ಬೆಂಗಳೂರು; 4437 ಕುಟುಂಬಗಳಲ್ಲಿ ಕೊರೊನಾ ಲಸಿಕೆ ಪಡೆಯಲು ಹಿಂಜರಿಕೆ
ಬೆಂಗಳೂರು, ಅಕ್ಟೋಬರ್ 07: ಬೆಂಗಳೂರು ನಗರ ಪ್ರದೇಶದಲ್ಲಿ ಕೊರೊನಾ ಸೋಂಕಿನ ವಿರುದ್ಧ ಲಸಿಕಾ ಅಭಿಯಾನವನ್ನು ವೇಗಗತಿಯಲ್ಲಿ ನಡೆಸಲಾಗುತ್ತಿದೆ. ವಾರ್ಡ್‌ವಾರು ಲಸಿಕಾ ಶಿಬಿರಗಳು ಹಾಗೂ ವಿಶೇಷ ಅಭಿಯಾನಗಳ ಮೂಲಕ ನಗರದ ಎಲ್ಲಾ 198 ವಾರ್ಡ್‌ಗಳಲ್ಲಿ ಸುಮಾರು 84% ಜನಸಂಖ್ಯೆಗೆ ಬಿಬಿಎಂಪಿ ಕೊರೊನಾ ಲಸಿಕೆ ಹಾಕಿದ್ದು, ಇದೀಗ ಲಸಿಕೆ ಪಡೆಯದವರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ.
ಕೆಲವು ದಿನಗಳಿಂದ ಬಿಬಿಎಂಪಿ, ನಗರದಲ್ಲಿ ವಾರ್ಡ್‌ವಾರು ಹಾಗೂ ಬ್ಲಾಕ್‌ವಾರು ಲಸಿಕೆ ಸಮೀಕ್ಷೆ ಕೈಗೊಂಡಿದೆ. ಈ ಮೂಲಕ ಲಸಿಕೆ ಪಡೆಯದವರ ಸಂಖ್ಯೆಯನ್ನು ಕಲೆ ಹಾಕುತ್ತಿದೆ. ನಗರದಲ್ಲಿ ಸುಮಾರು 4400 ಕುಟುಂಬಗಳು ಕೊರೊನಾ ಲಸಿಕೆ ಪಡೆದುಕೊಳ್ಳಲು ಹಿಂಜರಿಯುತ್ತಿರುವುದಾಗಿ ಸಮೀಕ್ಷೆ ತಿಳಿಸಿದೆ.
4400 ಕುಟುಂಬಗಳ ಸುಮಾರು ಹತ್ತು ಸಾವಿರ ಮಂದಿ ಇನ್ನೂ ಲಸಿಕೆ ಪಡೆದುಕೊಂಡಿಲ್ಲ ಎಂದು ಇದುವರೆಗೆ ನಡೆದಿರುವ ಸಮೀಕ್ಷೆಯಿಂದ ತಿಳಿದುಬಂದಿದೆ.

ಬೆಂಗಳೂರು ನಗರ ಪ್ರದೇಶದಲ್ಲಿ 100% ಲಸಿಕಾ ಗುರಿ ತಲುಪಲು ಸಾಕಷ್ಟು ಪ್ರಯತ್ನಗಳು ಹಾಗೂ ಹೊಸ ಹೊಸ ತಂತ್ರಗಳ ಹೊರತಾಗಿಯೂ ಹಲವು ಜನರು ಕೊರೊನಾ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ. ಅದರಲ್ಲಿಯೂ ಕೊಳೆಗೇರಿಯಲ್ಲಿ ಹಲವು ಕಾರಣಗಳಿಂದ ಲಸಿಕೆ ಪಡೆಯಲು ಜನರು ಹಿಂಜರಿಯುತ್ತಿದ್ದಾರೆ.
