ಬೆಂಗಳೂರು ರಸ್ತೆಗುಂಡಿ ಮುಚ್ಚುವುದಕ್ಕೆ 5 ವಿಶೇಷ ತಂಡ ರಚನೆ!
ಬೆಂಗಳೂರಿನಲ್ಲಿ ಪ್ರತಿ ಬಾರಿಯೂ ಮಳೆಗಾಲದಲ್ಲಿ ರಸ್ತೆಗುಂಡಿಗಳು ನಿರ್ಮಾಣವಾಗುತ್ತವೆ. ಪ್ರತಿ ಬಾರಿಯೂ ರಸ್ತೆಗುಂಡಿಗಳನ್ನು ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಸ್ಥಳೀಯ ಆಡಳಿತವು ಅನುವು ಮಾಡಿಕೊಡುತ್ತಿತ್ತು. ಆದರೆ ಈ ಬಾರಿ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ರಸ್ತೆಗುಂಡಿಗಳನ್ನು ಮುಚ್ಚುವ ಕ್ರಮದಲ್ಲೂ ನಿರ್ದಿಷ್ಟ ನಿಯಮ ಪಾಲನೆ ಮಾಡಲಾಗುತ್ತಿಲ್ಲ ಎನ್ನುವ ಆರೋಪ ಸಹ ಕೇಳಿ ಬಂದಿದೆ.
ಇದೀಗ ಈ ವಿಚಾರವಾಗಿ ಮಾತನಾಡಿರುವ ಗ್ರೇಟರ್ ಬೆಂಗಳೂರು ಆಡಳಿತದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು, ಹೆಚ್ಚು ತಂಡಗಳನ್ನು ನಿಯೋಜಿಸಿಕೊಂಡು ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಕೆಲವೊಂದು ಪ್ರಮುಖ ನಿರ್ದೇಶನಗಳನ್ನು ನೀಡಿದ್ದಾರೆ.

ಗ್ರೇಟರ್ ಬೆಂಗಳೂರು ಆಡಳಿತ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ವರ್ಚುವಲ್ ಮೂಲಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದ ಆರ್ಟಿರಿಯಲ್ ಮತ್ತು ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಬಾಕಿಯಿರುವ ಗುಂಡಿಗಳನ್ನು ಆದ್ಯತೆಯ ಮೇರೆಗೆ ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವುದರ ಜೊತೆಗೆ ವಾರ್ಡ್ ಮಟ್ಟದ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು ನಿಯೋಜನೆಗೊಂಡಿರುವ ಗುತ್ತಿಗೆದಾರರಿಂದ ತ್ವರಿತವಾಗಿ ಕೆಲಸ ಮಾಡಿಸಲು ಸೂಚಿಸಿದ್ದಾರೆ.
ಅಲ್ಲದೇ ಪಾಲಿಕೆಯ ಡಾಂಬರು ಮಿಶ್ರಣ ಘಟಕದಿಂದ 5 ನಗರ ಪಾಲಿಕೆಗಳಿಗೆ ಇಂಡೆಂಟ್‌ಗೆ ಅನುಗುಣವಾಗಿ ಡಾಂಬರು ಮಿಶ್ರಣ ಪೂರೈಕೆ ಆಗುತ್ತಿಲ್ಲ. ಈ ಕುರಿತು ಅಗತ್ಯ ಕ್ರಮ ಕೈಗೊಂಡು ಇಂಡೆಂಟ್‌ಗೆ ಅನುಗುಣವಾಗಿ ಡಾಂಬರು ಮಿಶ್ರಣ ಪೂರೈಸುವಂತೆ ಗುತ್ತಿಗೆದಾರರಿಗೆ ನಿರ್ದೇಶನ ಕೊಟ್ಟಿದ್ದಾರೆ.
