ಬೆಂಗಳೂರಿನ 12 ವರ್ಷದ ಬಾಲಕ ಪರಿಣವ್ ಪತ್ತೆ
ಬೆಂಗಳೂರು, ಜನವರಿ 24: ಉದ್ಯಾನ ನಗರಿ ಬೆಂಗಳೂರಿನಿಂದ ನಾಪತ್ತೆಯಾಗಿದ್ದ 12 ವರ್ಷದ ಬಾಲಕ ಪರಿಣವ್ ಪತ್ತೆಯಾಗಿದ್ದಾನೆ. ಬಾಲಕನ ನಾಪತ್ತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಪೋಸ್ಟ್‌ಗಳ ವೈರಲ್ ಆಗಿತ್ತು.
ಜನವರಿ 21ರಂದು ನಾಪತ್ತೆಯಾಗಿದ್ದ ಬಾಲಕ ಪರಿಣವ್ ಹೈದರಾಬಾದ್ ನ ನಾಂಪಲ್ಲಿ ಮೆಟ್ರೋ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ. ಬಾಲಕನ ನಾಪತ್ತೆ ಬಗ್ಗೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಲಕನ ಪೋಷಕರು ಹೈದರಾಬಾದ್‌ಗೆ ತೆರಳಿದ್ದಾರೆ.

ಬಾಲಕ ಪರಿಣವ್ ಟ್ಯೂಷನ್‌ಗೆ ಹೋದವ ಮನೆಗೆ ವಾಪಸ್ ಆಗಿರಲಿಲ್ಲ. ಬೆಂಗಳೂರಿನ ವೈಟ್‌ಫೀಲ್ಡ್‌ನ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ ನಿವಾಸಿಗಳಾದ ಸುಕೇಶ್ ಹಾಗೂ ನಿವೇದಿತಾ ದಂಪತಿ ಪುತ್ರ ಪರಿಣವ್ ನಾಪತ್ತೆ ಪ್ರಕರಣದ ಕುರಿತು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್‌ಗಳು ವೈರಲ್ ಆಗಿದ್ದವು.
ಪರಿಣವ್ ವೈಟ್‌ಫೀಲ್ಡ್‌ನ ಡೀನ್ ಅಕಾಡೆಮಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ. ಜನವರಿ 21ರ ಭಾನುವಾರ ಏಲಿಯನ್ ಕೆರಿಯರ್ ಇನ್ಸ್‌ಟಿಟ್ಯೂಟ್‌ಗೆ ತೆರಳಿದ್ದ. ತಂದೆಯೇ ಆತನನ್ನು ಬಿಟ್ಟು ಬಂದಿದ್ದರು. ತಂದೆಯೇ ವಾಪಸ್ ಮನೆಗೆ ಕರೆದುಕೊಂಡು ಹೋಗಬೇಕಿತ್ತು.
ಆದರೆ ಅವರು ಬರುವುದು ತಡವಾದ ಕಾರಣ ಪರಿಣವ್ ಅಲ್ಲಿಂದ ಹೊರಟಿದ್ದ. ಆದರೆ ಮನೆಗೆ ವಾಪಸ್ ಆಗಿರಲಿಲ್ಲ. ಆಗ ಹುಡುಕಾಟ ಪ್ರಾರಂಭಿಸಲಾಗಿತ್ತು. ಎಲ್ಲೂ ಪತ್ತೆಯಾಗದ ಹಿನ್ನಲೆಯಲ್ಲಿ ಪೋಷಕರು ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದರು.
ಸಿಸಿಟಿವಿ ದೃಶ್ಯಾವಳಿ; ನಾಪತ್ತೆ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ವೈಟ್‌ಫೀಲ್ಡ್‌ನಿಂದ ಹೊರಟ ಪರಿಣವ್ ಮಾರತ್‌ಹಳ್ಳಿ ಕಡೆ ಓಡಾಡಿರುವುದು ತಿಳಿದುಬಂದಿತ್ತು.
ಜನವರಿ 21ರಂದು ಮಧ್ಯಾಹ್ನ 2.30ರ ವೇಳೆಗೆ ಪರಿಣವ್ ಕುಂದಲಹಳ್ಳಿ ಗೇಟ್ ಹಾಗೂ ಮಾರತ್ ಹಳ್ಳಿ ಬ್ರಿಡ್ಜ್ ನಡುವಿನ ನಡುವೆ ಇರುವ ಕಾವೇರಿ ಆಸ್ಪತ್ರೆ ಮುಂದೆ ಸಂಚಾರ ನಡೆಸಿದ್ದ. 3.07ಕ್ಕೆ ಬಿಎಂಟಿಸಿ ಬಸ್ ಏರುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು.
ಪೊಲೀಸರು ಬಸ್ ನಂಬರ್ ಆಧರಿಸಿ ನಿರ್ವಾಹಕನ ವಿಚಾರಣೆ ನಡೆಸಿದ್ದರು. ಆಗ ಪರಿಣವ್ ಮಾರತ್ ಹಳ್ಳಿ ಮಾರುಕಟ್ಟೆಯ ಬಳಿಕ ಬಸ್ ಇಳಿದಿರುವ ಮಾಹಿತಿ ಸಿಕ್ಕಿತ್ತು. 3.11ಕ್ಕೆ ಯಮಲೂರು ಪೆಟ್ರೋಲ್ ಬಂಕ್ ಬಳಿ ಓಡಾಟ ನಡೆಸಿರುವುದು ಪತ್ತೆಯಾಗಿತ್ತು.
ಪೋಷಕರು ಬಾಲಕನ ಬಳಿ ಹೆಚ್ಚು ಹಣ ಇರಲಿಲ್ಲ, ಮೊಬೈಲ್ ಸಹ ನೀಡಿರಲಿಲ್ಲ ಎಂದು ಮಾಹಿತಿ ನೀಡಿದ್ದರು. ವೈಟ್‌ಫೀಲ್ಡ್‌ನಿಂದ ನಾಪತ್ತೆಯಾದ ಪರಿಣವ್ ಮೆಜೆಸ್ಟಿಕ್‌ನಲ್ಲಿ ಸಂಚಾರ ನಡೆಸಿರುವುದು ತಿಳಿದು ಬಂದಿತ್ತು.
ಅಪಾರ್ಟ್‌ಮೆಂಟ್ ನಿವಾಸಿಗಳು, ಬೆಂಗಳೂರಿನ ವಿವಿಧ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಪರಿಣವ್ ಪತ್ತೆಗೆ ಸಹಕಾರ ನೀಡಲು ಕೋರಿದ್ದರು. ಅಂತಿವಾಗಿ ಹೈದರಾಬಾದ್‌ನಲ್ಲಿ ಆತ ಪತ್ತೆಯಾಗಿದ್ದು, ಪೋಷಕರು ಆತನನ್ನು ಕರೆತರಲು ತೆರಳಿದ್ದಾರೆ.












Click it and Unblock the Notifications