ಹಲ್ಲೆಗೊಳಗಾದ ಮಹಿಳೆ ದೂರು ಸ್ವೀಕರಿಸದೇ ಬೆಳ್ಳಂದೂರು ಪೊಲೀಸರ ನಿರ್ಲಕ್ಷ್ಯ: ಆಯುಕ್ತರಿಗೆ ದೂರು
ಬೆಂಗಳೂರು, ಫೆ. 08: ಹತ್ತು ಮಂದಿಯಿಂದ ಹಲ್ಲೆಗೆ ಒಳಗಾದ ಮಹಿಳೆ ನೀಡಿದ ದೂರನ್ನು ದಾಖಲಿಸಿಕೊಳ್ಳದೇ ಬೆಳ್ಳಂದೂರು ಪೊಲೀಸರು ಕರ್ತವ್ಯ ಲೋಪ ಎಸಗಿದ್ದಾರೆ.
ಹಲ್ಲೆಗೆ ಒಳಗಾದ ಮಹಿಳೆ ನ್ಯಾಯ ಕೋರಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರ ಕಚೇರಿಯ ಕದ ತಟ್ಟಿದ್ದಾರೆ. ಪೊಲೀಸ್ ಆಯುಕ್ತರ ಆದೇಶದ ಹಿನ್ನೆಲೆಯಲ್ಲಿ ಹಲ್ಲೆಗೆ ಒಳಗಾದ ಮಹಿಳೆಯ ದೂರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಇದೀಗ ಪ್ರಕರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೇವಲ ಡ್ರಗ್ ಕೇಸುಗಳ ಪತ್ತೆಯಲ್ಲಿ ಮುಳಗಿರುವ ಪೊಲೀಸರು ಜನ ಸಾಮನ್ಯರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಅದಕ್ಕೆ ಪೂರಕ ಎಂಬಂತೆ ಬೆಳ್ಳಂದೂರಿನಲ್ಲಿ ನಡೆದಿರುವ ಘಟನೆ ಪುಷ್ಠೀಕರಿಸುವಂತಿದೆ.

ಘಟನೆ ಹಿನ್ನೆಲೆ:
ಮನೆ ಮುಂದೆ ಕಸ ಕುಡಿಸುವ ವಿಚಾರವಾಗಿ ಜಗಳ ಉಂಟಾಗಿ ಅಕ್ಕ ಪಕ್ಕದ ಮನೆಯವರು ಮಹಿಳೆಯೊಬ್ಬರಿಗೆ ಹಲ್ಲೆ ಮಾಡಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆನೇಕಲ್‌ನಲ್ಲಿ ತಂಗಿದ್ದ ಮಹಿಳೆ ಬೆಳ್ಳಂದೂರಿನಲ್ಲಿರುವ ತನ್ನ ತಾಯಿ ಮನೆಗೆ ಕಳೆದ ಶುಕ್ರವಾರ ಬಂದಿದ್ದಾರೆ. ಅಮ್ಮನ ಮನೆ ಮುಂದೆ ಬಿದ್ದಿದ್ದ ಕಸವನ್ನು ಸ್ವಚ್ಚಗೊಳಿಸುವ ಉದ್ದೇಶದಿಂದ ಮನೆ ಮುಂದೆ ಕಸ ಗುಡಿಸುತ್ತಿದ್ದರು. ಈ ವಿಚಾರವಾಗಿ ಪಕ್ಕದ ಮನೆ ನಿವಾಸಿ ರಾಮು ಮುನಿವೆಂಕಟಪ್ಪ ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದು ಅಕ್ಕ ಪಕ್ಕದ 9 ಮಂದಿ ಸೇರಿಕೊಂಡು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಸಾರ್ವಜನಿಕವಾಗಿ ನಿಂದನೆ ಮಾಡಿದ್ದಾರೆ. ಈ ವೇಳೆ ಮಹಿಳೆ ಕತ್ತಿನಲ್ಲಿದ್ದ ಚಿನ್ನದ ಸರ ಕೂಡ ಕಳೆದುಕೊಂಡಿದ್ದಾರೆ.

