Cubbon Park: ಕಬ್ಬನ್ ಪಾರ್ಕ್‌ನಲ್ಲಿ ಶತಮಾನದಷ್ಟು ಹಳೆಯ ರಾಣಿ ವಿಕ್ಟೋರಿಯಾ ಪ್ರತಿಮೆಗೆ ಹಾನಿ
ಕಬ್ಬನ್ ಪಾರ್ಕ್ ಅಂದ್ರೆ ಬೆಂಗಳೂರಿಗರಿಗೆ ಚಿರಪರಿಚಿತ. ಇಲ್ಲಿರುವ ರಾಣಿ ವಿಕ್ಟೋರಿಯಾ ಪ್ರತಿಮೆ ಕೂಡ ಅಷ್ಟೇ ಫೇಮಸ್. ಕಬ್ಬನ್ ಪಾರ್ಕ್‌ನ ಸೆಂಟರ್ ಆಫ್ ಅಟ್ರಾಕ್ಷನ್‌ನಲ್ಲಿ ಈ ಪ್ರತಿಮೆ ಕೂಡ ಒಂದು. ಒಂದು ಶತಮಾನದ ಹಿಂದೆ ಇಲ್ಲಿ ನಿರ್ಮಿಸಲಾಗಿದ್ದ ಪ್ರತಿಮೆಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
ಹೌದು, 1906ರಲ್ಲಿ ಕಬ್ಬನ್ ಪಾರ್ಕ್‌ನ ಈಗಿನ ಕ್ವೀನ್ಸ್ ಸರ್ಕಲ್‌ನಲ್ಲಿ ನಿಲ್ಲಿಸಲಾಗಿದ್ದ ರಾಣಿ ವಿಕ್ಟೋರಿಯಾ ಪ್ರತಿಮೆಯ ಕಿರೀಟಕ್ಕೆ ಹಾನಿಯಾಗಿದೆ ಎಂದು ಹಲವರು ದೂರಿದ್ದು, ಈ ಬಗ್ಗೆ ಉದ್ಯಾನದ ನಡಿಗೆದಾರರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಪ್ರತಿಮೆಯ ಕಿರೀಟ ಹಾನಿಯಾಗಿರುವ ಸಂಬಂಧ ನಿಖರ ಕಾರಣ ತಿಳಿದುಬಂದಿಲ್ಲ.

ಈ ಬಗ್ಗೆ ಬೆಂಗಳೂರಿಗರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಮೆಯ ಫೋಟೋ ಹಂಚಿಕೊಂಡು ಈ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಕಿರೀಟ ನಾಪತ್ತೆಯಾಗಿದೆ ಎಂದು ಹೇಳಲಾಗಿದ್ದು, ಇದನ್ನು ಬಿಬಿಎಂಪಿ ಕಮೀಷನರ್ ಹಾಗೂ ಕಬ್ಬನ್ ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಕಬ್ಬನ್ ಪಾರ್ಕ್‌ನಲ್ಲಿರುವ ರಾಣಿ ವಿಕ್ಟೋರಿಯಾ ಅವರ ಪ್ರತಿಮೆಯು ಬ್ರಿಟಿಷ್ ಅವಧಿಯ ಭಾರತದಲ್ಲಿ ಸ್ಥಾಪಿಸಲಾದ ರಾಣಿ ವಿಕ್ಟೋರಿಯಾ ಅವರ ಮೂಲ ಪ್ರತಿಮೆಗಳಲ್ಲಿ ಇದು ಕೂಡ ಒಂದಾಗಿದ್ದು, ಇದು ಅವುಗಳ ಮೂಲ ಸ್ಥಳ ಎನ್ನುವ ಐತಿಹ್ಯವಿದೆ. ಜಾರ್ಜ್ ಫ್ರೆಡೆರಿಕ್ ಅರ್ನೆಸ್ಟ್ ಆಲ್ಬರ್ಟ್ ಅವರು 1906ರ ಫೆಬ್ರವರಿ 5ರಂದು ಈ ಪ್ರತಿಮೆಯನ್ನು ಅನಾವರಣಗೊಳಿಸಿದರು.

ರಾಣಿ ಪ್ರತಿಮೆಯು ತೆರವು ಮಾಡಿದಂತೆ ಕಾಣುತ್ತಿದೆ, ನೈಸರ್ಗಿಕವಾಗಿ ಬಿದ್ದಿಲ್ಲ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಕಿರೀಟವು ಮೂರು ಪೀಸ್‌ಗಳಾಗಿ ಬಿದ್ದಿರುವುದು ಬೆಳಕಿಗೆ ಬಂದಿದ್ದು, ಅದನ್ನು ತೋಟಗಾರಿಕಾ ಇಲಾಖೆಯು ಸಂಗ್ರಹಿಸಿ ದುರಸ್ತಿ ಕಾರ್ಯ ಆರಂಭಿಸಿದೆ ಎಂದು ಹೇಳಲಾಗುತ್ತಿದೆ. ಯಾರಾದರೂ ಪ್ರತಿಮೆಗೆ ಹಾರ ಹಾಕಲು ಪ್ರಯತ್ನಿಸಿದಾಗ ಕಿರೀಟ ಬಿದ್ದಿರಬಹುದು ಎಂದೂ ಹೇಳಲಾಗುತ್ತಿದೆ.
ಇನ್ನು ಇದಕ್ಕೆ ನಿಖರ ಕಾರಣ ಪತ್ತೆಹಚ್ಚಲು ಅಧಿಕಾರಿಗಳು ಹತ್ತಿರದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸುಮಾರು 118 ವರ್ಷಗಳಷ್ಟು ಹಳೆಯದಾದ ಈ ಪ್ರತಿಮೆಗೆ ಇಂತಹ ಸ್ಥಿತಿ ಬಂದೊದಗಿರುವುದು ವಿಪರ್ಯಾಸ ಎಂದು ಹಲವರು ಖಂಡಿಸಿದ್ದಾರೆ. ಕೂಡಲೇ ಈ ಪ್ರತಿಮೆಯನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
1906ರಿಂದಲೂ ಪಾರ್ಕ್‌ನಲ್ಲಿ ರಾಣಿ ವಿಕ್ಟೋರಿಯಾ ಅವರ ಪ್ರತಿಮೆ ಇದೆ. ಇದು ವಿಶ್ವದ ಅಪರೂಪದ ಹಾಗೂ ಕೆಲವೇ ಸ್ಮಾರಕಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆ ಇದೆ. ಅಲ್ಲದೆ ಈ ಪ್ರತಿಮೆಯು ನಮ್ಮ ಪರಂಪರೆಯ ಪ್ರತೀಕವೂ ಹೌದು. ಈ ಕಿರೀಟವು ಸುಖಾಸುಮ್ಮನೆ ಬೀಳುವಂತದ್ದಲ್ಲ. ಈ ಐತಿಹಾಸಿಕ ಸ್ಮಾರಕವನ್ನು ಕೆಡವಲು ಯಾರೋ ಕಿಡಿಗೇಡಿಗಳು ಯತ್ನಿಸಿರುವ ಸಾಧ್ಯತೆ ಇದೆ. ಇದಕ್ಕೆ ನಿಖರ ಕಾರಣ ಪತ್ತೆ ಹಚ್ಚಬೇಕು. ಸ್ಥಳೀಯ ಸಿಸಿಟಿವಿ ಫುಟೇಜ್ ನೋಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್ ಒತ್ತಾಯಿಸಿದ್ದಾರೆ.












Click it and Unblock the Notifications