ಬಿಡದಿ ಕಸದಿಂದ 200 ಟನ್ ಪವರ್: 314.74 ಕೋಟಿ ರೂ. ವೆಚ್ಚ!
ಬಿಡದಿಯಲ್ಲಿ ಇರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ಪ್ರತಿನಿತ್ಯ 200 ಟನ್ ವಿಂಗಡಿಸಿದ ಒಣ ತ್ಯಾಜ್ಯವನ್ನು ರವಾನಿಸಲಾಗುತ್ತಿದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಅವರು ಮಾಹಿತಿ ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಕರ್ನಾಟಕ ಪವರ್ ಕಾರ್ಪೊರೇಶನ್ ಲಿಮಿಟೆಡ್ (ಕೆಪಿಸಿಎಲ್) ಸಹಭಾಗಿತ್ವದಲ್ಲಿ ಬಿಡದಿಯಲ್ಲಿ ಸ್ಥಾಪಿಸಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕಕ್ಕೆ ಇಂದು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಮನಗರ ಜಿಲ್ಲೆಯ ಬಿಡದಿ ಬಳಿ ಕೆಪಿಸಿಎಲ್ ಮಾಲಿಕತ್ವದ 163 ಎಕರೆ ಜಾಗದಲ್ಲಿ 'ಡಿಸೈನ್, ಫೈನಾನ್ಸ್, ಕನ್‌ಸ್ಟ್ರಕ್ಟ್, ಓಪರೇಟ್ & ಟ್ರಾನ್ಸ್‌ಫರ್ (DFCO&T)' ಮಾದರಿಯಲ್ಲಿ ಘಟಕವನ್ನು ನಿರ್ಮಿಸಲಾಗಿದೆ. ಪ್ರತಿದಿನ 11.50 ಮೆಗಾವಾಟ್ ವಿದ್ಯುತ್ ಉತ್ಪಾದನೆಗಾಗಿ ಜಿಬಿಎಯಿಂದ 600 ಟನ್ RDF (Refuse Derived Fuel) ಪೂರೈಸುವ ಶರತ್ತಿನ ಮೇರೆಗೆ ಯೋಜನೆ ಜಾರಿಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಮುಂದುವರಿದು ಬಿಡದಿಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣಕ್ಕಾಗಿ ಜಿಬಿಎ ಮತ್ತು ಕೆಪಿಸಿಎಲ್ ನಡುವೆ ಒಪ್ಪಂದ ಮಾಡಿಕೊಂಡಿದ್ದು, ನಿರ್ಮಾಣ ವೆಚ್ಚವನ್ನು ತಲಾ ಶೇ.50 ಹಂಚಿಕೆ ಮಾಡಿಕೊಂಡು ಒಟ್ಟು 314.74 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರಸ್ತುತ ಮಂಡೂರಿನ ಹಳೆಯ ತ್ಯಾಜ್ಯ(legacy waste) ಅನ್ನು ಬೇರ್ಪಡಿಸಿ ಹಾಗೂ ಒಣ ತ್ಯಾಜ್ಯ ಸಂಗ್ರಹಣಾ ಘಟಕಗಳಿಂದ ಸೇರಿ ಪ್ರತಿದಿನ 400 ಟನ್ RDF ಪೂರೈಸಲಾಗುತ್ತಿದೆ. ಜೊತೆಗೆ ಮನೆಗಳಿಂದ ಪ್ರತಿದಿನ ಬೇರ್ಪಡಿಸಿ ಸಂಗ್ರಹಿಸುವ 200 ಟನ್ ಪ್ಲಾಸ್ಟಿಕ್/ಒಣ ತ್ಯಾಜ್ಯ ಸೇರಿ ಒಟ್ಟು 600 ಟನ್ ತ್ಯಾಜ್ಯವನ್ನು ಘಟಕಕ್ಕೆ ಕಳುಹಿಸಲಾಗುತ್ತಿದೆ ಎಂದಿದ್ದಾರೆ. ನವೆಂಬರ್ 2025 ಅಂತ್ಯದೊಳಗೆ ಮನೆಗಳಿಂದ ಸಂಗ್ರಹವಾಗುವ ತ್ಯಾಜ್ಯದಲ್ಲಿ ಪ್ರತಿದಿನ 500 ಟನ್ ಒಣ ತ್ಯಾಜ್ಯ ಕಳುಹಿಸುವ ಗುರಿ ಹೊಂದಲಾಗಿದೆ.
ಹಿಂದಿನಂತೆ ನಗರದಲ್ಲಿ ಉತ್ಪಾದನೆಯಾಗುವ ಮಿಶ್ರ ತ್ಯಾಜ್ಯವನ್ನು ಲ್ಯಾಂಡ್‌ಫಿಲ್‌ಗೆ ಕಳುಹಿಸಲಾಗುತ್ತಿತ್ತು. ಮನೆಮನೆಗೆ ಕಸದ ಸಂಗ್ರಹಣೆಯ ವೇಳೆ ವಿಂಗಡಣೆ ಕಡ್ಡಾಯವಾಗಿರುವುದರಿಂದ ಈಗ RDF ಅನ್ನು ಮಿಶ್ರ ತ್ಯಾಜ್ಯದಲ್ಲಿ ವಿಂಗಡಿಸಿ ಬಿಡದಿ ಘಟಕಕ್ಕೆ ಕಳುಹಿಸಲಾಗುತ್ತಿದೆ. ಇದರ ಪರಿಣಾಮವಾಗಿ, ಕಳೆದ ತಿಂಗಳು ಲ್ಯಾಂಡ್‌ಫಿಲ್‌ಗೆ ಹೋಗುತ್ತಿದ್ದ 390 ಕಾಂಪ್ಯಾಕ್ಟರ್‌ಗಳು 340ಕ್ಕೆ ಇಳಿಕೆಯಾಗಿದೆ.
ನಗರದಲ್ಲಿ ಪ್ರತಿದಿನ 6000 ಮೆ.ಟನ್ ತ್ಯಾಜ್ಯ ಉತ್ಪತ್ತಿ: ಇನ್ನು ಬೆಂಗಳೂರು ನಗರ ಪ್ರದೇಶದಲ್ಲಿ ಪ್ರತಿದಿನ 6000 ಮೆ.ಟನ್ ತ್ಯಾಜ್ಯದಲ್ಲಿ ಸರಾಸರಿ 35% ಪ್ಲಾಸ್ಟಿಕ್ ಇರುವುದಾಗಿ ಅಂದಾಜಿಸಲಾಗಿದೆ. ಪುನರ್‌ಬಳಕೆ ಸಾಧ್ಯವಾದ ಪ್ಲಾಸ್ಟಿಕ್‌ಗಳನ್ನು ಒಣ ತ್ಯಾಜ್ಯ ಸಂಗ್ರಹಣಾ ಘಟಕಗಳ ಮೂಲಕ ಪುನರ್‌ಬಳಕೆ ಮಾಡಲಾಗುತ್ತದೆ. ಕೆಳಮಟ್ಟದ ಪ್ಲಾಸ್ಟಿಕ್‌ಗಳನ್ನು ಮಾತ್ರ ಬಿಡದಿ ಘಟಕಕ್ಕೆ ಕಳುಹಿಸಲಾಗುತ್ತದೆ.
ಘಟಕದಲ್ಲಿ ಪ್ರತಿದಿನ 11.50 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಪ್ರತಿ ಮನೆ ಸರಾಸರಿ 5 ಯೂನಿಟ್ ವಿದ್ಯುತ್ ಬಳಸಿದರೆ ಸುಮಾರು 25,000 ಮನೆಗಳಿಗೆ ವಿದ್ಯುತ್ ಪೂರೈಕೆ ಮಾಡಲು ಸಾಧ್ಯ. ನಗರದಲ್ಲಿ ತ್ಯಾಜ್ಯವನ್ನು ವಿಂಗಡಿಸಿ ಕಳುಹಿಸಿದರೆ ಇದೇ ಮಾದರಿಯ ಮತ್ತಷ್ಟು 3 ಘಟಕಗಳನ್ನು ಸ್ಥಾಪಿಸಿ 1 ಲಕ್ಷ ಮನೆಗಳಿಗೆ ವಿದ್ಯುತ್ ಪೂರೈಕೆ ನೀಡಬಹುದು ಎಂದು ತಿಳಿಸಿದ್ದಾರೆ.
ಕೆಪಿಸಿಎಲ್ ಕಾರ್ಯಪಾಲಕ ಎಂಜಿನಿಯರ್ ಸತೀಶ್ ಕುಮಾರ್ ಅವರು ಮಾತನಾಡಿ, ಕರ್ನಾಟಕದಲ್ಲಿ ಕಸದಿಂದ ವಿದ್ಯುತ್ ಉತ್ಪಾದಿಸುವ ಪ್ರಥಮ ಘಟಕ" ಇದು. ಇದರಿಂದ ರಸ್ತೆ ಬದಿಯಲ್ಲಿ ಕಸ ಬಿಸಾಡುವುದು, ಸುಡುವುದು ಮತ್ತು ಲ್ಯಾಂಡ್‌ಫಿಲ್‌ಗೆ ಹೋಗುವ ಪ್ರಮಾಣ ಕಡಿಮೆಯಾಗಲಿದೆ. ಘಟಕದಿಂದ ಯಾವುದೇ ವಾಯುಮಾಲಿನ್ಯ ಉಂಟಾಗುವುದಿಲ್ಲ. ವಾಸನೆ ಹರಡದಂತೆ ಸಿಂಪಡಣೆ ಸೇರಿದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಜೂನ್ 2024ರಿಂದ ಕಾರ್ಯಾರಂಭವಾದ ನಂತರ ಇಂದಿನವರೆಗೆ 1,68,036 ಮೆ.ಟನ್ ತ್ಯಾಜ್ಯವನ್ನು ಸಂಸ್ಕರಿಸಿ 54.29 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದೆ.
ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆ ವಿಚಾರದಲ್ಲಿ ಸರ್ಕಾರದ ಬದ್ಧತೆಗೆ ಬಿಡದಿಯ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕ ಸಾಕ್ಷಿ. ಕಸದಿಂದ ವಿದ್ಯುತ್ ಉತ್ಪಾದನೆ ಮೂಲಕ ಅದರ ವಿಲೇವಾರಿ ಸಮಸ್ಯೆಗೆ ಸ್ವಲ್ಪ ಪ್ರಮಾಣದಲ್ಲಿ ಪರಿಹಾರ ನೀಡಲಾಗುತ್ತಿದೆ. ಘಟಕದಲ್ಲಿ ಉತ್ಪಾದನೆಯಾಗುವ ಬೂದಿಯನ್ನು ರಸ್ತೆ ನಿರ್ಮಾಣಕ್ಕೆ ಬಳಸಿ ಅದಕ್ಕೂ ಪರಿಹಾರ ಒದಗಿಸಲು ಕ್ರಮ ವಹಿಸಲಾಗಿದೆ. ಜಿಬಿಎ ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಘಟಕದ ಕಾರ್ಯವಿಧಾನ:
* ಕಾಂಪ್ಯಾಕ್ಟರ್‌ನಲ್ಲಿ ಬಂದ ಒಣ/ಪ್ಲಾಸ್ಟಿಕ್ ತ್ಯಾಜ್ಯವನ್ನು ವೇಯಿಂಗ್ ಮಾಡಿದ ನಂತರ 4200 ಮೆ.ಟನ್ ಸಾಮರ್ಥ್ಯದ ಪಿಟ್‌ಗೆ ಸುರಿಸಲಾಗುತ್ತದೆ.
* ಗ್ರಾಬ್ ಕ್ರೇನ್ ಮೂಲಕ ತ್ಯಾಜ್ಯವನ್ನು ಫೀಡರ್‌ಗೆ ಹಾಕಲಾಗುತ್ತದೆ.
* ನಂತರ ಬಾಯ್ಲರ್ (ಫರ್ನೀಸ್) ನಲ್ಲಿ 1200°C ತಾಪಮಾನದಲ್ಲಿ ಸುಡಲಾಗುತ್ತದೆ.
* ಸುಟ್ಟ ಜಲವಾಸ್ಪದಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ.












Click it and Unblock the Notifications