ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಅಧಿವೇಶನ ಹೋರಾಟಗಳ ಕರ್ಮಭೂಮಿ!

By Shami
|
Google Oneindia Kannada News

ಬೆಂಗಳೂರು, ಡಿ.7: ಬೆಳಗಾವಿಯಲ್ಲಿ ಚಳಿಗಾಲದ ವಿಧಾನಸಭಾ ಅಧಿವೇಶನ ಡಿ.10 ರಿಂದ 20ರವರೆಗೆ ನಡೆಯಲಿದೆ. ಬಿಜೆಪಿಯಿಂದ ಸುವರ್ಣ ಸೌಧ ಮುತ್ತಿಗೆ ಬೆದರಿಕೆ ಜೊತೆಗೆ ಹತ್ತು ಹಲವು ಸಂಘಟನೆಗಳ ಪ್ರತಿಭಟನೆಯನ್ನು ಎದುರಿಸುತ್ತಿರುವ ಸಿದ್ದರಾಮಯ್ಯ ಅವರ ಸರ್ಕಾರ ಮೂರು ಪ್ರಮುಖ ವಿಧೇಯಕಗಳ ಮಂಡನೆಗೆ ಮುಂದಾಗಿದೆ.

ಡಿ.10 ರಿಂದ 20ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದ್ದು, ಡಿ.13ರ 2ನೇ ಶನಿವಾರ, ಡಿ.14ರ ಭಾನುವಾರ ಮಾತ್ರ ರಜೆ ಇದೆ. ಅಧಿವೇಶನಕ್ಕಾಗಿ 1352 ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ 1115 ಚುಕ್ಕೆ ಗುರುತಿನ ಪ್ರಶ್ನೆಗಳಾಗಿವೆ. 113 ಗಮನ ಸೆಳೆವ ಪ್ರಶ್ನೆಗಳಿವೆ ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ತಿಳಿಸಿದ್ದಾರೆ.

ಪ್ರತಿಭಟನೆಗಳ ಬಿಸಿ: ಸುಮಾರು 26ಕ್ಕೂ ಅಧಿಕ ಸಂಘಟನೆಗಳು ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆಗೆ ಮುಂದಾಗಿವೆ. ರೈತರು, ಗಡಿಭಾಗದ ಸಂತ್ರಸ್ತರು, ಮಾದಿಗ ದಂಡೋರ ಸಮುದಾಯದವರು ಸೇರಿದಂತೆ ಅನೇಕ ಸಂಘಟನೆಗಳು ಹಕ್ಕೊತ್ತಾಯ, ಅನುದಾನ ಬೇಡಿಕೆ, ಸಮಸ್ಯೆ ಇತ್ಯರ್ಥಕ್ಕಾಗಿ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿವೆ. [ಡಿ.9ರೊಂದಿಗೆ ಬಿಎಸ್ ವೈ ನಂಟೇನು?]

Winter session of K'taka assembly

ಬಿಜೆಪಿಯಿಂದ ಮುತ್ತಿಗೆ ಬೆದರಿಕೆ: ಸುಮಾರು 50,000ಕ್ಕೂ ಅಧಿಕ ಕಾರ್ಯಕರ್ತರು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸಜ್ಜಾಗಿದ್ದಾರೆ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ವೈಫಲ್ಯ ಕಂಡಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಿಎಸ್ ಯಡಿಯೂರಪ್ಪ ಕರೆ ನೀಡಿದ್ದಾರೆ.

ಯಡಿಯೂರಪ್ಪ ಮಾತನ್ನು ಬೆಂಬಲಿಸಿರುವ ಬಿಜೆಪಿ ನಾಯಕರಾದ ಮಾಜಿ ಸಚಿವ ಸುರೇಶ್ ಕುಮಾರ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಗೃಹ ಸಚಿವ ಆರ್ ಅಶೋಕ್ ಅವರು ಸದನದಲ್ಲಿ ಕಾಂಗ್ರೆಸ್ ಕಂಗಾಲಾಗುವಂತೆ ಮಾಡಲು ಸಿದ್ಧತೆ ನಡೆಸಿದ್ದಾರೆ.

4 ಸಚಿವರ ರಾಜೀನಾಮೆಗೆ ಆಗ್ರಹ: ದಿನೇಶ ಗುಂಡೂರಾವ್, ಎಚ್.ಎಸ್. ಮಹದೇವ ಪ್ರಸಾದ್, ಖಮರುಲ್ ಇಸ್ಲಾಂ, ಕೆ.ಜೆ. ಜಾರ್ಜ್ ವಿರುದ್ಧ ಬಿಜೆಪಿ ತೊಡೆ ತಟ್ಟಿ ನಿಲ್ಲಲಿದ್ದು ಅಕ್ರಮ ಆಸ್ತಿ, ಭೂ ಹಗರಣದ ಆರೋಪ ಹೊತ್ತಿರುವ ಈ ನಾಲ್ವರು ಸಚಿವರ ರಾಜೀನಾಮೆ ಪಡೆಯುವುದು ನಮ್ಮ ಗುರಿ ಎಂದು ವಿಧಾನಪರಿಷತ್ ನಾಯಕ ಕೆಎಸ್ ಈಶ್ವರಪ್ಪ ಗುಡುಗಿದ್ದಾರೆ. [ನಾಲ್ವರು ಸಚಿವರು ಬಿಜೆಪಿ ಟಾರ್ಗೆಟ್]

Belagavi Suvarna Soudha

ರೈತರ ಪ್ರತಿಭಟನೆ: ಹೈ ಕೋರ್ಟ್ ಸೂಚನೆ ನೀಡಿದ್ದರೂ ರೈತರ ಬಾಕಿ ವಿತರಿಸದ ಸಕ್ಕರೆ ಕಾರ್ಖಾನೆಗಳ ಧೋರಣೆ ಖಂಡಿಸಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆ ಕಬ್ಬು ಬೆಳೆಗಾರರು ಸುವರ್ಣ ವಿಧಾನ ಸೌಧರ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಪ್ರತಿ ಟನ್ನಿಗೆ 2650 ರು ಕನಿಷ್ಠ ಬೆಂಬಲ ಬೆಲೆ ಘೋಷಿಸಿದ್ದ ಸರ್ಕಾರ ಕೊಟ್ಟ್ ಮಾತು ತಪ್ಪಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. [ಕರ್ನಾಟಕದಲ್ಲಿ ಕಬ್ಬು ಜಗಿದಷ್ಟು ಕಹಿ]

ಕಾಂಗ್ರೆಸ್ ಸಿದ್ಧತೆ: ಪ್ರತಿಪಕ್ಷಗಳ ತಂತ್ರಗಾರಿಕೆಗೆ ಪ್ರತಿತಂತ್ರ ಹೆಣೆದಿರುವ ಸಿಎಂ ಸಿದ್ದರಾಮಯ್ಯ ಅವರು ಎಲ್ಲಾ ಸಚಿವರುಗಳಿಗೆ ಕಲಾಪದ ವೇಳೆ ತಪ್ಪದೇ ಹಾಜರಿರುವಂತೆ ಕರೆ ನೀಡಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ವಾಗ್ಬಾಣಗಳನ್ನು ತುಂಡರಿಸಲು ಸಜ್ಜಾಗಿ ಬನ್ನಿ ಎಂದು ಕಿವಿಮಾತು ಹೇಳಿದ್ದಾರೆ.

ಪೊಲೀಸರ ಸರ್ಪಗಾವಲು: ಡಿ.9ರಂದೇ ಎಂಇಎಸ್ ಮಹಾಮೇಳವ ಅನುಮತಿ ಕೋರಿ ಮರಾಠಿ ನಾಯಕರು ಮನವಿ ಸಲ್ಲಿಸಿರುವುದು ಪೊಲೀಸರಿಗೆ ಕೊಂಚ ತಲೆ ಬಿಸಿ ತಂದಿದೆ. ಈ ಬಗ್ಗೆ ನಾಳೆ ನಿರ್ಣಯ ಹೊರ ಹಾಕುವ ಸಾಧ್ಯತೆಯಿದೆ ಎಂದು ಉಪ ಆಯುಕ್ತ ಎಸ್ ರವಿ ಅವರು ಒನ್ ಇಂಡಿಯಾಗೆ ತಿಳಿಸಿದ್ದಾರೆ. ಎಂಇಎಸ್ ಮಹಾಮೇಳವಕ್ಕೆ ಅನುಮತಿ ನೀಡಬಾರದೆಂದು ಕರ್ನಾಟಕ ನವನಿರ್ಮಾಣ ಸೇನೆ ಪೊಲೀಸ್ ಐಜಿಪಿ(ಉತ್ತರ ವಲಯ) ಅವರಿಗೆ ಪ್ರತಿ ಮನವಿಯನ್ನು ಸಲ್ಲಿಸಿದೆ. [ವಾಟಾಳ್ ಏಕಾಂಗಿ ಹೋರಾಟ]

Belagavi

ಆತ್ಮಹತ್ಯೆ ತಡೆಗೆ ಕ್ರಮ: ಚಳಿಗಾಲದ ಅಧಿವೇಶನಕ್ಕಾಗಿಯೇ ಒಟ್ಟು ಆರು ಸಾವಿರ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ರೈತರ ಆತ್ಮಹತ್ಯೆ ಪ್ರಯತ್ನವನ್ನುಹತ್ತಿಕ್ಕಲು ವಿಶೇಷ ಆತ್ಮಹತ್ಯಾ ತಡೆ ದಳವನ್ನು ಪೊಲೀಸರು ರಚಿಸಿಕೊಂಡಿದ್ದು ಮಫ್ತಿಯಲ್ಲಿ ಪ್ರತಿಭಟನಾಕಾರರ ಮೇಲೆ ನಿಗಾ ಇಡಲಿದ್ದಾರೆ ಎಂದು ಉತ್ತರ ವಲಯ ಐಜಿಪಿ ಭಾಸ್ಕರ್‌ರಾವ್ ತಿಳಿಸಿದ್ದಾರೆ. [ಬೆಳಗಾವಿಯಲ್ಲಿ ರೈತ ಆತ್ಮಹತ್ಯೆ]

ಸದನದಲ್ಲಿ ವಿಧೇಯಕಗಳು: ಚಳಿಗಾಲದ ಅಧಿವೇಶನದಲ್ಲಿ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ, ಎಸ್ಮಾ ಮಸೂದೆ ಜಾರಿ, ಗೋಹತ್ಯೆ ನಿಷೇಧ ದಂತಹ ಹಲವಾರು ಪ್ರಮುಖ ವಿಧೇಯಕ ಗಳನ್ನು ಮಂಡಿಸಲಾಗುತ್ತಿದೆ.

ಕರ್ನಾಟಕ ಜಾನುವಾರು ವಧೆ, ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2010ನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಅದು ಕೂಡ ಚರ್ಚೆ ಆಗಲಿದೆ. ಕೇಂದ್ರ ಸರ್ಕಾರ ಸಂಸತ್‌ನಲ್ಲಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಮಸೂದೆಗೆ ಅಂಗೀಕಾರ ಪಡೆದಿದ್ದು ಅದಕ್ಕೆ 17 ಸದಸ್ಯರ ಸಹಮತ ಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯಸಭಾ ಅಧ್ಯಕ್ಷರು ಮಸೂದೆ ಕಳುಹಿಸಿದ್ದಾರೆ.

ಸದನದ ಸಂಖ್ಯಾಬಲ: ಕರ್ನಾಟಕ ಅಸೆಂಬ್ಲಿಯಲ್ಲಿ 224 ಸದಸ್ಯರಿದ್ದು, 121 ಕಾಂಗ್ರೆಸ್, 40 ಬಿಜೆಪಿ, 40 ಜೆಡಿಎಸ್ ಹಾಗೂ 21 ಮಂದಿ ಇತರೆ ಸದಸ್ಯರಿದ್ದಾರೆ. 2013ರಲ್ಲಿ 12 ದಿನಗಳ ಅಧಿವೇಶನಕ್ಕೆ ಸುಮಾರು 17 ಕೋಟಿ ರು ಖರ್ಚು ಮಾಡಲಾಗಿತ್ತು ಎಂದು ಕರ್ನಾಟಕ ವಿಧಾನಸಭಾ ಕಾರ್ಯದರ್ಶಿ ಓಂ ಪ್ರಕಾಶ್ ಹೇಳಿದ್ದಾರೆ. [ಶಾಸಕರಿಗೆ ಡಿನ್ನರ್ ಮಿಸ್]

ಸುವರ್ಣ ವಿಧಾನ ಸೌಧ: ಸುಮಾರು 380 ಕೋಟಿ ರು ವೆಚ್ಚದಲ್ಲಿ ನಿರ್ಮಾಣವಾದ ಸುವರ್ಣ ವಿಧಾನ ಸೌಧ 2012ರಲ್ಲಿ ವರ್ಷಕ್ಕೊಮ್ಮೆ(ಚಳಿಗಾಲ) ಮಾತ್ರ ಅಧಿವೇಶನ ನಡೆಸಲಾಗುತ್ತಿದೆ. ಮಿಕ್ಕಂತೆ ಸೌಧದತ್ತ ಯಾರೂ ಸುಳಿಯುವುದಿಲ್ಲ. ಗಡಿಭಾಗದಲ್ಲಿ ಕನ್ನಡತನವನ್ನು ಉಳಿಸಿ ಬೆಳೆಸಲು ಸರ್ಕಾರ ಬದ್ಧವಾಗಿದೆ ಎಂದು ತೋರಿಸಲು ಕುಂದಾನಗರಿಯಲ್ಲಿ ಕಲಾಪಗಳನ್ನು ನಡೆಸಲಾಗುತ್ತಿದೆ.

English summary
The Belagavi winter session of Karnataka Assembly is set to begin here on Tuesday and a number of parties, including the state BJP, are gearing up to lay siege to the Suvarna Soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X