗೆ ಗಂಡನ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದಾಳೆ.
ಕೆ.ಆರ್ ಪುರಂ ನಿವಾಸಿ ಸದ್ದಾಂ ಎಂಬಾತನೇ ವಾಮಾಚಾರದ ಹಚ್ಚು ಹಿಡಿಸಿಕೊಂಡಿರುವ ಪತಿ. ಈತ 4 ವರ್ಷಗಳ ಹಿಂದೆ ತಾನು ಆದಿಈಶ್ವರ್ ಎಂದು ಸುಳ್ಳು ಹೇಳಿ ಹಿಂದೂ ಯುವತಿಯನ್ನು ಮದುವೆಯಾಗಿದ್ದಾನೆ. ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಹುಡುಗನ ಬಗ್ಗೆ ಅತಿಯಾದ ನಂಬಿಕೆಯಿಟ್ಟಿದ್ದ ಯುವತಿ ಆತನ ಪೂರ್ವಪರ ವಿಚಾರಿಸದೇ ಮದುವೆಯಾಗಿದ್ದಾಳೆ ಎನ್ನಲಾಗಿದೆ.

ಆಕೆಯ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ಸದ್ದಾಂ ಮದುವೆಯಾಗಿ ಪತ್ನಿ ಗರ್ಭಿಣಿಯಾದ ನಂತರ ನಾನು ಹಿಂದೂ ಅಲ್ಲ, ಇಸ್ಲಾಂ ಧರ್ಮಕ್ಕೆ ಸೇರಿದವನು. ನನ್ನ ಹೆಸರು ಸದ್ದಾಂ ಎನ್ನುವ ನಿಜ ಒಪ್ಪಿಕೊಂಡಿದ್ದಾನೆ. ಅಲ್ಲದೇ ಪತ್ನಿಗೆ ಕಿರುಕುಳ ನೀಡಿ ಆಕೆಯನ್ನು ಸಹ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಆಕೆಯ ಹೆಸರನ್ನು ಬದಲಾವಣೆ ಮಾಡಿದ್ದಾನೆ ಎನ್ನಲಾಗಿದೆ.
ಪ್ರೀತಿಸಿ ಮದುವೆಯಾದ ಕಾರಣ ನಂಬಿಕೆ ನುಚ್ಚುನೂರಾದರೂ ಒಟ್ಟಿಗೆ ಬಾಳಬೇಕು ಎಂದು ಯುವತಿ ಆತನ ಜೊತೆಗೆ ಬದುಕು ಮುಂದುವರಿಸಿದ್ದಾಳೆ. ಆದರೆ ದಿನದಿಂದ ದಿನಕ್ಕೆ ಸದ್ದಾಂನ ವರ್ತನೆ ಬದಲಾವಣೆ ಆಗುತ್ತಾ ಬಂದಿದ್ದು, ತಡರಾತ್ರಿ ಎದ್ದು ಮಂತ್ರ ಪಠಿಸುತ್ತಾ ವಾಮಾಚಾರ ವಿದ್ಯೆ ಅಭ್ಯಾಸ ಮಾಡುತ್ತಿದ್ದನಂತೆ. ಪತಿಯ ಈ ವರ್ತನೆ ಕಂಡು ಮಹಿಳೆ ಭಯಭೀತಳಾಗಿದ್ದಾಳೆ.
ಈ ಎಲ್ಲಾ ನಡುವೆ ಮಹಿಳೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಅಲ್ಲಿಂದ ಈ ಸದ್ದಾಂನ ಅಸಲಿ ವರ್ತನೆ ಹಾಗೂ ಅಸಲಿ ವರಸೆ ಶುರು ಮಾಡಿಕೊಂಡಿದ್ದಾನೆ. ಗಂಡು ಮಗು ಹುಟ್ಟಿದ ನಂತರ ಕುಟ್ಟಿ ಸೈತಾನ್ ಪೂಜೆ ಮಾಡಬೇಕು. ಕುಟ್ಟಿ ಸೈತಾನ್ ಪೂಜೆಯಲ್ಲಿ ಮಗುವನ್ನು ಬಲಿ ಕೊಡಬೇಕು. ಮಗುವನ್ನು ಬಲಿ ಕೊಟ್ಟರೆ ಸಮೃದ್ಧಿ ಹೆಚ್ಚಾಗುತ್ತದೆ.

ಜೊತೆಗೆ ನಿಧಿ ಸಿಗತ್ತದೆ ಎಂದು ಪತ್ನಿಗೆ ಆರೋಪಿ ಕಿರುಕುಳ ನೀಡುತ್ತಿದ್ದ. ಸದ್ಯ ಸೈಕೋ ಗಂಡನಿಂದ ತಪ್ಪಿಸಿಕೊಂಡಿರುವ ಮಹಿಳೆ ತುಮಕೂರಿನ ತವರು ಮನೆ ಸೇರಿಕೊಂಡಿದ್ದಾಳೆ. ಬಳಿಕ ತುಮಕೂರಿಗೂ ತೆರಳಿ ಮಗುವನ್ನು ಬಲಿ ಕೊಡೋಣ ಮಗುವನ್ನು ಕೊಡು ಎಂದು ತೊಂದರೆ ಕೊಟ್ಟಿದ್ದಾನೆ. ಅಲ್ಲದೇ ಆರೋಪಿ ಸದ್ದಾಂ ಪತ್ನಿಯ ತಾಯಿಗೂ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಮಹಿಳೆ ನೀಡಿದ ದೂರಿನಡಿ ಕೆ.ಆರ್.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಯಾವುದೇ ರೀತಿ ಕ್ರಮ ಜರುಗಿಸಿರಲಿಲ್ಲ. ಹೀಗಾಗಿ ಆಕೆ ನಗರ ಪೊಲೀಸ್ ಕಮೀಷನರ್ ದಯಾನಂದ್ ಅವರಿಗೆ ದೂರು ನೀಡಿದ್ದಾಳೆ. ಸದ್ಯ ಆರೋಪಿ ಸದ್ದಾಂ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.












Click it and Unblock the Notifications