ಬಿಬಿಎಂಪಿ ಕಸದ ಟಿಪ್ಪರ್ ಲಾರಿ ಹರಿದು ರಸ್ತೆ ದಾಟುತ್ತಿದ್ದ ವಿದ್ಯಾರ್ಥಿ ಸಾವು
ಬೆಂಗಳೂರು, ಮಾ. 21: ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಸಾವನ್ನಪ್ಪಿದ್ದಾಳೆ. ಹೆಬ್ಬಾಳ ಬಸ್ ನಿಲ್ದಾಣದ ಬಳಿ ಅಂಡರ್ ಪಾಸ್ ರಸ್ತೆಯಲ್ಲಿ ಮಳೆ ನೀರು ತುಂಬಿತ್ತು. ಹೀಗಾಗಿ ಸ್ನೇಹಿತರ ಜತೆ ರಸ್ತೆ ದಾಟುವಾಗ ಅತಿ ವೇಗದಿಂದ ಬಂದ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಮುಗ್ಧ ಮಗುವಿನ ಜೀವ ಕಸಿದುಕೊಂಡಿದೆ.
ಹೆಬ್ಬಾಳ ನಿವಾಸಿ ಅಕ್ಷಯಾ (15) ಮೃತಪಟ್ಟ ದುರ್ದೈವಿ. ಹೆಬ್ಬಾಳದಲ್ಲಿರುವ ಸ್ಟೆಲ್ಲಾ ಮೇರೀಸ್ ಕಾನ್ವೆಂಟ್‌ನಲ್ಲಿ ಅಕ್ಷಯಾ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮಧ್ಯಾಹ್ನ ಮನೆಗೆ ವಾಪಸ್ಸಾಗುತ್ತಿದ್ದ ಅಕ್ಷಯಾ ಹೆಬ್ಬಾಳ ಪೊಲೀಸ್ ಠಾಣೆ ಎದುರಲ್ಲೇ ಇರುವ ಅಂಡರ್ ಪಾಸ್ ನಲ್ಲಿ ಹೋಗಬೇಕಿತ್ತು. ಎರಡು ದಿನದಿಂದ ಸುರಿದಿದ್ದ ಬೇಸಿಗೆ ಮಳೆಯಿಂದ ಅಂಡರ್ ಪಾಸ್‌ನಲ್ಲಿ ನೀರು ತುಂಬಿಕೊಂಡಿತ್ತು. ಹೀಗಾಗಿ ಅಕ್ಷಯಾ ಹಾಗೂ ಇತರರು ಅನಿವಾರ್ಯವಾಗಿ ವಾಹನಗಳ ಮಧ್ಯೆ ರಸ್ತೆ ದಾಟಬೇಕಿತ್ತು.
Koo Appಬಾಲಕಿ ಅಕ್ಷಯಾ ಸಾವು ಸಾವಲ್ಲ, ಅದು ಸರ್ಕಾರಿ ಹತ್ಯೆ ಎನ್ನಬಹುದು. ಬಿಬಿಎಂಪಿಯ ಅವ್ಯವಸ್ಥೆಗಳಿಗೆ ಹೈಕೋರ್ಟ್ ಹಲವಾರು ಬಾರಿ ಕಪಾಳಮೋಕ್ಷ ಮಾಡಿದ್ದರೂ ಸರ್ಕಾರ ಎಚ್ಚರಾಗದೆ ಕುಳಿತಿದೆ. ಬಿಬಿಎಂಪಿ ಚುನಾವಣೆ ನಡೆಸದೆ, ಅಧಿಕಾರಿಗಳನ್ನು ಅಕ್ರಮ ನಡೆಸಲು ಬಿಟ್ಟಿರುವ ಭ್ರಷ್ಟ & ಬೇಜವಾಬ್ದಾರಿ ಬಿಜೆಪಿ ಸರ್ಕಾರವೇ ಮುಗ್ದ ಬಾಲಕಿಯನ್ನು ಹತ್ಯೆ ಮಾಡಿದೆ. - ಕರ್ನಾಟಕ ಕಾಂಗ್ರೆಸ್ (@inckarnataka) 21 Mar 2022
ಸೋಮವಾರ ಮಧ್ಯಾಹ್ನ ರಸ್ತೆ ದಾಟುವಾಗ ಅತಿ ವೇಗದಿಂದ ಬಂದ ಬಿಬಿಎಂಪಿ ಕಸದ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡಿದೆ. ಆ ಬಳಿಕ ರಸ್ತೆ ದಾಟುತ್ತಿದ್ದ ಅಕ್ಷಯ ಮೇಲೆ ಹರಿದಿದ್ದು, ವಿದ್ಯಾರ್ಥಿನಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಕೂಡಲೇ ಕಸದ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಬ್ಬಾಳ ಠಾಣೆ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಿಬಿಎಂಪಿ ಕಸದ ಲಾರಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಉತ್ತರ ವಿಭಾಗದ ಡಿಸಿಪಿ ಸವಿತಾ ಅವರು, ಹೆಬ್ಬಾಳದ ಅಂಡರ್ ಪಾಸ್ ನಲ್ಲಿ ನೀರು ತುಂಬಿದ್ದರಿಂದ ಜನ ನಡೆದುಕೊಂಡು ಹೋಗಲು ಸಾಧ್ಯವಿಲ್ಲ. ವಿದ್ಯಾರ್ಥಿನಿ ಅಕ್ಷಯಾ ಸೇರಿದಂತೆ ಮೂವರು ರಸ್ತೆ ದಾಟುವಾಗ ವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬಿಬಿಎಂಪಿ ವಿರುದ್ಧ ಆಕ್ರೋಶ:
ಕೆಲವು ದಿನಗಳ ಹಿಂದಷ್ಟೇ ಜಲ ಮಂಡಳಿ ತೋಡಿದ್ದ ಗುಂಡಿಗೆ ಬಿದ್ದು ಸಾಫ್ಟ್ವೇರ್ ಇಂಜಿನಿಯರ್ ವಿದ್ಯಾರಣ್ಯಪುರ ಸಮೀಪ ಮೃತಪಟ್ಟಿದ್ದ. ಆ ಘಟನೆ ಮಾಸುವ ಮುನ್ನವೇ ಬಿಬಿಎಂಪಿಯ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿನಿ ಸಾವಿಗೀಡಾಗಿದ್ದಾಳೆ. ಬಿಬಿಎಂಪಿಯ ನಿರ್ಲಕ್ಷ್ಯವೇ ವಿದ್ಯಾರ್ಥಿ ಸಾವಿಗೆ ಕಾರಣ ಎಂದು ಸ್ಥಳೀಯರು ಆಕ್ರೊಶ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ಅಂಡರ್ ಪಾಸ್ ನ್ನು ಬಿಬಿಎಂಪಿ ನಿರ್ವಹಣೆ ಮಾಡುತ್ತಿದ್ದು, ಸರಿಯಾಗಿ ನಿರ್ವಹಣೆ ಮಾಡದ ಕಾರಣ ನೀರು ನಿಲ್ಲುತ್ತಿದೆ. ಇದರಿಂದ ಜನರು ಅನಿವಾರ್ಯವಾಗಿ ವಾಹನಗಳ ಮಧ್ಯೆ ರಸ್ತೆ ದಾಟಬೇಕಿದೆ. ಪದೇ ಪದೇ ಈ ರೀತಿಯ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Recommended Video













Click it and Unblock the Notifications