ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ವಿಚಾರದಲ್ಲಿ ಬಿಜೆಪಿ ಮೌನವೇಕೆ?
ಬೆಂಗಳೂರು, ಸೆಪ್ಟೆಂಬರ್ 07 : ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಮುಗಿದಿದೆ. ಶುಭ ಶುಕ್ರವಾರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಣಕ್ಕೆ ಗೆಲುವಾಗಿದೆ. ಆದರೆ, ಬಿಜೆಪಿ ಈ ವಿಚಾರದಲ್ಲಿ ಏಕೆ ಮೌನವಾಗಿದೆ?.
ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಮಹದಾದೇವ ಪಾಟೀಲ್ ಅವಿರೋಧವಾಗಿ ಆಯ್ಕೆಯಾದರು. ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಣದಲ್ಲಿ ಅವರು ಗುರುತಿಸಿಕೊಂಡಿದ್ದರು. ಇದರಿಂದ ಜಾರಕಿಹೊಳಿ ಕುಟುಂಬಕ್ಕೆ ಹಿನ್ನಡೆ ಉಂಟಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಸಂಧಾನ ಸಭೆ ನಡೆಸಿ ಬ್ಯಾಂಕ್‌ಗೆ ಅಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಿದರು.
ಆದರೆ, ಬಿಜೆಪಿ ಈ ವಿಚಾರದಲ್ಲಿ ಮೌನವಾಗಿದೆ. ಜಾರಕಿಹೊಳಿ ಕುಟುಂಬದ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಕ್ಷೇತ್ರದ ಶಾಸಕರಾಗಿದ್ದು, ಅವರು ಬಿಜೆಪಿಯಲ್ಲಿದ್ದಾರೆ. ಆದರೂ ಪಕ್ಷದ ನಾಯಕರು ಈ ವಿಚಾರದ ಬಗ್ಗೆ ಮೌನ ವಹಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ....

ಯಡಿಯೂರಪ್ಪ ಖಡಕ್ ಸೂಚನೆ
'ನಮ್ಮ ಪಕ್ಷದ ಯಾವ ನಾಯಕರೂ ಸಹ ಜಾರಕಿಹೊಳಿ ಸಹೋದರರು, ಲಕ್ಷ್ಮೀ ಹೆಬ್ಬಾಳ್ಕರ್ ಪರವಾಗಿ ನಿಲ್ಲಬಾರದು. ಅದು ಅವರ ಪಕ್ಷದ ಒಳಜಗಳ ಎಲ್ಲಿಗೆ ಹೋಗಿ ತಲುಪುತ್ತದೆ ನೋಡೋಣ. ಅವರ ಜಗಳ ಮುಗಿದ ಬಳಿಕ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸೋಣ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಜಿಲ್ಲೆಯ ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದರು. ಆದ್ದರಿಂದ, ಎಲ್ಲಾ ನಾಯಕರು ಮೌನಕ್ಕೆ ಶರಣಾಗಿದ್ದರು.

ಕೆ.ಎಸ್.ಈಶ್ವರಪ್ಪ ಹೇಳಿಕೆ
ಶಿವಮೊಗ್ಗ ಶಾಸಕ ಮತ್ತು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಬೆಳಗಾವಿ ಕಾಂಗ್ರೆಸ್ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದರು. 'ಕಾಂಗ್ರೆಸ್‌ನವರಿಗೆ ಹೇಳುವವರು, ಕೇಳುವವರೂ ಯಾರೂ ಇಲ್ಲ ಎಂಬುದಕ್ಕೆ ಈ ವಿಚಾರವೇ ಪ್ರಮುಖ ಸಾಕ್ಷಿ' ಎಂದು ಆರೋಪಿಸಿದರು.
'ಜಾರಕಿಹೊಳಿ ಸಹೋದರರು ಮಹಿಳಾ ಜನಪ್ರತಿನಿಧಿಯನ್ನು ಹೇಗೆ ನಡೆಸಿಕೊಂಡರು. ಮಹಿಳೆಯವರಿಗೆ ಮಾಡಿದ ಅವಮಾನವಿದು. ಹಾದಿ ರಂಪ ಮಾಡಿಕೊಂಡ ಕಾಂಗ್ರೆಸ್ ದಯಾನೀಯ ಸ್ಥಿತಿಯಲ್ಲಿದೆ' ಎಂದು ಹೇಳಿದರು.

ಗೊಂದಲಕ್ಕೆ ತೆರೆ ಎಳೆಯಲಾಗಿದೆ
ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಜೊತೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು, 'ವರಿಷ್ಠರ ಸಲಹೆಯಂತೆ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಅವಿರೋಧ ಆಯ್ಕೆಗೆ ಇಬ್ಬರು ನಾಯಕರ ಸಹಮತವಿದೆ' ಎಂದು ಹೇಳಿದರು.
'ಬೆಳಗಾವಿ ಕಾಂಗ್ರೆಸ್‌ನಲ್ಲಿ ಯಾವುದೇ ಗುಂಪು ಇಲ್ಲ. ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡಲಿದ್ದಾರೆ. ಈ ವಿಚಾರ ಸಮ್ಮಿಶ್ರ ಸರ್ಕಾರದ ಮೇಲೆ ಪ್ರಭಾವ ಬೀರುವುದಿಲ್ಲ. ಸರ್ಕಾರ ಸುಭದ್ರವಾಗಿ ಇರಲಿದೆ' ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.

ಭಗವಂತ ನೋಡಿಕೊಳ್ಳುತ್ತಾನೆ
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, 'ನಾನು ವೈಯಕ್ತಿಕವಾಗಿ ಯಾವುದೇ ಹೇಳಿಕೆ ನೀಡುವುದಿಲ್ಲ. ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ನಮ್ಮ ಸಹಮತವಿದೆ. ನಾನು ತಪ್ಪು ಮಾಡಿದ್ದರೆ ಭಗವಂತ ನೋಡಿಕೊಳ್ಳುತ್ತಾನೆ' ಎಂದು ಹೇಳಿದರು.

ಸುಲಭವಾಗಿ ಸೋಲೊಪ್ಪಿದರೆ ಜಾರಕಿಹೊಳಿ?
ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಅಷ್ಟು ಸುಲಭವಾಗಿ ಸೋಲೊಪ್ಪಿದರೆ?. ಖಂಡಿತ ಇಲ್ಲ, ರಾಜ್ಯ ರಾಜಕೀಯದ ಪ್ರಭಾವಿ ಕುಟುಂಬ ಜಾರಕಿಹೊಳಿ. ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಕುಟುಂಬದ ಒಬ್ಬರು ಸಚಿವರಾಗಿರುತ್ತಾರೆ. ಸಿದ್ದರಾಮಯ್ಯ ಸರ್ಕಾರವಿದ್ದಾಗ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಅವರು ಸಚಿವರಾಗಿದ್ದರು.
ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಅವರು ನಗುಮೊಗದಿಂದ ವರಿಷ್ಠರ ಸಂಧಾನ ಸೂತ್ರ ಒಪ್ಪಿದ್ದಾರೆ. ಆದರೆ, ಇವರ ಮುಂದಿನ ನಡೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications