15 ತಾಸು ಕೆಲಸ, 300 ರೂ. ವೇತನ ಇದು ಜೀತಕ್ಕಿದ್ದವರ ಕಥೆ
ಬೆಂಗಳೂರು, ಮಾ.4 : ಹೆಚ್ಚು ವೇತನ ಕೊಡುವುದಾಗಿ ನಂಬಿಸಿ ಒರಿಸ್ಸಾದಿಂದ ಕಾರ್ಮಿಕರನ್ನು ಕರೆದುಕೊಂಡು ಬಂದು ಜೀತಕ್ಕೆ ಇಟ್ಟುಕೊಂಡಿದ್ದ ಇಟ್ಟಿಗೆ ಕಾರ್ಖನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, 26 ಜೀತದಾಳುಗಳನ್ನು ರಕ್ಷಿಸಿದ್ದಾರೆ. ಪ್ರತಿನಿತ್ಯ ಇವರು 15 ತಾಸು ಕೆಲಸ ಮಾಡುತ್ತಿದ್ದು, ಮಾಸಿಕ 300 ರೂ. ವೇತನ ನೀಡಲಾಗುತ್ತಿತ್ತು.
ಬೆಂಗಳೂರು ಹೊರವಲಯದ ಬಾಗಲೂರಿನ ಇಟ್ಟಿಗೆ ಕಾರ್ಖಾನೆ ಮೇಲೆ ಸೋಮವಾರ ದಾಳಿ ನಡೆಸಿದ ಸಿಐಡಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮಕ್ಕಳು ಸೇರಿದಂತೆ 26 ಜೀತದಾಳುಗಳನ್ನು ರಕ್ಷಿಸಿದರು. ಸ್ವಯಂ ಸೇವಾ ಸಂಸ್ಥೆ ನೆರವಿನಿಂದ ಅವರನ್ನು ಒರಿಸ್ಸಾಗೆ ವಾಪಸ್ ಕಳುಹಿಸಿಕೊಡಲಾಗಿದೆ. [ರಾಮನಗರದಲ್ಲಿ ಜೀತ ಕಾರ್ಮಿಕರಿಗೆ ಸ್ವಾತಂತ್ರ್ಯ ಸಿಕ್ಕಿತು]

12 ಪುರುಷರು, 8 ಮಹಿಳೆಯರು ಹಾಗೂ 6 ಮಕ್ಕಳನ್ನು ಇಟ್ಟಿಗೆ ಕಾರ್ಖನೆಯಲ್ಲಿ ಜೀತದಾಳುಗಳಾಗಿ ಇಟ್ಟುಕೊಂಡಿದ್ದಾರೆ ಎಂದು ಜಸ್ಟಿಸ್ ಮಿಷನ್ ಎಂಬ ಎನ್‌ಜಿಓ ಮಾಹಿತಿ ನೀಡಿತ್ತು. ಇದರ ಅನ್ವಯ ದಾಳಿ ನಡೆಸಿ ಜೀತದಾಳುಗಳನ್ನು ರಕ್ಷಿಸಲಾಗಿದ್ದು, ಇಟ್ಟಿಗೆ ಕಾರ್ಖಾನೆ ಮಾಲೀಕ ಶ್ಯಾಮೇಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
15 ತಾಸು ಕೆಲಸ, 300 ರೂ. ವೇತನ : ಒರಿಸ್ಸಾದಲ್ಲಿ ರಿಕ್ಷಾ ಓಡಿಸಿಕೊಂಡಿದ್ದವರನ್ನು ಭೇಟಿ ಮಾಡಿದ್ದ ಶ್ಯಾಮೇಗೌಡ ಮತ್ತು ದಳ್ಳಾಳಿ ವಾರಕ್ಕೆ 1,500 ರೂ. ಕೂಲಿ ನೀಡುವುದಾಗಿ ಹೇಳಿ ಅಲ್ಲಿಂದ ಅವರನ್ನು ಕರೆದುಕೊಂಡು ಬಂದು ಜೀತಕ್ಕೆ ಇಟ್ಟುಕೊಂಡಿದ್ದರು. ನಿತ್ಯ ಇವರು 15 ತಾಸು ಕೆಲಸ ಮಾಡಬೇಕಿತ್ತು. ಆದರೆ, ಮಾಸಿಕ ಮೂರು ಮಂದಿಯ ಕುಟುಂಬಕ್ಕೆ 300 ರೂ. ವೇತನ ನೀಡುತ್ತಿದ್ದರು.

ಮಕ್ಕಳಿಗೂ ಕೆಲಸ : ಇಟ್ಟಿಗೆ ಕಾರ್ಖನೆಯಲ್ಲಿ ಕಾರ್ಮಿಕರಿಗೆ ಶೌಚಾಲಯದ ಸೌಲಭ್ಯವನ್ನು ಒದಗಿಸಿರಲಿಲ್ಲ. ಮಕ್ಕಳಿಗೂ ಇಟ್ಟಿಗೆ ಜೋಡಿಸುವ ಕೆಲಸ ನೀಡುತ್ತಿದ್ದರು. ಮಂಗಳವಾರ ಮಾತ್ರ ಕಾರ್ಮಿಕರಿಗೆ ಎರಡು ಗಂಟೆಗಳ ಕಾಲ ಬಿಡುವು ನೀಡುತ್ತಿದ್ದರು. ಇಟ್ಟಿಗೆಗಳನ್ನು ಒಡೆದರೆ ಮಕ್ಕಳ ಮೇಲೆ ಪೈಪ್‌ನಿಂದ ಹಲ್ಲೆ ನಡೆಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications