ಬಿಎಸ್ವೈ ಮರಳಿ ಗೂಡಿಗೆ: ಡಿ 9ಕ್ಕೆ ಕೆಜೆಪಿ ವಿಸರ್ಜನೆ?
ಬೆಳಗಾವಿ, ಡಿ.6: ಸೋ, ಗೊಂದಲದ ಗೂಡಾಗಿದ್ದ ಕೆಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರು ಮರಳಿ ಬಿಜೆಪಿ ಗೂಡು ಸೇರಿಕೊಳ್ಳುವುದು ಪಕ್ಕಾ ಆಗಿದೆ.
ಆದರೆ ಯಡಿಯೂರಪ್ಪಗೆ ಅವರ ಕಟ್ಟಾ ಬೆಂಬಲಿಗರು ಮತ್ತು ಕೆಜೆಪಿ ಶಾಸಕರದ್ದೇ ಚಿಂತೆ. ಯಡಿಯೂರಪ್ಪ ಸೇರಿದಂತೆ ಪ್ರಮುಖ ನಾಯಕರೆಲ್ಲಾ ಚಳಿಗಾಲದ ಅಧಿವೇಶನ ಕಾರಣ ಪ್ರಸ್ತುತ ಬೆಳಗಾವಿಯಲ್ಲೇ ಇದ್ದಾರೆ. ನಿನ್ನೆ ದಿಲ್ಲಿಯಿಂದ ಬಿಜೆಪಿ ವರಿಷ್ಠರು ಗ್ರೀನ್ ಸಿಗ್ನಲ್ ರವಾನಿಸುತ್ತಿದ್ದಂತೆ ಯಡಿಯೂರಪ್ಪನವರು ತಮ್ಮ ಚರ್ಯೆ ಬದಲು ಮಾಡಿಕೊಂಡು ಎದುರಿಗಿದ್ದ ಶಾಸಕರ ಜತೆ ನೇರಾನೇರ ಚರ್ಚೆಗಿಳಿದಿದ್ದಾರೆ.

ಬಿಜೆಪಿಯಲ್ಲಿ ಕೆಜೆಪಿಯನ್ನು ವಿಲೀನ ಮಾಡಲು ನಾಲ್ಕು ಶಾಸಕರ ಅಗತ್ಯವಿದೆ. ಇಲ್ಲದಿದ್ದರೆ ಕಾನೂನು ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ತಮ್ಮ ಜತೆ ಇನ್ನೂ 3 ಶಾಸಕರು ಇರುವಂತೆ ನೋಡಿಕೊಳ್ಳುವ ಪ್ರಯತದಲ್ಲಿ ಯಡಿಯೂರಪ್ಪ ತಲ್ಲೀನರಾಗಿದ್ದಾರೆ. ಏನೇ ಆಗಲಿ ಡಿ. 9ರಂದು ಅಂತಿಮ ಬಾರಿಗೆ ಕೆಜೆಪಿ ಕಾರ್ಯಕಾರಿಣಿ ನಡೆಸಿ, ಅಂದೇ ಪಕ್ಷವನ್ನು ವಿಸರ್ಜಿಸುವ ಲಕ್ಷಣಗಳು ಹೆಚ್ಚಾಗಿವೆ. ಅಂದಹಾಗೆ ಸರಿಯಾಗಿ ಒಂದು ವರ್ಷದ ಹಿಂದೆ ಹಾವೇರಿಯಲ್ಲಿ ಕೆಜೆಪಿ ಜನ್ಮ ತಾಳಿತ್ತು.
ಬಿಆರ್ ಪಾಟೀಲ್, ನಾಗಮಾರಪಲ್ಲಿ ಯಡಿಯೂರಪ್ಪರಿಂದ ದೂರ: ಕೆಜೆಪಿ ಶಾಸಕರಾದ ಗುರು ಪಾಟೀಲ್, ಯುಬಿ ಬಣಕಾರ್, ವಿಶ್ವನಾಥ ಪಾಟೀಲ್ ಅವರುಗಳೇನೋ ಯಡಿಯೂರಪ್ಪ ಎದುರು ಓಡಾಡಿಕೊಂಡಿದ್ದಾರೆ. ಅರ್ಥಾತ್ ಈ ಮೂವರೂ ಬಿಎಸ್ವೈ ಜತೆ ಬಿಜೆಪಿ ಪ್ರವೇಶಿಸುವುದು ಖಾತ್ರಿಯಾಗಿದೆ.
