ನೋಟು ನಿಷೇಧ ಧಾರಾವಾಹಿಗೆ ಶತದಿನೋತ್ಸವ, ಎಎಪಿಯಿಂದ ಎಷ್ಟೊಂದು ಪ್ರಶ್ನೆ
ನವೆಂಬರ್ 8ರಂದು ನೋಟು ನಿಷೇಧದ ಘೋಷಣೆ ಮಾಡಿದರು ಪ್ರಧಾನಿ ನರೇಂದ್ರ ಮೋದಿ. ಅದಾಗಿ ನೂರು ದಿನಗಳಾಗಿವೆ. ಈ ನಿರ್ಧಾರವೇ ಒಂದು ಹಗರಣ ಎಂದು ಕರೆದಿದ್ದ ಅಮ್ ಆದ್ಮಿ ಪಕ್ಷ, ಈ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದೆ
ಬೆಂಗಳೂರು, ಫೆಬ್ರವರಿ 18: ನೋಟು ನಿಷೇಧವಾಗಿ ನೂರು ದಿನವಾಗಿದ್ದು, ಅದರಿಂದ ಆದ ಲಾಭ-ನಷ್ಟಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏನು ಹೇಳುತ್ತಾರೆ ಎಂದು ದೇಶದ ಜನರು ಎದುರು ನೋಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಹೇಳಿದ್ದು, ಈ ನಡೆಯ ಬಗ್ಗೆ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದೆ.
ನೋಟು ನಿಷೇಧ ಎಂಬ ಮಹಾ ಧಾರಾವಾಹಿಗೆ 100 ದಿನ ತುಂಬಿದೆ. ಆಮ್ ಆದ್ಮಿ ಪಕ್ಷ ಮೊದಲ ದಿನದಿಂದ ಇದೊಂದು '8 ಲಕ್ಷ ಕೋಟಿಯ ಹಗರಣ' ಎಂದು ಹೇಳುತ್ತಿದ್ದು, ಆ ಹೇಳಿಕೆಗೆ ಬದ್ಧವಾಗಿದೆ. 150ಕ್ಕೂ ಹೆಚ್ಚು ಸಾವು, ನಾಲ್ಕು ಲಕ್ಷಕ್ಕಿಂತ ಹೆಚ್ಚು ನೌಕರಿ ಖೋತಾ, ನಗದು ಆಧಾರಿತ ಹಲವಾರು ಸಣ್ಣ ಕೈಗಾರಿಕಾ ಘಟಕಗಳ ಮುಚ್ಚುವಿಕೆ, ಇವುಗಳ ಜೊತೆಗೆ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರದಿಂದ ಘನತೆ ಕಳೆದುಕೊಂಡು ರಿಸರ್ವ್ ಬ್ಯಾಂಕ್ ನರಳುತ್ತಿದೆ ಎಂದು ಆರೋಪಿಸಲಾಗಿದೆ.[ನೋಟು ನಿಷೇಧ, ಜಗತ್ತಿನ ಶ್ರೀಮಂತ ದೇಗುಲದ ಆದಾಯ ನಿತ್ಯ 2 ಕೋಟಿ ಖೋತಾ]

30 ಡಿಸೆಂಬರ್ 2016ರವರೆಗೆ ಮಾಧ್ಯಮದಲ್ಲಿ ವರದಿಯಾದಂತೆ 14.5 ಲಕ್ಷ ಕೋಟಿ ಮೊತ್ತದ ದೊಡ್ಡ ನೋಟುಗಳು ಹಿಂತಿರುಗಿ ಬಂದಿತ್ತು ಆದರೆ ಅದನ್ನು ಇನ್ನೂ ಎಣಿಸಲಾಗಿಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳುತ್ತಿದೆ. ಜನರು ಲಾರಿಗಳಲ್ಲಿ ನೋಟುಗಳನ್ನು ತುಂಬಿಕೊಂಡು ಬಂದು ಆವರಣದಲ್ಲಿ ಸುರಿದರೇನೋ ಎಂಬಂತೆ, ಇಂದಿನ ಗಣಕೀಕರಣದ ಕಾಲದಲ್ಲಿ ನಂಬಲಾಗದ ಹೇಳಿಕೆಯನ್ನು ನೀಡಲು ಆರ್ ಬಿಐಗೆ ಅವಶ್ಯಕತೆ ಆದರೂ ಏನಿತ್ತು ಎಂದು ಪ್ರಶ್ನಿಸಲಾಗಿದೆ.
ಅಂಕಿ-ಅಂಶ ಆಧರಿಸಿ, ನೋಟ್ ಬಂದಿಯಿಂದಾದ ನಷ್ಟವನ್ನು ತಿಳಿಸಲು ಆಮ್ ಆದ್ಮಿ ಪಾರ್ಟಿ ಸಿದ್ಧವಿದೆ. ಆದರೆ ಎಷ್ಟು ಹಣ ತಿರುಗಿ ಬಂತು, ದೇಶಕ್ಕೆ ಎಷ್ಟು ಲಾಭ-ನಷ್ಟ ಆಯಿತು ಎಂಬ ವಿವರವನ್ನು ಬಿಜೆಪಿ ಸರಕಾರ ಜನರಿಗೆ ನೀಡಲು ಸಿದ್ಧವಿದೆಯೇ? ಚುನಾವಣೆ ಇರುವ ರಾಜ್ಯಗಳಲ್ಲಿ ಈ ನೋಟ್ ಬಂದಿಯಲ್ಲಿ ತಮ್ಮದೇನೂ ಪಾತ್ರವಿರಲಿಲ್ಲ, ಇದಕ್ಕಾಗಿ ತಮ್ಮನ್ನು ಶಿಕ್ಷಿಸಬೇಡಿ ಎಂದು ಗೋಗರೆಯುತ್ತಿದ್ದಾರೆ ಎಂದು ಎಎಪಿ ವ್ಯಂಗ್ಯವಾಡಿದೆ.[ಡಿಜಿಟಲ್ ಪೇಮೆಂಟ್: 8 ಲಕ್ಷ ಗ್ರಾಹಕರಿಗೆ 133 ಕೋಟಿ ರು. ಬಹುಮಾನ]

ನೋಟು ಅಸಲಿಯೋ ನಕಲಿಯೋ
ಮೊದಲಿಗೆ ಇದು ಕಾಳಧನಿಕರ ವಿರುದ್ಧ ಸಮರ ಎಂದು ಹೇಳಲಾಯಿತು. ಆದರೆ ಈವರೆಗೂ ಸಿಕ್ಕ ಕಾಳಧನ ಎಷ್ಟು ಎಂಬುದನ್ನು ತಿಳಿಸುವಿರಾ? ಖೋಟಾ ನೋಟಿನ ವಿರುದ್ಧ ಶಸ್ತ್ರ ಚಿಕಿತ್ಸೆ ಎಂದಿರಿ, ಆದರೆ ಇತ್ತೀಚಿಗೆ ಪಾಕಿಸ್ತಾನದಿಂದ ಬಾಂಗ್ಲಾದೇಶದ ಮಾರ್ಗವಾಗಿ ಬಂದ ಹೊಸ ಖೋಟಾ ನೋಟುಗಳು ಅಸಲಿಯೋ/ನಕಲಿಯೋ ಎಂದು ತಿಳಿಯಲು ಸರಕಾರವೇ ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿದೆ.

ಭ್ರಷ್ಟಾಚಾರ ಕಡಿಮೆಯಾಯಿತೇ? ಭಯೋತ್ಪಾದಕರ ಹಲ್ಲೆ ಕಡಿಮೆಯಾಯಿತೇ?
ಸ್ವತಃ ವಿತ್ತ ಮಂತ್ರಿ ಅರುಣ್ ಜೈಟ್ಲಿಯವರು ಸಂಸತ್ತಿನಲ್ಲಿ ಚಲಾವಣೆಯಲ್ಲಿರುವ ನೋಟುಗಳ ಪೈಕಿ ಕೇವಲ 0.02% ನೋಟುಗಳು ಖೋಟಾ ಎಂದು ಹೇಳಿದ್ದರು. ಇದಕ್ಕೆ ಇಷ್ಟು ದೊಡ್ಡ ಕ್ರಮ ಬೇಕಾಗಿತ್ತಾ? ನೋಟು ರದ್ದತಿಯ ಬಗ್ಗೆ ಪ್ರಧಾನಿಗಳ ಪ್ರತಿಯೊಂದು ಹೇಳಿಕೆ ಸುಳ್ಳು ಎಂಬುದು ಸಾಬೀತಾಗುತ್ತಿದೆ. ಭ್ರಷ್ಟಾಚಾರ ಕಡಿಮೆಯಾಯಿತೇ? ಭಯೋತ್ಪಾದಕರ ಹಲ್ಲೆ ಕಡಿಮೆಯಾಯಿತೇ?

ನೋಟು ರದ್ದತಿಯಿಂದ ಜನರಿಗಾದ ಲಾಭವಾದರೂ ಏನು?
ವಿಶ್ವದಲ್ಲಿ ಎಲ್ಲಕ್ಕಿಂತ ಹೆಚ್ಚು ಭಯೋತ್ಪಾದಕ ಹಲ್ಲೆ, ಬಾಂಬ್ ಪ್ರಕರಣ ನಮ್ಮ ದೇಶದಲ್ಲಾಗಿದೆ. ಕಣಿವೆಯಲ್ಲಿ ಕಲ್ಲು ತೂರಾಟ ಕಡಿಮೆಯಾಗಿದೆಯೇ? ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆಯಾಗಿದೆಯೇ? ನೋಟು ರದ್ದತಿಯಿಂದ ಜನರಿಗಾದ ಲಾಭವಾದರೂ ಏನು? ಮಾನ್ಯ ಪ್ರಧಾನಮಂತ್ರಿಗಳೇ ಉತ್ತರಿಸುವಿರಾ ಎಂದು ಪ್ರಶ್ನಿಸಲಾಗಿದೆ.

ಎಟಿಎಂಗಳು ಅದೆಷ್ಟೋ ಕಡೆ ಕಾರ್ಯ ನಿರ್ವಹಿಸುತ್ತಿಲ್ಲ
ಇಂದಿಗೂ ದೇಶದಲ್ಲಿ ಎಟಿಎಂಗಳು ಅದೆಷ್ಟೋ ಕಡೆ ಕಾರ್ಯ ನಿರ್ವಹಿಸುತ್ತಿಲ್ಲ. ಚಿಲ್ಲರೆ ಸಮಸ್ಯೆ ವ್ಯಾಪಾರದಲ್ಲಿ ನಷ್ಟಕ್ಕೆ ಕಾರಣವಾಗುತ್ತಿದೆ. ನೂರು ರೂಪಾಯಿ ಮುಖಬೆಲೆಯ ನೋಟುಗಳು ದೇಶದ ಯಾವುದೇ ಎಟಿಎಂನಲ್ಲಿ ಲಭ್ಯವಿಲ್ಲ. ಹೀಗಿದ್ದರೂ ನೋಟು ರದ್ದತಿಯ ಜಾರಿಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

1.14 ಲಕ್ಷ ಕೋಟಿ ಸಾಲ ರೈಟ್ ಆಫ್
ದೊಡ್ಡ ದೊಡ್ಡ ಕಾರ್ಪೋರೇಟ್ ಸಂಸ್ಥೆಗಳ ಸುಮಾರು 1.14 ಲಕ್ಷ ಕೋಟಿ ಸಾಲವನ್ನು ರೈಟ್ ಆಫ್ ಮಾಡಿರುವ ನರೇಂದ್ರ ಮೋದಿ ಸರಕಾರಕ್ಕೆ ದೇಶದ ರೈತರು ಕಾಣದಾಗಿದ್ದಾರೆ. ರಾಜ್ಯದಲ್ಲಿ ವಿಜಯ ಮಲ್ಯರ 1700 ಕೋಟಿ ಸಾಲ ರೈಟ್ ಆಫ್ ಮಾಡಲಾಗಿದೆ. ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಮುಟ್ಟಿ ಆತ್ಮಹತ್ಯೆ ಮಾಡಿಕೊಂಡು ಸುಟ್ಟು ಕರಕಲಾದ ನಜೀರ್ ಸಾಬ್ ಎಂಬ ರೈತನ ದೇಹ ಕಾಣಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಬಹಿರಂಗ ಚರ್ಚೆಗೆ ಆಹ್ವಾನ
ಇಡೀ ದೇಶವೇ ಪ್ರಧಾನಿಯಿಂದ ಉತ್ತರ ನಿರೀಕ್ಷಿಸುತ್ತಿದೆ. ಅದುವರೆಗೆ ಆಮ್ ಆದ್ಮಿ ಪಾರ್ಟಿ ಸುಮ್ಮನೆ ಕೂರುವುದಿಲ್ಲ. ನೋಟು ರದ್ದತಿಯನ್ನು ಸಮರ್ಥಿಸಿಕೊಂಡ ಬಿಜೆಪಿಯ ಮುಂಖಡರಿಗೆ ಆಮ್ ಆದ್ಮಿ ಪಾರ್ಟಿ ಬಹಿರಂಗ ಚರ್ಚೆಗೆ ಆಹ್ವಾನಿಸುತ್ತಿದ್ದು, ರಾಜ್ಯದ ಮೂಲೆ ಮೂಲೆಯಲ್ಲೂ ಸಾರ್ವಜನಿಕರ ದನಿಯಾಗಿ ಈ ಎಂಟು ಲಕ್ಷ ಕೋಟಿ ಹಗರಣವನ್ನು ಪ್ರಶ್ನೆ ಮಾಡಲಿದೆ ಎಂದು ತಿಳಿಸಲಾಗಿದೆ.












Click it and Unblock the Notifications