ಬೆಂಗಳೂರಿನ ಪ್ರಮುಖ ಯೋಜನೆಗೆ 2,000 ಸಾವಿರಕ್ಕೂ ಹೆಚ್ಚು ಭೂಸ್ವಾಧೀನ: ಪ್ರತಿ ಎಕರೆ ಜಮೀನಿಗೆ 15.60 ಕೋಟಿ ರೂ.
ಬೆಂಗಳೂರು: ಬೆಂಗಳೂರಿನ ಪ್ರಮುಖ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಸಂಬಂಧ ಕರ್ನಾಟಕ ಸರ್ಕಾರವು ಮಹತ್ವದ ಅಪ್ಡೇಟ್ಸ್ ನೀಡಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ. ಬೆಂಗಳೂರಿನ ಈ ಯೋಜನೆಗೆ 2,560 ಎಕರೆ ಭೂಮಿ ಅಗತ್ಯವಿದೆ ಎಂದು ಹೇಳಲಾಗಿತ್ತು. ಮೊದಲ ಹಂತದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಪ್ರತಿ ವಾರ ಸುಮಾರು 300 ಎಕರೆ ಭೂಮಿಗೆ ನೋಟಿಸ್ ನೀಡುತ್ತಿದ್ದು, ಭೂಮಾಲೀಕರ ಸಮ್ಮತಿ ಪತ್ರಗಳು ಬಂದ ಕೂಡಲೇ ಭೂಸ್ವಾಧೀನ ಪ್ರಕ್ರಿಯೆ ವೇಗ ಪಡೆದುಕೊಂಡಿದೆ.
ಬೆಂಗಳೂರಿನ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್ (PRR-1) ಯೋಜನೆಗಾಗಿ ಭೂಮಾಲೀಕರಿಂದ ಸಮ್ಮತಿ ಪತ್ರಗಳು ಸ್ವೀಕೃತವಾಗುತ್ತಿದ್ದಂತೆ, ಭೂಸ್ವಾಧೀನ ಪ್ರಕ್ರಿಯೆಯು ತ್ವರಿತಗತಿಯಲ್ಲಿ ಆರಂಭವಾಗಿದೆ ಎಂದು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಅಧ್ಯಕ್ಷರಾದ ಎಲ್ ಕೆ ಅತೀಕ್ ಅವರು ತಿಳಿಸಿದ್ದಾರೆ.

ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಸಂಧಾನಿತ ಮೊತ್ತ ಆಯ್ಕೆ ಮಾಡಿಕೊಳ್ಳುವವರಿಗೆ ಪ್ರತಿ ಎಕರೆಗೆ ನೀಡಲಾಗುವ ಪರಿಹಾರ ಮೊತ್ತದ ವಿವರಗಳನ್ನು ಹಾಗೂ ಟಿಡಿಆರ್ ವಿವರಗಳನ್ನೂ ಒಳಗೊಂಡಂತೆ ನಮ್ಮ ಅಧಿಕೃತ ವೆಬ್‌ಸೈಟ್ http://BengaluruBusinessCorridor.com ನಲ್ಲಿ ಗ್ರಾಮವಾರು ಪ್ರಕಟಿಸಲಾಗಿದೆ.
ಪ್ರಸ್ತುತ ಸ್ವಾಧೀನಪಡಿಸಿಕೊಳ್ಳುತ್ತಿರುವ ಜಮೀನು ಹೆಚ್ಚಾಗಿ ಕೃಷಿ ಭೂಮಿಯಾಗಿದ್ದರೂ ಸಹ, TDR (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ಅನ್ನು 'ನಗರ ಭೂ ಪರಿವರ್ತಿತ' ಮೌಲ್ಯದ ಆಧಾರದ ಮೇಲೆ (ಪ್ರತಿ ಚದರ ಅಡಿ ಲೆಕ್ಕಾಚಾರದಲ್ಲಿ) ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಮುಂದುವರಿದು ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರವಾಗಿ ಜಮೀನನ್ನು ಆಯ್ಕೆ ಮಾಡಿಕೊಳ್ಳುವವರಿಗೆ ವಸತಿ ನಿವೇಶನದ ಅಳತೆಯು ಕೇವಲ 60:40 ಅನುಪಾತಕ್ಕೆ ಸೀಮಿತವಾಗಿರುವುದಿಲ್ಲ. ಇದು ಭೂಮಿಯ ಮಾರ್ಗದರ್ಶಿ ಮೌಲ್ಯವನ್ನು(Guidance Value) ಅವಲಂಬಿಸಿರುತ್ತದೆ. ಎಲ್ಲಿ ಮಾರ್ಗದರ್ಶಿ ಮೌಲ್ಯ ಹೆಚ್ಚಿದೆಯೋ, ಅಲ್ಲಿ ಭೂಮಾಲೀಕರು ಶೇ. 40 ಕ್ಕಿಂತ ಹೆಚ್ಚಿನ ವಿಸ್ತೀರ್ಣದ ನಿವೇಶನಗಳನ್ನು ಪಡೆಯಲು ಅವಕಾಶವಿರುತ್ತದೆ.
ಸಂಧಾನಿತ ಮೊತ್ತದ ಶೀಘ್ರ ಅನುಮೋದನೆಗಾಗಿ ಬಿಡಿಎ ಆಯುಕ್ತರಾದ ಮಣಿವಣ್ಣನ್ ಪಿ ಅವರು ನಾಲ್ವರು ಜಿಲ್ಲಾಧಿಕಾರಿಗಳನ್ನು ಭೂಸ್ವಾಧೀನ ಪ್ರಕ್ರಿಯೆಗೆ ನೇಮಿಸಿದ್ದಾರೆ. ಐದರಲ್ಲಿ ಒಂದು ರೀತಿಯ ಪರಿಹಾರದ ಆಯ್ಕೆಗಾಗಿ ಭೂಮಾಲೀಕರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಥವಾ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಸಂಪರ್ಕಿಸಲು ಕೋರಲಾಗಿದೆ. ನೀವು ದಾಖಲೆಗಳನ್ನು ಸಲ್ಲಿಸಿದ 15 ದಿನಗಳ ಒಳಗಾಗಿ ನಗದು ಪರಿಹಾರದ ಇತ್ಯರ್ಥ ಅಥವಾ ತಾತ್ಕಾಲಿಕ TDR ಅರ್ಹತಾ ಪ್ರಮಾಣಪತ್ರ ಅಥವಾ ವಾಣಿಜ್ಯ/ವಸತಿ ಭೂಮಿಯ ಅರ್ಹತಪತ್ರವನ್ನು ನೀಡಲಾಗುವುದು ಎಂದು ನಾವು ಭರವಸೆ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.
ಭೂ ಮಾಲೀಕರು ಇಲ್ಲಿ ಪರಿಶೀಲನೆ ಮಾಡಬಹುದು
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (PRR) ಹಂತ-1ಕ್ಕಾಗಿ ಭೂಸ್ವಾಧೀನಗೊಳ್ಳುತ್ತಿರುವ ಗ್ರಾಮಗಳ ಭೂಮಾಲೀಕರಿಗೆ ನೀಡಲಾಗುವ ಪರಿಹಾರದ ಸಂಪೂರ್ಣ ವಿವರಗಳನ್ನು ಈ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. http://BengaluruBusinessCorridor.com ಮೂಲಕ ಮಾಹಿತಿ ಪಡೆಯಬಹುದಾಗಿದೆ.
ಹಳೆಯ ಪರಿಹಾರದ ದರಗಳ ಜೊತೆಗೆ, ನೂತನ ಪರಿಹಾರದ ಆಯ್ಕೆಗಳಿಗೆ ಸಂಬಂಧಿಸಿದ ವಿವರಗಳನ್ನೂ ಸಹ ಒದಗಿಸಲಾಗಿದೆ. ಹೋಬಳಿವಾರು ಗ್ರಾಮಗಳಿಗೆ ನಿಗದಿಪಡಿಸಿರುವ ಪರಿಹಾರವನ್ನು ಸುಲಭವಾಗಿ ಇಲ್ಲಿ ಪರಿಶೀಲಿಸಬಹುದು. ಭೂಮಾಲೀಕರು ಮತ್ತು ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ, ಅಧಿಕೃತ ವೆಬ್‌ಸೈಟ್ ಮೂಲಕವೇ ಅಥವಾ ಸಂಬಂಧಿತ ಅಧಿಕಾರಿಗಳಿಂದಲೇ ನಿಖರವಾದ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (PRR) ಹಂತ-1ಕ್ಕಾಗಿ ಭೂಸ್ವಾಧೀನಗೊಳ್ಳುತ್ತಿರುವ ಗ್ರಾಮಗಳ ಭೂಮಾಲೀಕರಿಗೆ ನೀಡಲಾಗುವ ಪರಿಹಾರದ ಸಂಪೂರ್ಣ ವಿವರಗಳನ್ನು https://t.co/vxJN9RS4qx ಮೂಲಕ ಪಡೆಯಬಹುದಾಗಿದೆ.
— Bengaluru Business Corridor (@Bc_Bengaluru) December 22, 2025
ಹಳೆಯ ಪರಿಹಾರದ ದರಗಳ ಜೊತೆಗೆ, ನೂತನ ಪರಿಹಾರದ ಆಯ್ಕೆಗಳಿಗೆ ಸಂಬಂಧಿಸಿದ ವಿವರಗಳನ್ನೂ ಸಹ ಒದಗಿಸಲಾಗಿದೆ. ಹೋಬಳಿವಾರು ಗ್ರಾಮಗಳಿಗೆ… pic.twitter.com/2pfwSHo1zi
ಎಷ್ಟು ಸಿಗಲಿದೆ ಪರಿಹಾರ ?
ಇನ್ನು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಪ್ರತಿ ಎಕರೆ ಜಮೀನಿಗೆ 2.50 ಕೋಟಿ ರೂಪಾಯಿಗಳಿಂದ ಬರೋಬ್ಬರಿ 15.60 ಕೋಟಿ ರೂಪಾಯಿಯ ವರೆಗೆ ಪರಿಹಾರ ಮೊತ್ತವನ್ನು ನಿಗದಿ ಮಾಡಲಾಗಿದೆ. ಅಲ್ಲದೇ ವಾಣಿಜ್ಯ ನಿವೇಶನಗಳಿಗೆ 8,385 ರೂಪಾಯಿ ಮೊತ್ತದ ವರೆಗೆ ದರ ನಿಗದಿಪಡಿಸಲಾಗಿದೆ. ಅಧಿಸೂಚಿಸಲಾದ ಜಮೀನಿನ ಮಾರ್ಗಸೂಚಿ ಮೌಲ್ಯದ ಅನ್ವಯ ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳ ದರಗಳು ಮತ್ತು ಸ್ಥಳೀಯ ಪ್ರಾಧಿಕಾರದ ವಸತಿ ನಿವೇಶನಗಳ ದರಗಳ ಅನ್ವಯ ಬೆಲೆಯನ್ನು ನಿಗದಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚು ಪರಿಹಾರ: ಇನ್ನು ಈ ಯೋಜನೆಗೆ ಬೆಂಗಳೂರಿನಲ್ಲಿ ಜಾರಿಯಾಗುತ್ತಿರುವ ಪ್ರಮುಖ ಯೋಜನೆಗಳಲ್ಲಿ ಈ ಯೋಜನೆ ಒಂದಾಗಿದ್ದು, ಇದಕ್ಕೆ ಅತ್ಯಂತ ಹೆಚ್ಚು ಪರಿಹಾರ ಹಣ ನೀಡಲಾಗುತ್ತಿದೆ.












Click it and Unblock the Notifications