ಇನ್ನು ಬಿ ಆರ್ ಪಾಟೀಲ್ ಅವರೂ ಸಹ ಒಮ್ಮೆ ಯಡಿಯೂರಪ್ಪ ಜತೆ ಮಾತಿಗೆ ಸಿಕ್ಕಿದ್ದಾರೆ. ಆಗ ಯಡಿಯೂರಪ್ಪ ಅವರು ಬಿಜೆಪಿಗೆ ಹೋಗುವ ವಿಷಯದಲ್ಲಿ ನಿಮ್ಮ ನಿಲುವೇನು ಎಂದು ಕೇಳಿದ್ದಾರೆ. ಅದಕ್ಕೆ ಪಾಟೀಲರು ಮೊದಲಿಂದಲೂ ನಾನು ಬಿಜೆಪಿ ಮತ್ತು ಕಾಂಗ್ರೆಸ್ ವಿರೋಧಿ ರಾಜಕಾರಣ ಮಾಡಿಕೊಂಡು ಬಂದವನು. ಹಾಗಾಗಿ ಬಿಜೆಪಿಗೆ ಸೇರಲು ಸಾಧ್ಯವಿಲ್ಲ. ಆದರೂ ಕ್ಷೇತ್ರದ ಮತದಾರರ ಜತೆ ಚರ್ಚಿಸಿ, ಮುಂದಿನ ನಿರ್ಧಾರ ಕೈಗೊಳ್ಳುವೆ ಎಂದು ತಮ್ಮ ಸ್ಪಷ್ಟ ನಿರ್ಧಾರವನ್ನು ತಿಳಿಸಿದ್ದಾರೆ.
ಹಾಗೆಯೇ, ಗುರುಪಾದಪ್ಪ ನಾಗಮಾರಪಲ್ಲಿ ಅವರೂ ಸಹ ತಾವಿ ಬಿಜೆಪಿ ಸೇರುವ ಪ್ರಮೇಯವೇ ಇಲ್ಲ ಅಂದಿದ್ದಾರೆ. ಹಾಗಾಗಿ ಇರೋ ನಾಲ್ಕು ಮಂದಿಯಲ್ಲಿ ಬಿಆರ್ ಪಾಟೀಲ್ ಮತ್ತು ನಾಗಮಾರಪಲ್ಲಿ ಅವರನ್ನು ಹೊರತುಪಡಿಸಿ ಕೆಜೆಪಿಯಲ್ಲಿ ಯಡಿಯೂರಪ್ಪ ಸೇರಿದಂತೆ ನಾಲ್ಕು ಮಂದಿ ಒಂದು ದಡದಲ್ಲಿದ್ದರೆ, ಇವರಿಬ್ಬರೂ ಮತ್ತೊಂದು ತೀರದಲ್ಲಿದ್ದಾರೆ.
ವಿಲೀನವಾಗುತ್ತಿದ್ದಂತೆ ಯಡಿಯೂರಪ್ಪ ಪ್ರತಿಪಕ್ಷ ನಾಯಕರಾಗುವುದಿಲ್ಲ:
ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ ಯಾವುದೇ ಪಕ್ಷ ಇನ್ನೊಂದು ಪಕ್ಷದಲ್ಲಿ ವಿಲೀನವಾಗಲು ಮೂರನೇ ಎರಡರಷ್ಟು ಶಾಸಕರಿರಬೇಕು. ಯಡಿಯೂರಪ್ಪ ಜತೆಗೆ ಇನ್ನೂ ಮೂರು ಮಂದಿ ಬಿಜೆಪಿಗೆ ಮರಳುವುದೇ ಆದರೆ ಆ ನಾಲ್ಕೂ ಮಂದಿ ಬಿಜೆಪಿ ಜತೆ ಗುರುತಿಸಿಕೊಳ್ಳಬಹುದು ಅಷ್ಟೇ. ಆದರೆ ಬಿಜೆಪಿ ಶಾಸಕರು ಅನ್ನಿಸಿಕೊಳ್ಳುವುದಿಲ್ಲ. ವಿಲೀನವಾದರೂ ಕೆಜೆಪಿ ಶಾಸಕರು ಅಂತಲೇ ಅಧಿಕೃತವಾಗಿ ಚಾಲನೆಯಲ್ಲಿ ಇರುತ್ತಾರೆ. ಹಾಗಾಗಿ ಬಿಜೆಪಿ ಜತೆ ವಿಲೀನವಾಗುತ್ತಿದ್ದಂತೆ ಯಡಿಯೂರಪ್ಪ ಪ್ರತಿಪಕ್ಷ ನಾಯಕರಾಗುತ್ತಾರೆ ಎಂದು ಹೇಳಲಾಗದು.
ಉಳಿದಿಬ್ಬರೂ ಸಹ ರಾಜಕೀಯ ಕಾಲಾಂತರದಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ಜತೆ ಕೈಜೋಡಿಸಬಹುದಾದರೂ ಆ ಪಕ್ಷಗಳ ಶಾಸಕರಾಗುವುದಿಲ್ಲ. ಹಾಲಿ ವಿಧಾನಸಭೆಯ ಅವಧಿಯುದ್ದಕ್ಕೂ ಅವರೂ ಕೆಜೆಪಿ ಶಾಸಕರಾಗಿಯೇ ಪ್ರತ್ಯೇಕವಾಗಿ ಉಳಿಯಲಿದ್ದಾರೆ.












Click it and Unblock the Notifications