ಹಲ್ಲೆಗೆ ಒಳಗಾಗಿದ್ದ ಮಹಿಳೆ ಮನೆಯಲ್ಲಿ ಪ್ರಜ್ಞೆ ತಪ್ಪಿ ಕುಸಿದ ಬಿದ್ದಿದ್ದಾರೆ. ಕಾಲೇಜಿಗೆ ಹೋಗಿದ್ದ ಆಕೆಯ ಪುತ್ರ ಗೌತಮ್ ಮನೆಗೆ ಬಂದು ನೋಡಿದಾಗ ಹಲ್ಲೆ ನಡೆದಿರುವ ವಿಷಯ ತಿಳಿದಿದೆ. ಈ ಬಗ್ಗೆ ಹೊಯ್ಸಳ ಪೊಲೀಸ್ ಗಮನಕ್ಕೆ ತಂದಿದ್ದಾರೆ. ಹಲ್ಲೆ ಮಾಡಿದ ಸಂಬಂಧ ಆರೋಪಿಗಳ ವಿರುದ್ಧ ಸಂತ್ರಸ್ತೆ ನೀಡಿದ ದೂರನ್ನು ಸ್ವೀಕರಿಸದೇ ಬೆಳ್ಳಂದೂರು ಪೊಲೀಸರು ನಿರ್ಲಕ್ಷ್ಯತೆ ವಹಿಸಿದ್ದಾರೆ.
ಪೊಲೀಸರು ದೂರು ಸ್ವೀಕರಿಸಲು ನಿರಾಕರಣೆ ಮಾಡಿದ್ದನ್ನು ಸಂತ್ರಸ್ತ ಮಹಿಳೆಯ ಪುತ್ರ ಗೌತಮ್ ರೆಕಾರ್ಡ್ ಮಾಡಿಕೊಂಡಿದ್ದಾನೆ. ಇದನ್ನು ನೋಡಿದ ಪೊಲೀಸ್ ಸಿಬ್ಬಂದಿ ಮತ್ತಷ್ಟು ಕಿಡಿ ಕಾರಿದ್ದು, ವಿಡಿಯೋ ಡಿಲೀಟ್ ಮಾಡುವಂತೆ ಗೌತಮ್ ಗೆ ಬೆದರಿಕೆ ಹಾಕಿದ್ದಾರೆ.

ಪೊಲೀಸರ ನಡೆಯಿಂದ ಬೇಸತ್ತ ಮಹಿಳೆ ನ್ಯಾಯ ಕೋರಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರಿಗೆ ದೂರು ನೀಡಿದ್ದಾರೆ. ದೂರಿನ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರು ವೈಟ್ ಫೀಲ್ಡ್ ಉಪ ವಿಭಾಗದ ಡಿಸಿಪಿ ಎಸ್. ಗಿರೀಶ್ ಅವರಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಕುರಿತು ತನಿಖೆ ನಡೆಸಿ ವರದಿ ನೀಡಲು ಡಿಸಿಪಿ ಗಿರೀಶ್ ಸೂಚನೆ ನೀಡಿದ್ದಾರೆ.
ಮಹಿಳೆ ಮೇಲೆ ಹಲ್ಲೆ, ಸಾರ್ವಜನಿಕ ನಿಂದನೆ, ದೂರು ದಾಖಲಿಸಿಕೊಳ್ಳಲು ಬೆಳ್ಳಂದೂರು ಪೊಲೀಸರು ನಿರಾಕರಣೆ ಕುರಿತು ವಿಚಾರಣೆಗೆ ಡಿಸಿಪಿ ಆದೇಶಿಸಿದ್ದಾರೆ. ಘಟನೆ ನನ್ನ ಗಮನಕ್ಕೆ ಬಂದಿರಲಿಲ್ಲ. ಈ ಕುರಿತು ವಿಚಾರಣೆ ನಡೆಸಿ ತಪ್ಪು ಸಾಬೀತಾದರೆ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.












Click it and Unblock the Notifications