ಆರ್‌ಟಿಐ ಹೋರಾಟದಲ್ಲಿ ವಿದ್ಯಾರ್ಥಿಗಳಿಗೆ ಜಯ
ಬೆಂಗಳೂರು, ಸೆ.5 : ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ (ಆರ್‌ಟಿಐ) ಸೀಟು ಕೊಡದ ಏಳು ಖಾಸಗಿ ಶಾಲೆಗಳ ವಿರುದ್ಧ ಮಕ್ಕಳು ನಡೆಸಿದ ಹೋರಾಟ ಫಲ ನೀಡಿದೆ. 27 ಮಕ್ಕಳಿಗೆ ಆರ್‌ಟಿಐ ಅಡಿ ಸೀಟು ನೀಡುವಂತೆ ಹೈಕೋರ್ಟ್ ಖಾಸಗಿ ಶಾಲೆಗಳಿಗೆ ಆದೇಶ ನೀಡಿದೆ.
ಮಕ್ಕಳಾದ ಅಶಿತ್ ಕಾರ್ತಿಕ್ ರಾವ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಹಾಗೂ ನ್ಯಾಯಮೂರ್ತಿ ಅಶೋಕ್ ಬಿ.ಹಿಂಚಿಗೇರಿ ಅವರಿದ್ದ ವಿಭಾಗೀಯ ಪೀಠ ಗುರುವಾರ ಪ್ರಕರಣದ ತೀರ್ಪನ್ನು ಪ್ರಕಟಿಸಿತು.

ಬೆಂಗಳೂರಿನ ಎನ್.ಎಸ್.ಪಾಳ್ಯ, ವಿಟ್ಟಸಂದ್ರ ಮತ್ತು ಸೋಮಸುಂದರ ಪಾಳ್ಯದಲ್ಲಿರುವ ವಿಬ್‌ಗಯಾರ್ ಶಾಲೆ ಮತ್ತು ಬೆಟ್ಟನದಾಸನಪುರದ ಸೇಂಟ್ ಝೇವಿಯರ್ ಶಾಲೆ ಸೇರಿದಂತೆ ಏಳು ಖಾಸಗಿ ಶಾಲೆಗಳು, ತಮಗೆ ಅಲ್ಪಸಂಖ್ಯಾತ ಶಾಲೆಗಳ ಸ್ಥಾನಮಾನ ಇರುವುದರಿಂದ ಸುಪ್ರೀಂಕೋರ್ಟ್ ತೀರ್ಪು ಪ್ರಕಾರ ಆರ್‌ಟಿಐ ಕೋಟಾ ಅನ್ವಯವಾಗುವುದಿಲ್ಲ ಆದ್ದರಿಂದ ಸೀಟು ನೀಡುವುದಿಲ್ಲ ಎಂದು ಹೇಳಿದ್ದವು. [ಅಲ್ಪಸಂಖ್ಯಾತ ಶಾಲೆಗಳಲ್ಲಿ ಸಮಿತಿ ರಚನೆ]
ವಿದ್ಯಾರ್ಥಿಗಳು ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ತೀರ್ಪನ್ನು ಪ್ರಕಟಿಸಿದೆ. ಜೆ.ಪಿ ನಗರದ ಕ್ಲಾರೆನ್ಸ್ ಸ್ಕೂಲ್ ಹೊರತುಪಡಿಸಿ ಉಳಿದ ಆರು ಶಾಲೆಗಳು ಈ ವರ್ಷ ಈಗಾಗಲೇ ಶಿಕ್ಷಣ ಇಲಾಖೆ ಆಯ್ಕೆ ಮಾಡಿ ಕಳುಹಿಸಿಕೊಟ್ಟಿರುವ ಮಕ್ಕಳಿಗೆ ಆರ್‌ಟಿಐ ಅಡಿ ಸೀಟು ನೀಡಬೇಕು. ಕೋರ್ಟ್ ಮುಂದೆ ಬಂದಿರುವ ಮಕ್ಕಳಲ್ಲದೆ ಶಿಕ್ಷಣ ಇಲಾಖೆ ಆಯ್ಕೆ ಮಾಡಿ ಕಳುಹಿಸಿಕೊಟ್ಟಿರುವ ಇತರೆ ಮಕ್ಕಳಿಗೂ ಪ್ರವೇಶ ಕಲ್ಪಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ನಮಗೆ ಅಲ್ಪಸಂಖ್ಯಾತ ಶಾಲೆಗಳ ಸ್ಥಾನಮಾನವಿದೆ ಎಂದು ಹೇಳುವ ಶಾಲೆಗಳು ಅವುಗಳಿಗೆ ಪೂರಕವಾದ ಯಾವುದೇ ದಾಖಲೆಗಳನ್ನು ಹಾಜರುಪಡಿಸಿಲ್ಲ ಅಥವಾ ಪ್ರಮಾಣಪತ್ರಗಳನ್ನು ಸಲ್ಲಿಸಿಲ್ಲ. ರಾಜ್ಯ ಸರ್ಕಾರವಾಗಲಿ ಅಥವಾ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದಿಂದ ಪ್ರಮಾಣ ಪತ್ರ ಪಡೆದಿಲ್ಲ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.












Click it and Unblock the Notifications