3,00,000 ಬೆಂಗಳೂರಿನ ಆಸ್ತಿದಾರರಿಗೆ ಬಿಬಿಎಂಪಿಯಿಂದ ಬಿಗ್‌ಶಾಕ್!
ಬೆಂಗಳೂರಿನ ಆಸ್ತಿದಾರರಿಗೆ ಭರ್ಜರಿ ಶಾಕ್ ನೀಡುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮುಂದಾಗಿದೆ. ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೆಲವೊಂದು ಬದಲಾವಣೆಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮುಂದಾಗಿತ್ತು. ಆದರೆ, ಇದನ್ನು ಬೆಂಗಳೂರಿನ ಕೆಲವು ಆಸ್ತಿದಾರರು ದುರುಪಯೋಗಪಡಿಸಿಕೊಂಡಿದ್ದು ಇದೀಗ ಈ ಆಸ್ತಿದಾರರಿಗೆ ಶಾಕ್ ನೀಡುವುದಕ್ಕೆ ಬಿಬಿಎಂಪಿಯ ಅಧಿಕಾರಿಗಳು ಮುಂದಾಗಿದ್ದಾರೆ. ಬೆಂಗಳೂರಿನ ಬರೋಬ್ಬರಿ 3 ಲಕ್ಷಕ್ಕೂ ಹೆಚ್ಚು ಆಸ್ತಿದಾರರಿಗೆ ಇದೀಗ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಅದೇನು ಎನ್ನುವ ವಿವರ ಇಲ್ಲಿದೆ ನೋಡೋಣ.
ಬೆಂಗಳೂರಿನಲ್ಲಿ ಆಸ್ತಿಯ ವಿಸ್ತೀರ್ಣವನ್ನು ಘೋಷಿಸಿಕೊಳ್ಳುವುದಕ್ಕೆ ಆಯಾ ಆಸ್ತಿದಾರರಿಗೆ ಬಿಬಿಎಂಪಿಯು ಈ ಹಿಂದೆ ಅವಕಾಶವನ್ನು ನೀಡಿತ್ತು. ಆದರೆ ಬೆಂಗಳೂರಿನ ಹಲವು ಆಸ್ತಿದಾರರು ಇದನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಬುದ್ಧಿ ಕಲಿಸುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಕಡಿಮೆ ವಿಸ್ತೀರ್ಣವನ್ನು ತೋರಿಸಿ ಕಡಿಮೆ ಆಸ್ತಿ ತೆರಿಗೆ ಪಾವತಿ ಮಾಡಿರುವವರಿಗೆ ಸರಿಯಾಗಿ ಪಾಠ ಕಲಿಸುವುದಕ್ಕೆ ಬಿಬಿಎಂಪಿಯ ಅಧಿಕಾರಿಗಳು ಮುಂದಾಗಿದ್ದಾರೆ. ಈ ಮೂಲಕ ಬೆಂಗಳೂರಿನ 2.5 ಲಕ್ಷದಿಂದ 3 ಲಕ್ಷದ ವರೆಗಿನ ಆಸ್ತಿದಾರರಿಗೆ ತಲೆನೋವು ಎದುರಾಗಿದೆ.

ಬೆಂಗಳೂರಿನ ಆಸ್ತಿದಾರರಿಗೆ ಎದುರಾಯ್ತು ಸಂಕಷ್ಟ: ಇನ್ನು ಬೆಂಗಳೂರಿನ ಆಸ್ತಿದಾರರಿಗೆ ಸಂಕಷ್ಟ ಎದುರಾಗಿದೆ. ಕಟ್ಟಡಗಳ ವಿಸ್ತೀರ್ಣವನ್ನು ಮರೆಮಾಚಿ ಮೋಸ ಮಾಡಿರುವ ಹಾಗೂ ಕಡಿಮೆ ಮೊತ್ತದ ಆಸ್ತಿ ತೆರಿಗೆ ಪಾವತಿ ಮಾಡಿರುವವರಿಗೆ ನೋಟಿಸ್ ನೀಡುವುದು ಹಾಗೂ ಅದರೊಂದಿಗೆ ದಂಡ ವಸೂಲಿ ಮಾಡುವುದಕ್ಕೆ ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮುಂದಾಗಿದ್ದಾರೆ.
ನಗರದಲ್ಲಿ ಅಕ್ರಮವಾಗಿ ಆಸ್ತಿ ತೆರಿಗೆ ಪಾವತಿ ಮಾಡಿರುವವರಿಗೆ ದಂಡ ವಿಧಿಸಿ ನೋಟಿಸ್ ಜಾರಿ ಮಾಡುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ಅವರು ಹೇಳಿದ್ದಾರೆ.
ಸ್ವಯಂ-ಮೌಲ್ಯಮಾಪನ ಯೋಜನೆಯಡಿಯಲ್ಲಿ Self-Assessment Scheme (SAS) ಆಸ್ತಿ ಮಾಲೀಕರು ತಪ್ಪಾದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಹೀಗಾಗಿ, ಆಸ್ತಿಯ ವಿಸ್ತೀರ್ಣವನ್ನು ಪರಿಶೀಲನೆ ಮಾಡುವ ಉದ್ದೇಶದಿಂದ ಡ್ರೋನ್‌ಗಳನ್ನು ಬಳಸಲಾಗಿದೆ. ಇದರಲ್ಲಿ ತಪ್ಪಾದ ಆಸ್ತಿ ಘೋಷಣೆ ಮಾಡಿರುವುದು ಬಹಿರಂಗವಾಗಿದೆ. ಈ ಆಧಾರದ ಮೇಲೆ ಆಸ್ತಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಿದ್ದೇವೆ. ಅಲ್ಲದೇ ಬಡ್ಡಿಯೊಂದಿಗೆ ಬಾಕಿ ಆಸ್ತಿ ತೆರಿಗೆಯನ್ನು ಪಾವತಿ ಮಾಡುವುದಕ್ಕೆ ಸೂಚನೆ ನೀಡಲಾಗುವುದು ಎಂದು ಹೇಳಲಾಗಿದೆ.
ಮಹಾ ಮೋಸ: ಇನ್ನು ಬೆಂಗಳೂರಿನಲ್ಲಿ 25 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಇದರಲ್ಲಿ ಆರನೇ ಒಂದು ಭಾಗದಷ್ಟು ಆಸ್ತಿದಾರರು ಮೋಸ ಮಾಡಿರುವುದು ಬಹಿರಂಗವಾಗಿದೆ. ಐದು ಅಂತಸ್ತಿನ ಕಟ್ಟಡಗಳನ್ನು ಹೊಂದಿರುವವರು ಸಹ ಮೂರು ಅಂತಸ್ತಿನ ಕಟ್ಟಡವನ್ನಷ್ಟೇ ಹೊಂದಿದ್ದೇವೆ ಎಂದು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ಇನ್ನು ಕಳೆದ ವರ್ಷ ಆಸ್ತಿ ತೆರಿಗೆ ಬಾಕಿದಾರರಿಗೆ ಒಂದು ಬಾರಿ ತೆರಿಗೆ ಪಾವತಿ ಮಾಡುವ ಸುವರ್ಣ ಅವಕಾಶವನ್ನು ನೀಡಲಾಗಿತ್ತು. ಆಸ್ತಿ ಮಾಲೀಕರು ಬಾಕಿ ಮೊತ್ತವನ್ನು ಒಂದು ಬಾರಿ OTS ಯೋಜನೆಯ ಮೂಲಕ ಪಾವತಿ ಮಾಡುವುದಕ್ಕೆ ಅವಕಾಶವಿತ್ತು. ಆದರೆ ಹಲವರು ಇದನ್ನೂ ದುರಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕಟ್ಟುನಿಟ್ಟಿನ ಕ್ರಮ: ಬೆಂಗಳೂರಿನಲ್ಲಿ ಯಾವುದೇ ಆಸ್ತಿದಾರರು ಆಸ್ತಿ ತೆರಿಗೆ ವಂಚನೆ ಮಾಡುವುದು ಹಾಗೂ ಆಸ್ತಿ ತೆರಿಗೆ ಪಾವತಿಯಲ್ಲಿ ಮೋಸ ಮಾಡದಂತೆ ನೋಡಿಕೊಳ್ಳುವಲ್ಲಿ ರಾಜ್ಯ ಸರ್ಕಾರವು ಮಹತ್ವದ ಕ್ರಮವನ್ನು ವಹಿಸುತ್ತಿದೆ. ಬೆಂಗಳೂರಿನಲ್ಲಿ ಆಸ್ತಿದಾರರಿಂದ ಎಲ್ಲಾ ಆಸ್ತಿ ತೆರಿಗೆ ಪಾವತಿ ಮಾಡಿಸಿಕೊಳ್ಳುವುದಕ್ಕೆ ಕಟ್ಟುನಿಟ್ಟಿನ ಕ್ರಮ ಅನುಸರಿಸಲಾಗುತ್ತಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications