ಬೆಂಗಳೂರಲ್ಲಿ 1600 ಸೂಕ್ಷ್ಮ ಮತಗಟ್ಟೆಗಳು, ವಿಶೇಷ ವೀಕ್ಷಕರ ನೇಮಕ
ಬೆಂಗಳೂರು, ಏಪ್ರಿಲ್ 15 : ಬೆಂಗಳೂರು ನಗರದಲ್ಲಿ 1,600 ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 18ರಂದು ಚುನಾವಣೆ ನಡೆಯಲಿದೆ.
ಚುನಾವಣಾ ಆಯೋಗ ಸೂಕ್ಷ್ಮ ಮತಗಟ್ಟೆಗಳನ್ನು ಆಯ್ಕೆ ಮಾಡಿದೆ. ಈ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲಿಸ್ ಸಿಬ್ಬಂದಿ ನೇಮಕ ಮಾಡುವಂತೆ ಪೊಲೀಸ್ ಇಲಾಖೆಗೆಗೂ ಸೂಚನೆ ನೀಡಲಾಗಿದೆ. ಆಯೋಗದಿಂದ ವೀಕ್ಷಕರನ್ನು ನೇಮಕ ಮಾಡಲಾಗುತ್ತದೆ.
'ಮತಗಟ್ಟೆ ವ್ಯಾಪ್ತಿಯಲ್ಲಿನ ಹಿಂದಿನ ಚುನಾವಣೆಗಳ ಕಾನೂನು ಸುವ್ಯವಸ್ಥೆ. ಚುನಾವಣಾ ಅಕ್ರಮಗಳು ನಡೆದ ಮಾಹಿತಿ ಆಧರಿಸಿದ ಸೂಕ್ಷ್ಮ ಮತಗಟ್ಟೆಗಳನ್ನು ಆಯ್ಕೆ ಮಾಡಲಾಗಿದೆ' ಎಂದು ಚುನಾವಣಾಧಿಕಾರಿ, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದ್ದಾರೆ.

ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ವೀಕ್ಷಕರನ್ನು ಚುನಾವಣಾ ಆಯೋಗ ನೇಮಕ ಮಾಡುತ್ತದೆ. ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಿಗೆ ಒಟ್ಟಾಗಿ 1234 ವೀಕ್ಷಕರನ್ನು ನೇಮಕ ಮಾಡಲಾಗಿದೆ.
ಬೆಂಗಳೂರು ಉತ್ತರಕ್ಕೆ 481, ಬೆಂಗಳೂರು ಕೇಂದ್ರಕ್ಕೆ 371, ಬೆಂಗಳೂರು ದಕ್ಷಿಣಕ್ಕೆ 382 ವೀಕ್ಷಕರನ್ನು ನೇಮಕ ಮಾಡಲಾಗಿದೆ. ಕೆಲವು ವಿಶೇಷ ವೀಕ್ಷಕರನ್ನು ನೇಮಕ ಮಾಡಲಾಗುತ್ತಿದ್ದು, ಇವರು ನೇರವಾಗಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಿದ್ದಾರೆ.
ಬೆಂಗಳೂರು ನಗರದ 477 ಮತಗಟ್ಟೆಗಳ ಮತದಾನದ ಪ್ರಕ್ರಿಯೆಯನ್ನು ವೆಬ್ ಕಾಸ್ಟಿಂಗ್ ಮೂಲಕ ಚುನಾವಣಾಧಿಕಾರಿಗಳು ವೀಕ್ಷಣೆ ಮಾಡಲಿದ್ದಾರೆ. ಮತದಾನದ ದಿನದ ಸಂಪೂರ್ಣ ವಿಡಿಯೋ ಚಿತ್ರೀಕರಣವನ್ನು ಮಾಡಲಾಗುತ್ತದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬೆಂಗಳೂರು ಉತ್ತರದ 242, ಬೆಂಗಳೂರು ಕೇಂದ್ರದ 113, ಬೆಂಗಳೂರು ದಕ್ಷಿಣದ 112 ಮತಗಟ್ಟೆಗಳ ಪ್ರಕ್ರಿಯೆಯನ್ನು ವೆಬ್ ಕಾಸ್ಟಿಂಗ್ ಮೂಲಕ ವೀಕ್ಷಣೆ ಮಾಡಬಹುದಾಗಿದೆ.












Click it and Unblock the Notifications