ಬೆಳಗಾವಿಯಲ್ಲಿ ಬುದ್ಧಿ ಹೇಳಲು ಬಂದವರಿಗೆ ಚಾಕು ಇರಿದ ಯುವಕ
ಬೆಳಗಾವಿ, ಮಾರ್ಚ್ 17: ಯುವತಿಯನ್ನು ಪೀಡಿಸುತ್ತಿದ್ದ ಯುವಕನಿಗೆ ಬುದ್ಧಿವಾದ ಹೇಳಲು ಹೋದ ಯುವತಿಯ ಕುಟುಂಬಸ್ಥರಿಗೆ ಚಾಕು ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ನಿನ್ನೆ ಬೆಳಗಾವಿ ತಾಲೂಕಿನ ದೇವಗಿರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
Recommended Video
ದೇವಗಿರಿ ಗ್ರಾಮದ ರವಿ ಪರಸು ಬಸ್ಸರಗಿ (19) ಬಂಧಿತ ಯುವಕ. ಇನ್ನೋರ್ವ ಆರೋಪಿ ಅಡಿವೆಪ್ಪಾ ಕುಂಬರಗಿ ಪರಾರಿಯಾಗಿದ್ದು, ಅದೇ ಗ್ರಾಮದ ಯುವತಿ ಚಿಕ್ಕಪ್ಪ ಬಸವರಾಜ ಮಜಗಾವಿ (45) ಹಲ್ಲೆಗೊಳಗಾದ ವ್ಯಕ್ತಿ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿಯನ್ನು ಬಂಧಿಸಿಲಾಗಿದೆ. ಮಾರ್ಚ್ 15ರ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.
ಕೆಲವು ದಿನಗಳಿಂದ ರವಿ ಬಸ್ಸರಗಿ ಎಂಬ ಯುವಕ ಅದೇ ಗ್ರಾಮದ ಯುವತಿಯ ಕೆಲವು ಫೋಟೊಗಳನ್ನು ಇಟ್ಟುಕೊಂಡು ನಿರಂತರವಾಗಿ ಕಿರುಕುಳ ನೀಡುತ್ತಿದ್ದನು. ಆರೋಪಿಯ ಕಿರುಕುಳದಿಂದ ಬೇಸತ್ತ ಯುವತಿ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಇದರಿಂದಾಗಿ ಯುವತಿಯ ಮನೆಯವರು ಬುದ್ಧಿವಾದ ಹೇಳಲು ಯುವಕನ ಮನೆಗೆ ಬರಲು ಮುಂದಾಗಿದ್ದಾರೆ.

ಈ ವಿಷಯ ತಿಳಿದ ಆರೋಪಿ ರವಿ ಬಸ್ಸರಗಿ ಮತ್ತು ಆತನ ಸ್ನೇಹಿತ ಅಡಿವೇಪ್ಪಾ ಕುಂಬರಗಿ ಜೊತೆಗೂಡಿ ಯುವತಿಯ ಚಿಕ್ಕಪ್ಪನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾರೆ. ಇರಿತಕ್ಕೊಳಗಾದ ಬಸವರಾಜ ಮಜಗಾವಿ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಆರೋಪಿಗಳು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ರವಿ ಬಸ್ಸರಗಿ ಸಿಕ್ಕಿಹಾಕಿಕೊಂಡಿದ್ದಾರೆ.












Click it and Unblock the Notifications