24,000 ಸಾವಿರ ಬೆಂಗಳೂರಿನ ಆಸ್ತಿದಾರರಿಗೆ ಜಿಬಿಎಯಿಂದ ಶಾಕ್, ಆಸ್ತಿ ತೆರಿಗೆ ಪರಿಷ್ಕರಣೆ!
ಬೆಂಗಳೂರಿನ ಸ್ಥಳೀಯ ಆಡಳಿತವು ಬೃಹತ್ ಬೆಂಗಳೂರಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಬದಲಾದ ಮೇಲೆ ಬೆಂಗಳೂರಿನ ಸ್ಥಳೀಯ ಆಡಳಿತಕ್ಕೆ ಆಸ್ತಿ ತೆರಿಗೆ ಸಂಗ್ರಹದಲ್ಲಿ ಭಾರೀ ಹಿನ್ನಡೆ ಆಗಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಹೌದು ಬೆಂಗಳೂರಿನ ಸ್ಥಳೀಯ ಆಡಳಿತಕ್ಕೆ ಆಸ್ತಿ ತೆರಿಗೆ ಸಂಗ್ರಹವು ಪ್ರಮುಖ ಆದಾಯಗಳಲ್ಲಿ ಒಂದಾಗಿದೆ. ಆದರೆ ಈ ವರ್ಷ ಬೆಂಗಳೂರಿನ ಆಡಳಿತದ ಇತಿಹಾಸದಲ್ಲೇ ಮಹತ್ವದ ಬದಲಾವಣೆ ಆಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬದಲಿಗೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಆದರೆ, ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಐದು ಪಾಲಿಕೆಗಳು ರಚನೆಯಾಗಿದ್ದು, ಆಸ್ತಿ ತೆರಿಗೆ ಸಂಗ್ರಹಕ್ಕೆ ತುಸು ಹಿನ್ನಡೆ ಆಗಿದೆ.

ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣವು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ಅವರು ಮಾತನಾಡಿ, ನಗರದ 5 ನಗರ ಪಾಲಿಕೆಗಳಲ್ಲಿ 6700 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಈವರೆಗೆ 3533 ಕೋಟಿ ರೂ. ಸಂಗ್ರಹಿಸಲಾಗಿದೆ. ಈ ಪೈಕಿ ಆಸ್ತಿ ತೆರಿಗೆ ಸಂಗ್ರಹಿಸಲು ಹೆಚ್ಚು ಗಮನ ನೀಡಿ ಪರಿಷ್ಕರಣೆ ಪ್ರಕರಣಗಳು ಹಾಗೂ ಸುಸ್ತಿದಾರರಿಂದ ಆಸ್ತಿ ತೆರಿಗೆ ಸಂಗ್ರಹಿಸಲು ಸೂಚನೆ ಕೊಟ್ಟಿದ್ದಾರೆ.
24,000 ಆಸ್ತಿತೆರಿಗೆ ಪರಿಷ್ಕರಣೆ ಪ್ರಕರಣಗಳು: ಇನ್ನು ಬೆಂಗಳೂರಿನ 5 ನಗರ ಪಾಲಿಕೆಗಳಲ್ಲಿ 24 ಸಾವಿರ ಆಸ್ತಿಗಳ ಆಸ್ತಿತೆರಿಗೆ ಪರಿಷ್ಕರಣೆ ಪ್ರಕರಣಗಳಿದ್ದು, ಅದರಿಂದ ಸುಮಾರು 170 ಕೋಟಿ ರೂ. ಸಂಗ್ರಹಿಬೇಕಿದೆ. ಅಲ್ಲದೆ ಸುಮಾರು 22 ಸಾವಿರ ಸುಸ್ತಿದಾರರಿಂದ 598 ಕೋಟಿ ರೂ. ಬರಬೇಕಿದ್ದು, ಅದರ ಮೇಲೆ ಹೆಚ್ಚು ಗಮನ ನೀಡಿ ಸಂಗ್ರಹಿಸಲು ಸೂಚನೆ ನೀಡಿದ್ದಾರೆ.
ಕಠಿಣ ಕ್ರಮಕ್ಕೆ ಮುಂದಾದ ಜಿಬಿಎ: ಇನ್ನು ಬೆಂಗಳೂರಿನಲ್ಲಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಮೇಲೆ ಗ್ರೇಟರ್ ಬೆಂಗಳೂರು ಆಡಳಿತವು ಕಣ್ಣಿರಿಸಿದೆ. ಸೀಲ್ ಮಾಡಿ ಬಾಕಿ ಹಣ ವಸೂಲಿ ಮಾಡುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರಾದ ಮಹೇಶ್ವರ್ ರಾವ್ ಅವರು ಹೇಳಿದ್ದಾರೆ.
ಬೆಂಗಳೂರಿನ ಆಯಾ ನಗರ ಪಾಲಿಕೆಗಳಲ್ಲಿ ವಿಭಾಗವಾರು 100 ಪರಿಷ್ಕರಣೆ ಪ್ರಕರಣಗಳು, 100 ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರನ್ನು ಪಟ್ಟಿ ಮಾಡುವುದಕ್ಕೆ ಸೂಚನೆ ನೀಡಲಾಗಿದೆ. ಅಲ್ಲದೇ ಕಂದಾಯ ಪರಿವೀಕ್ಷಕರು/ಕಂದಾಯ ವಸೂಲಿಗಾರರಿಗೆ ನಿಗದಿತ ಗುರಿ ನೀಡಿ ವಾಣಿಜ್ಯ ಸ್ವತ್ತುಗಳನ್ನು ಸೀಲ್ ಮಾಡಿ ಬಾಕಿ ಆಸ್ತಿ ತೆರಿಗೆಯನ್ನು ವಸೂಲಿ ಮಾಡಬೇಕೆಂದು ಆಯುಕ್ತರು ಸೂಚನೆ ಕೊಟ್ಟಿದ್ದಾರೆ.












Click it and Unblock the Notifications