ಒಗ್ಗೂಡಿ ಬಾಳುವ ವಯಸ್ಸನಲ್ಲಿ ವಿಚ್ಛೇದನ ಮೊರೆ ಹೋಗಿರುವ ವೃದ್ಧರು
ಬೆಂಗಳೂರು, ಆ. 25 : ದಾಂಪತ್ಯ ಜೀವನದಲ್ಲಿ ಮದುವೆ ಆದ ಸಂದರ್ಭದಲ್ಲಿ ಬಿರುಕು ಬರುವುದು ಸಹಜ. ಆದರೆ, ಅರಳು - ಮರಳು ವಯಸ್ಸಿನಲ್ಲಿ "ನಿನಗೆ ನಾನು- ನನಗೆ ನೀನು" ಎಂದು ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಂಡು ವಯೋ ಸಹಜ ದಿನಗಳನ್ನು ಸಂತೋಷದಿಂದ ಕಳೆಯುವರೇ ಜಾಸ್ತಿ. ಆದ್ರೆ ಇಲ್ಲೊಂದು ದಂಪತಿ ಹೀಗೆ ಕೂಡಿ ಬಾಳಬೇಕಾದ ವಯಸ್ಸಿನಲ್ಲಿ ಒಬ್ಬರಿಗೊಬ್ಬರು ಮೋಸ ಮಾಡಿಕೊಂಡಿದ್ದಾರೆ. ಒಬ್ಬರ ಮೇಲೊಬ್ಬರು ಪರಸ್ಪರ ಕೇಸು ಹಾಕಿಸಿಕೊಂಡಿದ್ದಾರೆ.
ಓಡಾಡಲಾಗದ ವಯಸ್ಸಿನಲ್ಲಿ ಗಂಡನ ವಿರುದ್ಧ ಬೇಕಾಬಿಟ್ಟಿ ಕೇಸು ಹಾಕಿಸಿದ್ದ ಪತ್ನಿ ಎಲ್ಲಾ ಕೇಸು ವಾಪಸು ತೆಗೆದುಕೊಳ್ಳುತ್ತೇನೆ ಎಂದು ನಂಬಿಸಿ ಗಂಡನಿಂದ 4 ಕೋಟಿ ರೂ. ಹಣ ಪಡೆದು ಎಸ್ಕೇಪ್ ಆಗಿದ್ದಾರೆ. ಎಸ್ಕೇಪ್ ಆಗಿರುವ ಹೆಂಡತಿ ವಿರುದ್ಧ ವಂಚನೆ ಕೇಸು ದಾಖಲಿಸಿ ಗಂಡ ಕಾನೂನು ಸಮರ ಸಾರಿದ್ದಾನೆ.
ಇಂತಹ ಅಪರೂಪದ ಪ್ರಕರಣ ನಡೆದಿರುವುದು ಬೆಂಗಳೂರಿನ ಬಸವನಗುಡಿಯಲ್ಲಿ. ಆತನ ಹೆಸರು ಕೃಷ್ಣ. ವಯಸ್ಸು 65 ವರ್ಷ. ಇವರ ಪತ್ನಿ ಸಾಧನಾ ಮೂಲತಃ ಮಹಾರಾಷ್ಟ್ರದ ಪೂನಾ ಮೂಲದವರಾಗಿದ್ದು, ವಯಸ್ಸು 60 ವರ್ಷ. ಮಹಾರಾಷ್ಟ್ರ ಪುಣೆ ಮೂಲದ ಸಾಧನಾ ಎಂಬುವರನ್ನು 1984 ರಲ್ಲಿ ಮದುವೆಯಾಗಿದ್ದರು. ಶ್ರೀಮಂತ ಮನೆತನ ಹಿನ್ನೆಲೆ ಹೊಂದಿದ್ದ ಕೃಷ್ಣ ಹಾಗೂ ಸಾಧನಾ ಅನೋನ್ಯವಾಗಿ 34 ವರ್ಷ ಕಳೆದಿದ್ದಾರೆ. ಇಬ್ಬರದ್ದು ಜೀವನದಲ್ಲಿ ಎಲ್ಲಾ ನೋಡಿ ಆಯ್ತು ಇನ್ನು ಸಂಧ್ಯಾಕಾಲವನ್ನು ಆನಂದಮಯವಾಗಿ ಕಳೆಯುವಂತಹ ವಯಸ್ಸಿನಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ನಾಲ್ಕು ವರ್ಷದ ಹಿಂದೆ ಬೇರ್ಪಟ್ಟು ಪ್ರತ್ಯೇಕವಾಗಿ ವಾಸವಾಗಿದ್ದಾರೆ.

ಗಂಡನ ಮೇಲೆ ಸರಣಿ ಕೇಸು
ಯಾವಾಗ ಇಬ್ಬರೂ ಬೇರ್ಪಟ್ಟರೋ, ವೃತ್ತಿಯಲ್ಲಿ ಉದ್ಯಮಿಯಾಗಿರುವ ಕೃಷ್ಣ ವಿರುದ್ಧ ಮಹಾರಾಷ್ಟ್ರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಜೀವನಾಂಶ ಕೋರಿ ಪತ್ನಿ ಸಾಧನಾ ಅರ್ಜಿ ಸಲ್ಲಿಸಿದ್ದಾರೆ. ಇದಲ್ಲದೇ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ದಾನ ಪತ್ರ ರದ್ದು ಮಾಡುವಂತೆ ಇನ್ನೊಂದು ಕೇಸು ಪತಿ ಕೃಷ್ಣ ವಿರುದ್ಧವೇ ಪತಿ ನೀಡಿದ್ದಾರೆ. ಜತೆಗೆ ಗಂಡನ ಆಸ್ತಿಯಲ್ಲಿ ಪಾಲು ಕೇಳಿಯೂ ಮತ್ತೊಂದು ಕೇಸು ಜಡಿದಿದ್ದರು.

ಬುದ್ಧಿವಾದ ಹೇಳಿದರೂ ಕೇಳಿರಲಿಲ್ಲ
ಇಳಿ ವಯಸ್ಸಿನಲ್ಲಿ ಯಾಕೆ ಹೀಗೆ ಮಾಡಿಕೊಳ್ಳುತ್ತಿದ್ದೀರಾ ಎಂದು ಬುದ್ಧಿವಾದ ಹೇಳಿದರೂ ಕೇಳಿರಲಿಲ್ಲ. ಒಟ್ಟು ವೃದ್ಧ ಪತಿ ವಿರುದ್ಧ ಮೂರು ಕೇಸು ಜಡಿದಿದ್ದರು. ಓಡಾಡಲಾಗದ ಪರಿಸ್ಥಿತಿಯಲ್ಲಿ ಮೂರು ಕೇಸು ಜಡಿದು ಅಲೆಸುತ್ತಿದ್ದ ಪತ್ನಿ ಸಾಧನಾ ಜತೆ ಕೃಷ್ಣ ಸಂಧಾನ ಮಾಡಿಕೊಂಡಿದ್ದರು. ಪತ್ನಿ ಸಾಧನಾ ಅವರಿಗೆ ನಾಲ್ಕು ಕೋಟಿ ಹಣ ಕೊಟ್ಟು ಎಲ್ಲಾ ಪ್ರಕರಣ ವಾಪಸು ಪಡೆಯುವ ಬಗ್ಗೆ ಒಪ್ಪಿ ಸಂಧಾನ ಮಾಡಿಕೊಂಡಿದ್ದರು. ಕೌಟುಂಬಿಕ ಬಿರುಕನ್ನು ಇತ್ಯರ್ಥ ಪಡಿಸಿಕೊಳ್ಳುವುದಾಗಿ ನ್ಯಾಯಾಲಯದ ಮುಂದೆ ಸಂಧಾನದ ವಿವರ ಸಲ್ಲಿಸಿದ್ದರು.
ಸಂಧಾನದ ಪ್ರಕಾರ ನಾಲ್ಕು ಕೋಟಿ ಹಣವನ್ನು ಸಾಧನಾ ಅವರಿಗೆ ಕೃಷ್ಣ ನೀಡಿದ್ದರು. ನಾಲ್ಕು ಕೋಟಿ ಹಣವನ್ನು ಎರಡು ಸಲ ಬ್ಯಾಂಕ್ ಮೂಲಕ ಪಡೆದಿರುವ ಸಾಧನಾ ಗಂಡನ ವಿರುದ್ಧ ದಾಖಲಿಸಿದ್ದ ಯಾವುದೇ ಪ್ರಕರಣವನ್ನು ವಾಪಸು ಪಡೆದಿಲ್ಲ.

ಹಣ ತೆಗೆದುಕೊಂಡು ಮೋಸ ಮಾಡಿದ್ದಾರೆ
ನ್ಯಾಯಾಲಯಕ್ಕೆ ಬಂದು ಸಹಿ ಹಾಕದೇ ಹಣ ತೆಗೆದುಕೊಂಡು ಮೋಸ ಮಾಡಿದ್ದಾರೆ. ಆ. 19 ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ಸಾಧನಾ, ಹಾಜರಾಗಿಲ್ಲ. ಪತ್ನಿ ಮಾಡಿದ ಮೋಸದಿಂದ ಬೇಸತ್ತ ವೃದ್ಧ ಪತಿ ಕೃಷ್ಣ ಪತ್ನಿಯ ವಿರುದ್ಧ ಇದೀಗ ವಂಚನೆ ದೂರು ದಾಖಲಿಸಿದ್ದಾರೆ. ಸಂಧಾನದ ಮಾತುಕತೆಯಂತೆ ಕೇಸು ವಾಪಸು ಪಡೆಯುವಾಗಿ ನಂಬಿಸಿ ನಾಲ್ಕು ಕೋಟಿ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪತ್ನಿ ಸಾಧನಾ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Recommended Video

ವಾಣಿಜ್ಯೋದ್ಯಮಿ ಆಗಿರುವ ಕೃಷ್ಣ
ವೃತ್ತಿಯಲ್ಲಿ ವಾಣಿಜ್ಯೋದ್ಯಮಿ ಆಗಿರುವ ಕೃಷ್ಣ ಮನೆಯಲ್ಲಿ ನೆಮ್ಮದಿಯಾಗಿ ಕಳೆಯುವ ಸಂದರ್ಭದಲ್ಲಿ ಇದೀಗ ಕೋರ್ಟ್ ಅಲೆಯುತ್ತಿದ್ದಾರೆ. ಇನ್ನು ಪತ್ನಿ ಕೂಡ ಪತಿ ವಿರುದ್ಧ ಕೇಸುಗಳನ್ನು ಜಡಿಸಿದ್ದಾರೆ. ಹೀಗಾಗಿ ಪತ್ನಿ ಸಾಧನಾ ವಿರುದ್ಧ ವೃದ್ಧ ಅಜ್ಜನೇ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಇಳಿ ವಯಸ್ಸಿನಲ್ಲಿ ಕೋರ್ಟ್ ಕಚೇರಿ ಎಂದು ಒಬ್ಬರಿಗೊಬ್ಬರು ದ್ವೇಷ ಸಾಧಿಸುತ್ತಿದ್ದಾರೆ. 34 ವರ್ಷ ದಾಂಪತ್ಯ ಮಾಡಿದವರು ಈಗ ಒಬ್ಬರಿಗೊಬ್ಬರು ದೂರ ಆಗುತ್ತಿದ್ದಾರೆ. ಇವರ ಬಿಟ್ಟೋಗುವಿಕೆ ಮೂಲ ಗುಟ್ಟು ಮಾತ್ರ ಹೊರ ಬಿದ್ದಿಲ್ಲ. ಈ ವಯಸ್ಸಿನಲ್ಲಿ ಒಬ್ಬರಿಗೆ ಇನ್ನೊಬ್ಬರ ಆಶ್ರಯ ಬೇಕು. ಯಾಕೆ ಈ ರೀತಿ ದೂರ ವಾಗುತ್ತಿದ್ದಾರೋ ಗೊತ್ತಿಲ್ಲ!












Click it and Unblock the Notifications