ಹೆಚ್ಚು ತಂಡಗಳನ್ನು ನಿಯೋಜಿಸಿ ರಸ್ತೆ ಗುಂಡಿಗಳನ್ನು ಮುಚ್ಚಿ: ಡಾಂಬರು ಮಿಶ್ರಣ ಘಟಕದಿಂದ ಆರ್ಟಿರಿಯಲ್ ಮತ್ತು ಸಬ್-ಆರ್ಟಿರಿಯಲ್ ರಸ್ತೆಗಳಿಗಾಗಿ ಡಾಂಬರು ಪೂರೈಕೆ ನಡೆಯುತ್ತಿದ್ದು, ಸದ್ಯಕ್ಕೆ 8 ತಂಡಗಳು ಕಾರ್ಯನಿರ್ವಹಿಸುತ್ತಿವೆ. ಅದರ ಜೊತೆಗೆ ಹೆಚ್ಚುವರಿಯಾಗಿ 5 ತಂಡಗಳನ್ನು ನಿಯೋಜಿಸಿ, ಅವಶ್ಯಕತೆ ಇರುವ ಪ್ರದೇಶಗಳಲ್ಲಿ ಬಳಸಿಕೊಂಡು ಕಾಲಮಿತಿಯೊಳಗಾಗಿ ಗುಂಡಿಗಳನ್ನು ಮುಚ್ಚುವಂತೆ ಸೂಚನೆ ಕೊಡಲಾಗಿದೆ.
ಒಂದು ತಂಡದಲ್ಲಿ ಒಂದು ರೋಲರ್, ಒಂದು ಟ್ರ್ಯಾಕ್ಟರ್ ಹಾಗೂ 20 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ರಸ್ತೆ ಗುಂಡಿಗಳನ್ನು ಗುಣಮಟ್ಟದಿಂದ ಮುಚ್ಚುವಂತೆ ಸೂಚನೆ ನೀಡಿದರು. ನಗರದಲ್ಲಿ ಬಾಕಿಯಿರುವ ರಸ್ತೆ ಗುಂಡಿಗಳನ್ನು ಶೀಘ್ರಗತಿಯಲ್ಲಿ ಮುಚ್ಚುವ ಸಲುವಾಗಿ ಪ್ರತಿನಿತ್ಯ 30 ಲೋಡ್‌ಗಳ ಡಾಂಬರು ಮಿಶ್ರಣವನ್ನು ಘಟಕದಿಂದ ಪೂರೈಸುವಂತೆ ಗುತ್ತಿಗೆದಾರರಿಗೆ ನಿರ್ದೇಶನ ಕೊಟ್ಟಿದ್ದಾರೆ.
ಪ್ರಮುಖ ರಸ್ತೆಗಳಲ್ಲಿ ರಾತ್ರಿ ವೇಳೆ ಗುಂಡಿಗಳನ್ನು ಮುಚ್ಚಿ: ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವುದರಿಂದ ರಾತ್ರಿ ವೇಳೆಯಲ್ಲಿ ಅಗತ್ಯ ಡಾಂಬರು ಪಡೆದು ಗುಂಡಿಗಳನ್ನು ಮುಚ್ಚುವಂತೆ ಸೂಚಿಸಿದರು. ಜೊತೆಗೆ, ವಾರ್ಡ್ ರಸ್ತೆಗಳಿಗೆ ಪಾಲಿಕೆಯ ಡಾಂಬರು ಮಿಶ್ರಣ ಘಟಕದಿಂದಲೇ ಡಾಂಬರು ಪೂರೈಕೆ ಮಾಡಲು ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್, ಪೊಮ್ಮಲ ಸುನೀಲ್ ಕುಮಾರ್, ಕೆ.ಎನ್. ರಮೇಶ್, ಡಾ. ರಾಜೇಂದ್ರ ಕೆ.ವಿ., ಅಪರ ಆಯುಕ್ತರಾದ ಆರ್. ಲತಾ, ದಲ್ಜಿತ್ ಕುಮಾರ್, ಲೋಖಂಡೆ ಸ್ನೇಹಲ್ ಸುಧಾಕರ್ ಸೇರಿದಂತೆ ಹಲವರು ಹಾಜರಿದ್ದರು.












Click it and Unblock the Notifications