"ಬೆಂಗಳೂರಿಗೆ ಒಬ್ಬರೇ ಮೇಯರ್ ಸಾಕಾಗಲ್ಲ"!
ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಳೆದ ಐದು ವರ್ಷಗಳಿಂದ ಚುನಾವಣೆಯೇ ನಡೆದಿಲ್ಲ. 2020ನೇ ಸಾಲಿನಲ್ಲಿ ಬಿಬಿಎಂಪಿಯಲ್ಲಿ ಮೇಯರ್ ಹಾಗೂ ಪಾಲಿಕೆ ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾಗಿದೆ. ಅಲ್ಲಿಂದ ಸ್ಥಳೀಯ ಸಂಸ್ಥೆಗೆ ಚುನಾವಣೆಯೇ ನಡೆದಿಲ್ಲ. ಇದೀಗ ಬಿಬಿಎಂಪಿಗೆ ಒಬ್ಬರೇ ಮೇಯರ್ ಹಾಗೂ ಆಯುಕ್ತರು ಸಾಕಾಗಲ್ಲ ಎನ್ನುವ ಬಗ್ಗೆ ಜೋರು ಚರ್ಚೆಗಳು ಶುರುವಾಗಿದೆ. ಇದಕ್ಕೆ ಕಾರಣ ಬೆಂಗಳೂರಿನಲ್ಲಿ ನಡೆಯುತ್ತಿರುವ ಗ್ರೇಟರ್ ಬೆಂಗಳೂರು ಚರ್ಚೆ. ಬೆಂಗಳೂರಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024ರ ಅನ್ವಯ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡುವುದಕ್ಕೆ ಬಿಬಿಎಂಪಿ ಹಾಗೂ ಸರ್ಕಾರದ ಮುಂದಾಗಿದೆ. ಹೀಗಾಗಿ, ಈ ವಿಚಾರದ ಬಗ್ಗೆ ಈಗ ಚರ್ಚೆ ಜೋರಾಗಿದೆ. ಆದರೆ, ಬೆಂಗಳೂರಿಗೆ ಹಲವು ಮೇಯರ್‌ಗಳು ಬಂದರೆ ಕನ್ನಡಿಗರ ಕಡೆಗಣನೆ ಆಗಲಿದೆ ಎನ್ನುವ ಆರೋಪವೂ ಕೇಳಿಬಂದಿದೆ.
ಬೆಂಗಳೂರು ಬೃಹತ್ ಆಗಿ ಬೆಳೆಯುತ್ತಿದೆ. ಈ ರೀತಿ ಬೆಳೆಯುತ್ತಿರುವ ಬೆಂಗಳೂರಿಗೆ ಒಬ್ಬರೇ ಮೇಯರ್ ಹಾಗೂ ಒಬ್ಬರೇ ಆಯುಕ್ತರಿಂದ ನಿರ್ವಹಣೆ ಮಾಡುವುದು ತುಂಬಾ ಕಷ್ಟವಾಗಲಿದೆ ಎಂದು ಗ್ರೇಟರ್ ಬೆಂಗಳೂರು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಬೆಂಗಳೂರಿನ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಹೆಚ್ಚು ನಗರ ಪಾಲಿಕೆ / ಈಗ ಇರುವ ಬಿಬಿಎಂಪಿಯ ಸಣ್ಣ ಸಣ್ಣ ಭಾಗಗಳ ರಚನೆಯಾಗಬೇಕು ಎನ್ನುವ ಅಭಿಪ್ರಾಯ ಸರ್ಕಾರದಿಂದ ಕೇಳಿ ಬಂದಿದೆ. ಆದರೆ, ಇದಕ್ಕೆ ಬೆಂಗಳೂರಿನ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ರೀತಿ ಹೆಚ್ಚು ಪಾಲಿಕೆಗಳು ಇದ್ದರೆ ಸ್ಥಳೀಯ ಮಟ್ಟದಲ್ಲೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಸಾಧ್ಯವಿದೆ ಎಂದು ಗ್ರೇಟರ್ ಬೆಂಗಳೂರು ಸಭೆಯಲ್ಲಿ ಶಾಸಕ ರಿಜ್ವಾನ್ ಅರ್ಷದ್ ಅವರು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ವಿಭಜನೆ ಬೇಡ: ಇನ್ನು ಶಾಸಕ ರಿಜ್ವಾನ್ ಅರ್ಷದ್ ಅವರ ಹೇಳಿಕೆಗೆ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ - 2024ರ ಪರಿಶೀಲನೆ ಹಾಗೂ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಜನರಿಂದಲೇ ವಿರೋಧ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ಪಾಲಿಕೆಯನ್ನು ವಿಭಜನೆ ಮಾಡಬೇಡಿ. ಈಗ ಬೆಂಗಳೂರಲ್ಲಿ ಎಂಟು ವಲಯಗಳಿವೆ. ಆ ವಲಯಗಳ ಸಂಖ್ಯೆಯನ್ನೇ ಹೆಚ್ಚಳ ಮಾಡಿ. ಮೊದಲು ಚುನಾವಣೆ ನಡೆಸಿ ಅಂತ ಜನ ಹೇಳಿದ್ದಾರೆ. ವಿಭಜನೆ ಮಾಡುವುದು ಅತ್ಯಂತ ಅವೈಜ್ಞಾನಿಕ ಎಂದೂ ಜನ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲೂ ಜನರಿಂದ ವಿರೋಧ ವ್ಯಕ್ತವಾಗುತ್ತಿದೆ.
ರೋಹಿತ್ ಎನ್ನುವವರು ಇದರ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು. ಬೆಂಗಳೂರು ಕನ್ನಡಿಗರ ನಗರ. ಅದರ ನಿರ್ವಹಣೆಯೂ ಕನ್ನಡಿಗರ ಕೈಯಲ್ಲಿಯೇ ಇರಬೇಕು. ಇಲ್ಲದಿದ್ದರೆ, ನಮ್ಮ ಶತಮಾನಗಳ ಪರಂಪರೆಯ ನಗರವನ್ನು ಇಲ್ಲಿಗೆ ವಲಸೆ ಬಂದವರ ಆಡಳಿತಕ್ಕೆ ಒಳಪಡಿಸುವಂತೆ ಆಗುತ್ತದೆ. ಹಾಗಾಗಿ, ಈ ಪರಿಸ್ಥಿತಿಯನ್ನು ಕನ್ನಡಿಗರು ಎಚ್ಚರಿಕೆಯಿಂದ ಅವಲೋಕಿಸಬೇಕು, ಮತ್ತು ನಮ್ಮ ಹಕ್ಕುಗಳನ್ನು ಕಾಪಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದ್ದಾರೆ.
ನಿಮ್ಮ ಅಭಿಪ್ರಾಯವೇನು ಎಂದು ಕೇಳಿರುವ ಅವರು, ಈ ಬಗ್ಗೆ ನಿಮ್ಮ ಅಭಿಪ್ರಾಯ, ಅನುಭವ, ಮತ್ತು ಪ್ರಸ್ತಾಪಗಳನ್ನು ಈ ವೇದಿಕೆಯಲ್ಲಿ ಹಂಚಿಕೊಳ್ಳಿ. ನಮ್ಮ ಭವಿಷ್ಯ ಹೇಗಿರಬೇಕು ಎಂಬುದನ್ನು ಕನ್ನಡಿಗರೇ ನಿರ್ಧರಿಸೋಣ ಎಂದಿದ್ದಾರೆ. ಸಂವಾದಕ್ಕೆ ಸ್ವಾಗತ! ನಿಮ್ಮ ದೃಷ್ಟಿಕೋನವನ್ನು ಶಿಷ್ಟವಾಗಿ, ಸಮರ್ಥನೀಯವಾಗಿ ಮತ್ತು ಉದಾಹರಣೆಗಳೊಂದಿಗೆ ಹಂಚಿಕೊಳ್ಳಿ ಎಂದಿದ್ದು ಹಲವು ಕನ್ನಡಿಗರು ಇದಕ್ಕೆ ರಿಯಾಕ್ಟ್ ಮಾಡಿದ್ದಾರೆ.












Click it and Unblock the Notifications