ವಿಷ ಬೆರೆತ ಕಾಳು ತಿಂದು ಯೋಧನ ಇಬ್ಬರು ಮಕ್ಕಳ ಸಾವು
ಚಿಕ್ಕೋಡಿ, ಅಕ್ಟೋಬರ್ 30: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧನ ಮಕ್ಕಳಿಬ್ಬರು ವಿಷಾಹಾರ ಸೇವನೆಯಿಂದ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ.
ಹನುಮಂತ ಕುಂಬಾರ ಎಂಬ ಯೋಧನ ಇಬ್ಬರು ಮಕ್ಕಳಾದ ಐಶ್ವರ್ಯ (4) ಹಾಗೂ ಜಯಶ್ರೀ (6) ಸಾವನ್ನಪ್ಪಿದ್ದಾರೆ. ಪತ್ನಿ ಕವಿತಾ ತೀವ್ರ ಅಸ್ವಸ್ಥಗೊಂಡಿದ್ದಾರೆ. ಗುವಾಹಟಿಯಲ್ಲಿ ಹನುಮಂತ ಕುಂಬಾರ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದು, ಊರಿನಲ್ಲಿ ಅವರ ಪತ್ನಿ ಕವಿತಾ ಹಾಗೂ ಇಬ್ಬರು ಮಕ್ಕಳು ನೆಲೆಸಿದ್ದಾರೆ.

ಹನುಮಂತನ ಸಹೋದರ ಲಗಮಣ್ಣ ವ್ಯಾಪಾರ ಮಾಡಲು ಮನೆಯಲ್ಲಿ ಕಾಳನ್ನು ತಂದಿಟ್ಟಿದ್ದು, ಅವು ಕೆಡದಂತೆ ಇಡಲು ಅದರ ಸುತ್ತ ಕ್ರಿಮಿನಾಶಕ ಸಿಂಪಡಿಸಿದ್ದರು ಎನ್ನಲಾಗಿದೆ. ಅದರ ಅಂಶ ಈ ಮಕ್ಕಳ ಹಾಗೂ ಕವಿತಾ ದೇಹವನ್ನು ಸೇರಿರುವ ಶಂಕೆ ವ್ಯಕ್ತಗೊಂಡಿದೆ. ರಾತ್ರಿ ಊಟ ಮಾಡಿ ಈ ಮೂರ್ವರೂ ಮಲಗಿದ್ದು, ಮಕ್ಕಳು ಬೆಳಗಾಗುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಕವಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications