ಶಿವರಾಮಕಾರಂತ ಬಡಾವಣೆಯಲ್ಲಿ ಹಿಂದುಳಿದವರಿಗೆ 15,000 ನಿವೇಶನ ಮೀಸಲು!
ಬೆಂಗಳೂರು, ಏ. 13: ರಾಜಧಾನಿಯಲ್ಲಿ ಸ್ವಂತ ಮನೆ, ಪ್ಲಾಟ್ ಕನಸು ಕಾಣುತ್ತಿರುವರಿಗೆ ಸಂತಸದ ಸುದ್ದಿ. ಬೆಂಗಳೂರಿನ ಶಿವರಾಮಕಾರಂತ ಬಡಾವಣೆಯಲ್ಲಿ 15 ಸಾವಿರ ಪ್ಲಾಟ್‌ಗಳನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಮಂಜೂರು ಮಾಡಲಾಗುತ್ತಿದೆ. ರಾಜೀವ್ ಗಾಂಧಿ ವಸತಿ ನಿಗಮದಿಂದ ಈ ಪ್ಲಾಟ್ ನಿರ್ಮಿಸಿ ಕೊಡಲಾಗುತ್ತಿದೆ.
ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿ ಹಂತ ಹಂತವಾಗಿ ಆರು ಬ್ಲಾಕ್‌ನಲ್ಲಿ ತಲಾ 25 ಎಕರೆಯಂತೆ 150 ಎಕರೆ ಭೂಮಿಯನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಮಂಜೂರು ಮಾಡುವಂತೆ ಸುಪ್ರೀಂಕೋರ್ಟ್ ಮಾ. 31 ರಂದು ನೀಡಿದ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಈ ಕುರಿತು ಬಿಡಿಎ ಆಯುಕ್ತರಿಗೆ ನ್ಯಾಯಾಲಯ ಸೂಚನೆ ನೀಡಿದೆ.
ಶಿವರಾಮಕಾರಂತ ಬಡಾವಣೆ ಕುರಿತು ರಚನೆಯಾಗಿರುವ ಸಮಿತಿಯ ಮುಖ್ಯಸ್ಥರಾದ ನ್ಯಾ. ಎ. ವಿ. ಚಂದ್ರಶೇಖರ್ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೋಚ್ಛ ನ್ಯಾಯಾಲಯವು ಮಾ. 31 ರಂದು ಮಹತ್ವದ ತೀರ್ಪು ನೀಡಿದ್ದು, ಡಾ.ಶಿವರಾಂ ಕಾರಂತ ಬಡಾವಣೆಯಲ್ಲಿ 6 ಪ್ರತ್ಯೇಕ ಹಂತಗಳಲ್ಲಿ ತಲಾ 25 ಎಕರೆಯಂತೆ ಒಟ್ಟು 150 ಎಕರೆ ಭೂಮಿಯನ್ನು ಮೆ: ರಾಜೀವ್ ಗಾಂಧಿ ವಸತಿ ನಿಗಮ ಲಿಮಿಟೆಡ್‌ಗೆ ನೀಡುವಂತೆ ಬಿಡಿಎ ಆಯುಕ್ತರಿಗೆ ಸೂಚಿಸಿದೆ.

ಈ ಜಾಗಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮವು ಆರ್ಥಿಕವಾಗಿ ಹಿಂದುಳಿದವರಿಗೆ ಪ್ಲಾಟ್ ನಿರ್ಮಿಸಿ ಕೊಡಲಿದೆ. ಇಡಬ್ಲೂಎಸ್ ಯೋಜನೆ ಅಡಿ ಬಹುಮಹಡಿಗಳ ಕಟ್ಟಡ ನಿರ್ಮಾಣ ಮಾಡಬೇಕೆಂದು ನ್ಯಾಯಾಲಯ ತಿಳಿಸಿದ್ದು, ಚಂದ್ರಶೇಖರ್ ಸಮಿತಿ ಮೇಲ್ವಿಚಾರಣೆ ಮೇಲೆ ಈ ಅಪಾರ್ಟ್‌ಮೆಂಟ್ ನಿರ್ಮಾಣವಾಗಲಿದೆ ಎಂದು ಅವರು ತಿಳಿಸಿದರು.

ಕಳೆದ 15 ತಿಂಗಳುಗಳಲ್ಲಿ ಸಮಿತಿಯು ಮಾನ್ಯ ಸರ್ವೋಚ್ಛ ನ್ಯಾಯಾಲಯಕ್ಕೆ 12 ವರದಿಗಳನ್ನು ಸಲ್ಲಿಸಿದೆ. ಜೆಸಿಸಿ ಸಲ್ಲಿಸಿದ್ದ ವರದಿಗಳನ್ನು ಮಾನ್ಯ ಸರ್ವೋಚ್ಛ ನ್ಯಾಯಾಲಯವು ಪರಿಗಣಿಸಿದ ಹಿನ್ನೆಲೆಯಲ್ಲಿ 2014-18 ರ ಅವಧಿಯಲ್ಲಿ ಡಾ.ಶಿವರಾಂ ಕಾರಂತ ಬಡಾವಣೆಗೆಂದು ಅಧಿಸೂಚನೆ ಹೊರಡಿಸಲಾಗಿದ್ದ 17 ಗ್ರಾಮಗಳ 1475 ಕಟ್ಟಡಗಳಿಗೆ ಅನುಮೋದನೆ ನೀಡಿದೆ . ಈ ಕುರಿತ ಮಾಹಿತಿಯನ್ನು ಎಲ್ಲಾ ಅರ್ಜಿದಾರರಿಗೆ ಎಸ್‍ಎಂಎಸ್ ಸಂದೇಶದ ಮೂಲಕ ತಿಳಿಸಲಾಗಿದೆ. ಈ ಮೇಲಿನ ಎಲ್ಲಾ ಕಟ್ಟಡ ಮಾಲೀಕರಿಗೆ ಸಕ್ರಮ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.

ಉದ್ದೇಶಿತ ಬಡಾವಣೆಯ ವ್ಯಾಪ್ತಿಯಲ್ಲಿ ಈಗಾಗಲೇ ಕಟ್ಟಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು 7161 ಅರ್ಜಿಗಳನ್ನು ಸ್ವೀಕರಿಸಿದೆ. ಬದಲಿ ನಿವೇಶನ ನೀಡುವುದಕ್ಕೆ 2248 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಸಂಬಂಧಿಸಿದ ಸಾರ್ವಜನಿಕರಿಂದ 2022 ರ ಏಪ್ರಿಲ್ 8 ಅರ್ಜಿಗಳ ಸ್ವೀಕರಿಸಲು ಕೊನೆಯ ದಿನವಾಗಿತ್ತು. ಒಂದು ವರ್ಷ ಕಾಲಾವಕಾಶ ನೀಡಲಾಗಿತ್ತು. ನಂತರ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಡಾ.ಶಿವರಾಂ ಕಾರಂತ ಬಡಾವಣೆ ವ್ಯಾಪ್ತಿಯಲ್ಲಿರುವ 13 ಬಿಡಿಎ ಅನುಮೋದಿತ ಬಡಾವಣೆಗಳು ಮತ್ತು ನಿರ್ಮಾಣ ಹಂತದಲ್ಲಿರುವ 2 ಬಹುಮಹಡಿ ಅಪಾರ್ಟ್‌ಮೆಂಟ್ ಸಂಕೀರ್ಣಗಳನ್ನು ಸ್ವಾಧೀನಪಡಿಸಿಕೊಳ್ಳಬಾರದು ಎಂದು ಮಾನ್ಯ ಸರ್ವೋಚ್ಛ ನ್ಯಾಯಾಲಯವು ಬಿಡಿಎಗೆ ಆದೇಶ ನೀಡಿದೆ. ಇದೇ ವೇಳೆ, ಡಾ.ಶಿವರಾಂ ಕಾರಂತ ಬಡಾವಣೆಯಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ 8 ವಿವಿಧ ಸಂಸ್ಥೆಗಳನ್ನು ಸಕ್ರಮ ಮಾಡುವಂತೆ ಜೆ.ಸಿ.ಸಿ. ಶಿಫಾರಸು ಮಾಡಿದೆ. ನ್ಯಾಯಾಲಯದ ಪ್ರಕಾರ ಈ ಮೇಲಿನ ಸಂಘ-ಸಂಸ್ಥೆಗಳನ್ನು ಸಕ್ರಮಗೊಳಿಸಲಾಗುತ್ತದೆ. ಡಾ.ಶಿವರಾಂ ಕಾರಂತ ಬಡಾವಣೆಯಲ್ಲಿ ಕಟ್ಟಡಗಳನ್ನು 2014 ಕ್ಕೆ ಮುನ್ನ, 2014 ಮತ್ತು 2018 ರ ನಡುವೆ ಹಾಗೂ 2018 ರ ನಂತರ ನಿರ್ಮಾಣ ಎಂದು ವರ್ಗೀಕರಣ ಮಾಡುವ ಕಾರ್ಯವನ್ನು ಜೆ.ಸಿ.ಸಿ. ಮುಂದುವರಿಸಿದೆ. ಈ ವರ್ಗೀಕರಣದ ಆಧಾರದ ಮೇಲೆ ಸೂಕ್ತ ಆದೇಶಗಳಿಗಾಗಿ ಸಮಿತಿಯು ಮಾನ್ಯ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಲಿದೆ.

ಸಕ್ರಮಗೊಳಿಸಲಾದ ವಿದ್ಯಾ ಸಂಸ್ಥೆಗಳ ವಿವರ :
1. ವಿದ್ಯಾ ವಿಕಾಸ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್, ವೀರಸಾಗರ ಗ್ರಾಮ
2. ನಿಕಿಸಾ ಡೆಮೆನ್ಷಿಯಾ ಹೋಂ ಅಂಡ್ ಅಲ್ಝೆಮರ್ ಹಾಸ್ಪಿಟಲ್, ಕೆಂಪನಹಳ್ಳಿ
3. ಬಾಲಾಜಿ ಎಜುಕೇಶನ್ ಟ್ರಸ್ಟ್, ರಾಮಗೊಂಡನಹಳ್ಳಿ
4. ಗಂಗೋತ್ರಿ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್, ಕಾಳತಮ್ಮನಹಳ್ಳಿ
5. ಸೇಂಟ್ ಫಿಲೋಮಿನಾ'ಸ್ ಸ್ಕೂಲ್, ಬ್ಯಾಲಕೆರೆ
6. ಜಾಮಿಯಾ ಮಸೀದಿ, ಗಾಣಿಗರಹಳ್ಳಿ, ಚಿಕ್ಕಬಾಣಾವರ
7. ಡಾ.ಸಂಜಯ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಟಲ್, ವೀರಸಾಗರ
8. ದಿವ್ಯಾ ಕಾರುಣ್ಯ ಚಾರಿಟೇಬಲ್ ಟ್ರಸ್ಟ್, ಬ್ಯಾಲಕೆರೆ












Click it and Unblock the Notifications