ಬಿಬಿಎಂಪಿ ನೀಡಿರುವ ಮಾಹಿತಿ ಪ್ರಕಾರ, ಇದುವರೆಗೂ 76,373 ಮನೆಗಳಲ್ಲಿ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಇನ್ನೂ 4,437 ಮನೆಗಳಲ್ಲಿನ ಜನರು ಲಸಿಕೆ ಪಡೆದುಕೊಂಡಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
'ಲಸಿಕೆ ಪಡೆಯಲು ಹಲವು ಜನರು ಹಿಂದೇಟು ಹಾಕುತ್ತಿದ್ದಾರೆ. ಕೊಳೆಗೇರಿಗಳಲ್ಲಿ ಹಿಂಜರಿಕೆ ಹೆಚ್ಚಾಗಿದೆ' ಎಂದು ಬಿಬಿಎಂಪಿ ಪೂರ್ವ ವಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 'ಕಡಿಮೆ ಆದಾಯ ಗುಂಪಿನ ಜನರು ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ಹೆದರಿಕೆಯಿಂದಾಗಿ ಲಸಿಕೆ ಪಡೆದುಕೊಳ್ಳುತ್ತಿಲ್ಲ. ಸರ್ವೇ ಸಿಬ್ಬಂದಿ ಬಂದಾಗ ಪ್ರತಿಕ್ರಿಯೆ ನೀಡದೇ ಬಾಗಿಲು ಹಾಕಿಕೊಳ್ಳುವ ಸಂಗತಿಗಳು ನಡೆಯುತ್ತಿವೆ. ಲಸಿಕೆ ಪಡೆದ ನಂತರ ಜ್ವರ ಬಂದರೆ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಹಲವರು ಉತ್ತರಿಸಿದ್ದಾರೆ' ಎಂದು ವಿವರಣೆ ನೀಡಿದರು.

'ಲಸಿಕೆ ಪಡೆದ ನಂತರ ಆಗಬಹುದಾದ ಅಡ್ಡಪರಿಣಾಮಗಳ ಕಾರಣದಿಂದ ಕೆಲವು ದಿನಗಳವರೆಗೆ ಮದ್ಯ ಸೇವನೆ ಮಾಡಬಾರದೆಂದು ಎಂದು ಸೂಚಿಸಲಾಗಿದೆ. ಈ ಕಾರಣಕ್ಕೆ ಲಸಿಕೆ ಪಡೆಯದವರು ಇದ್ದಾರೆ. ಲಸಿಕೆ ಪಡೆಯಲು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕು, ಇದರಿಂದ ಒಂದು ದಿನ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಇನ್ನೂ ಕೆಲವರು ಲಸಿಕೆ ಪಡೆಯುತ್ತಿಲ್ಲ' ಎಂದು ತಿಳಿಸಿದ್ದಾರೆ.
ಈ ಕುರಿತು ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಡಿ ಮಾತನಾಡಿದ್ದು, 'ನೌಕರಿಯಲ್ಲಿ ರಜೆ ನೀಡದ ಕಾರಣ ಲಸಿಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನೂ ಕೆಲವರು ಲಸಿಕೆ ಪಡೆಯುತ್ತೇವೆ ಎಂದು ತೆಗೆದುಕೊಳ್ಳದೇ ಉಳಿಯುತ್ತಿದ್ದಾರೆ. ಕೆಲವು ಬ್ಲಾಕ್‌ಗಳಲ್ಲಿ ಸಾಕಷ್ಟು ಮಂದಿ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಆ ಬ್ಲಾಕ್‌ಗಳನ್ನು ಮ್ಯಾಪ್‌ನಲ್ಲಿ ಗುರುತಿಸಿ ವರದಿಯನ್ನು ಮುಖ್ಯ ಕಚೇರಿಗೆ ಕಳುಹಿಸಲು ಸೂಚಿಸಲಾಗಿದೆ' ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಅಂಥ ಬ್ಲಾಕ್‌ಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. (ಮಾಹಿತಿ, ಶಿಕ್ಷಣ ಹಾಗೂ ಸಂವಹನ) ಈ ಕಾರ್ಯತಂತ್ರದ ಮೂಲಕ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದರು.
ಬಿಬಿಎಂಪಿ ಮಾಹಿತಿ ಪ್ರಕಾರ, ದಕ್ಷಿಣ ವಲಯದಲ್ಲಿನ 1128 ಕುಟುಂಬಗಳು ಲಸಿಕೆ ಪಡೆಯದೇ ಉಳಿದಿರುವ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪಶ್ಚಿಮ ವಲಯವು ಲಸಿಕೆ ಪಡೆದುಕೊಳ್ಳದ 780 ಮನೆಗಳನ್ನು ಹೊಂದಿದೆ.
'ನಾವು ಲಸಿಕಾ ಶಿಬಿರಗಳಲ್ಲಿ ಜನರಿಗಾಗಿ ಕಾಯಲು ಸಾಧ್ಯವಿಲ್ಲ. ಇನ್ನು ಮುಂದೆ ನಮ್ಮ ತಂಡಗಳು ಮನೆಗಳಿಗೆ ಹೋಗಿ ಲಸಿಕೆ ನೀಡುತ್ತವೆ' ಎಂದು ಹೇಳಿದರು. ಆದರೆ ಇದಕ್ಕೆ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಿಲ್ಲ. ಶೀಘ್ರವೇ ಮನೆ ಬಾಗಿಲಿಗೆ ಲಸಿಕೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications