ಸಂಜಯ ಪಾಟೀಲ್ ವಿವಾದಾದ್ಮಕ ಹೇಳಿಕೆ ಬಗ್ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದೇನು?
ಬೆಳಗಾವಿ, ಏಪ್ರಿಲ್, 14: ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹಾಗೆಯೇ ಇದೀಗ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಸಂಜಯ ಪಾಟೀಲ ನೀಡಿರುವ ಹೇಳಿಕೆಯೊಂದು ಇದೀಗ ಭಾರೀ ಸದ್ದು ಮಾಡುತ್ತಿದ್ದು, ಈ ಬಗ್ಗೆ ಜಗದೀಶ್ ಶೆಟ್ಟರ್ ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಮಾಜಿ ಶಾಸಕ ಸಂಜಯ್ ಪಾಟೀಲ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ನಾನು ಮಾಜಿ ಶಾಸಕ ಸಂಜಯ್ ಪಾಟೀಲ ಜೊತೆಗೆ ಮಾತನಾಡಿರುವೆ. ಯಾವ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆಯೂ ಚರ್ಚೆ ಮಾಡಿರುವೆ. ಇನ್ನು ನರೇಂದ್ರ ಮೋದಿ ಬಗ್ಗೆ, ಬಿಜೆಪಿ ನಾಯಕರ ಬಗ್ಗೆ ಕಾಂಗ್ರೆಸ್‌ನವರು ಕೀಳಾಗಿ ಮಾತನಾಡಿದ್ದಾರೆ. ಏಕವಚನದಲ್ಲಿ ಸಾಕಷ್ಟು ಸಲ ನಮ್ಮ ನಾಯಕರ ಬಗ್ಗೆ ಮಾತನಾಡಿದ್ದು ಇದೆ. ಹೀಗಾಗಿ ಸಂಜಯ್ ಪಾಟೀಲ ಅವರೇ ಈ ಬಗ್ಗೆ ಉತ್ತರ ನೀಡುತ್ತಾರೆ ಎಂದರು.

ಸಂಜಯ್ ಪಾಟೀಲ ಆಡಿರುವ ಮಾತುಗಳು ಬಿಜೆಪಿ ಅಜೆಂಡಾ ಅಲ್ಲವೇ ಅಲ್ಲ. ಸಂಜಯ ಪಾಟೀಲ್ ಜೊತೆಗೆ ಮತ್ತೊಮ್ಮೆ ಸಮಾಲೋಚನೆ ಮಾಡುತ್ತೇನೆ. ನಾನೂ ವೇದಿಕೆ ಮೇಲೆ ಇದ್ದೆ, ಆದರೆ ಸಂಜಯ ಪಾಟೀಲ ಇದಕ್ಕೆ ಸ್ಪಷ್ಟೀಕರಣ ನೀಡಿದ್ರೆ ಉತ್ತಮವಾಗಿದೆ. ನಾವು ಎಲ್ಲ ಕಾರ್ಯಕ್ರಮಗಳಲ್ಲೂ ವೇದಿಕೆ ಮೇಲೆ ಇರುತ್ತೇವೆ, ಎಲ್ಲರ ಭಾಷಣ ಗ್ರಹಿಸಿಕೊಳ್ಳಲು ಸಾಧ್ಯವಾಗಲ್ಲ. ಹೀಗಾಗಿ ಸಂಜಯ ಪಾಟೀಲ ಜೊತೆಗೆ ಸಮಾಲೋಚನೆ ಮಾಡಿ ನಿರ್ಧಾರಕ್ಕೆ ಬರುತ್ತೇನೆ ಎಂದರು.
ಸಂಜಯ ಪಾಟೀಲ ಹೇಳಿಕೆ ಲಿಂಗಾಯತ ಸಮಾಜಕ್ಕೆ ಮಾಡಿದ ಅನ್ಯಾಯ ಎಂಬ ಹೆಬ್ಬಾಳ್ಕರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲ ವಿಚಾರಗಳನ್ನು ಸಮಾಜಕ್ಕೆ, ಸಮುದಾಯಕ್ಕೆ ಏಕೆ ತೆಗೆದುಕೊಂಡು ಹೋಗುತ್ತಿದ್ದಾರೆಯೋ ನನಗೆ ತಿಳಿಯುತ್ತಿಲ್ಲ. ಲಿಂಗಾಯತ ಸಮಾಜಕ್ಕೆ, ಪಾಟೀಲ ಹೇಳಿಕೆಗೆ ಏನು ಸಂಬಂಧ ಇದೆ. ಹೇಳಿಕೆ ತಪ್ಪಾಗಿದ್ರೆ ತಪ್ಪು ಎಂದು ಹೇಳೋಣ, ಸಮುದಾಯಕ್ಕೆ ಹೋಗಿ ಮುಟ್ಟಿಸುವುದು ಸರಿಯಲ್ಲ ಎಂದರು.
ಗೃಹಲಕ್ಷ್ಮಿ ಯೋಜನೆಯ ಹಣದಿಂದ ಹಳ್ಳಿಯ ಹೆಣ್ಣುಮಕ್ಕಳು ಹಾದಿ ತಪ್ಪುತ್ತಿದ್ದಾರೆ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಚ್‌ಡಿಕೆ ಹೇಳಿಕೆಯನ್ನು ನಾನು ನೋಡಿಲ್ಲ, ಕೇಳಿಲ್ಲ. ಇದಕ್ಕೆ ಕುಮಾರಸ್ವಾಮಿ ಅವರೇ ಉತ್ತರ ನೀಡುತ್ತಾರೆ ಎಂದು ಶೆಟ್ಟರ್ ಹೇಳಿದರು.
10 ವರ್ಷಗಳ ಕಾಲ ಮೋದಿ ಸರ್ಕಾರ ಜನ ಪರ ಯೋಜನೆ ಜಾರಿಗೊಳಿಸಿದೆ. ಆ ಮೂಲಕ ಎಲ್ಲ ವರ್ಗದ ಜನರ ಪ್ರೀತಿಗೆ ನರೇಂದ್ರ ಮೋದಿ ಅವರು ಪಾತ್ರರಾಗಿದ್ದಾರೆ. ಎಲ್ಲಾ ವರ್ಗಗಳ ಜನರನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ರಚಿಸಲಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಎಲ್ಲಾ ಭರವಸೆಗಳನ್ನು ಕೂಡ ನಮ್ಮ ಸರ್ಕಾರ ಈಡೇರಿಸಿದೆ. ಈ ಚುನಾವಣೆಗಾಗಿ ಬಿಡುಗಡೆಗೊಂಡಿರುವ ಪ್ರಣಾಳಿಕೆಯನ್ನು ನಾನು ಸ್ವಾಗತಿಸುವೆ ಎಂದರು.











Click it and Unblock the Notifications