Belagavi: 06 ಕಿ.ಮೀ. ಶವ ಹೊತ್ತುಕೊಂಡೆ ಸಾಗಿದ ಗ್ರಾಮಸ್ಥರು!, ಇದೆಂಥಾ ದುಸ್ಥಿತಿ..
ಬೆಳಗಾವಿ, ಜುಲೈ 30: ಕೋವಿಡ್ ವೇಳೆ ಶವ ಸಾಗಿಸಲು ಪರದಾಡಿದ್ದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಎಲ್ಲವು ಸರಿ ಇಂದಿನ ದಿನಮಾನಗಳಲ್ಲಿ ಸಹ ರಾಜ್ಯದ ದೊಡ್ಡ ಜಿಲ್ಲೆಯ ತಾಲೂಕೊಂದರ ಗ್ರಾಮದಲ್ಲಿ ಶವವೊಂದನ್ನು ಸಾಗಿಸಿದ ದೃಶ್ಯ ಮನಕಲುಕುವಂತೆ ಮಾಡಿದೆ.
ಹೌದು, ಈ ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ. ಒಂದು ಕಡೆ ಅಪಾರ ಮಳೆಯಿಂದ ಪ್ರವಾಹ, ನೆರೆಯಂತೆ ಸಮಸ್ಯೆ ಉಂಟಾಗುತ್ತಿದೆ. ಇತ್ತ ಸಾರಿಗೆ ಸಂಪರ್ಕವೇ ಇಲ್ಲದೇ ಜಿಲ್ಲೆ ಖಾನಾಪುರ ಕಗ್ಗಾಡಿನ ನಡುವೆ ಅನಾರೋಗ್ಯದಿಂದ ಅಸುನೀಗಿದ್ದ ವ್ಯಕ್ತಿಯೊಬ್ಬರ ಶವ ಹೊತ್ತು ಅಲುಗಾಡುವ ಜೋಲಿ ಸೇತುವೆ ಮೇಲೆ ಸಾಗಿದ ಅಪಾಯಕಾರಿ ದೃಶ್ಯ ಎಂಥವರ ಹೃದಯವನ್ನು ಹಿಂಡುವಂತೆ ಮಾಡಿದೆ.

ಭೀಮಘಡ ಅಭಯಾರಣ್ಯದ ಕೃಷ್ಣಾಪುರ ಗ್ರಾಮದ ಸದಾನಂದ ನಾಯಕ ಅವರು ಮೃತಪಟ್ಟಿದ್ದರು. ಅವರ ಶವವನ್ನು ವಾಳಪೈ ಗ್ರಾಮದಿಂದ ಸುಮಾರು 06ಕಿಮೀ. ಹೊತ್ತು ಸಾಗಿ ಬಂಡೂರಿ ನಾಲಾಕ್ಕೆ ಅಡ್ಡವಾಗಿ ನಿರ್ಮಿಸಲಾದ ತೂಗುಸೇತುವೆ ಮೇಲೆ ಗ್ರಾಮಸ್ಥರು ದಾಟಿ ನಂತರ ಶವಸಂಸ್ಕಾರ ನಡೆಸಿ ಗಮನ ಸೆಳೆದಿದ್ದಾರೆ.
ಆಗಿದ್ದೇನು? ಪ್ರಕರಣದ ಹಿನ್ನೆಲೆ ಮಾಹಿತಿ
ಒಂದು ವಾರದ ಹಿಂದೆ ಈ ಸದಾನಂದ ನಾಯಕ ಅವರು ತುತ್ತಾಗಿದ್ದಾರೆ. ಈ ಹಿಂದೆ ಅನಾರೋಗ್ಯಕ್ಕೆ ತುತ್ತಾದ ಸಮೀಪದ ಅಮಗಾಂವ ಗ್ರಾಮದ ಯುವತಿಯೊಬ್ಬರನ್ನು ಪ್ರಯಾಸದಿಂದ ಹೊತ್ತು ಸಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳ ನಂತರ ಚಿಕಿತ್ಸೆ ಫಲಿಸದೇ ಅವರು ಸಹ ಅಸುನೀಗಿದ್ದರು. ಇದಾದ ಬಳಿಕ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಮಾತನಾಡಿಕೊಳ್ಳುತ್ತಿರುವಾಗಲೇ, ಮತ್ತೊಂದು ಘಟನೆ ನಡೆದಿದೆ.
ಕಾಡಿನ ಮಧ್ಯೆ ಸಾರಿಗೆ ಸೌಲಭ್ಯ ಒದಗಿಸುವ ಸವಾಲು?
ದಟ್ಟ ಕಾಡಿನಿಂದ ಈ ಗ್ರಾಮಗಳು ಆವೃತವಾಗಿವೆ. ಭೀಮಘಡ ವನ್ಯಜೀವಿ ಅಭಯಾರಣ್ಯ ಊರುಗಳಿಗೆ ರಸ್ತೆ, ಸೇತುವೆ ಇಲ್ಲವೇ ಇತರ ನಾಗರಿಕ ಸೌಲಭ್ಯ ಒದಗಿಸಲು ಕಾನೂನಿನಲ್ಲಿ ಅವಕಾಶವಿಲ್ಲದಿರುವುದೇ ಈ ಕಾಡುವಾಸಿಗಳ ಸಮಸ್ಯೆಗೆ ಕಾರಣವಾಗಿದೆ. ಮಳೆಗಾಲದಲ್ಲಂತೂ ಇವರ ಸ್ಥಿತಿ ನರಕ ಯಾತನೆಗೆ ಸಮವಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಬಳಿ ಸಹಾಯಕ್ಕೆ ಮನವಿ ಮಾಡಿದರು ಪ್ರಯೋಜನವಿಲ್ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಈ ಕಾಡಿನಲ್ಲಿ ಎಷ್ಟು ಗ್ರಾಮಗಳಿವೆ?
ಈ ದಟ್ಟಾರಣ್ಯ ವ್ಯಾಪ್ತಿಯಲ್ಲಿಮಾನ, ಕೊಂಗಳಾ, ಸಡಾ, ಮೆಂಡಿಲ, ತಳೆವಾಡಿ, ಕೃಷ್ಣಾಪುರ, ಕೇಳಿಲ್, ಭೀಮಘಡ, ಗೆಸ್ಟೊಲಿ, ಜಾಮಗಾವ, ಅಮಗಾವ, ಗವಾಳಿ, ಮುಗವಡೆ, ಚಾಪೋಲಿ, ಹುಳಂದ, ಚಿಗುಳೆ, ಪಾರವಾಡ, ಚುಬುಳೆ, ದೇಗಾಂವ ಇವು ಬಹಳ ಯಾತನೆಗೆ ಒಳಗಾಗುವ ಗ್ರಾಮಗಳಾಗಿವೆ. ಇವುಗಳ ಜೊತೆಗೆ ಇನ್ನೂ ಅನೇಕ ಗ್ರಾಮಗಳಿವೆ.
ತತಕ್ಷಣದ ಪರಿಹಾರವಾಗಿ ಈ ಊರುಗಳಿಗೆ ಹಾಲಿನ ಪುಡಿ, ಮೆಡಿಕಲ್ ಕಿಟ್, ಕೆರೊಸಿನ್ ಹಾಗೂ ಇತರ ಅಗತ್ಯ ವಸ್ತುಗಳ ಪೂರೈಕೆಗೆ ಜಿಲ್ಲಾಡಳಿತ ಮುಂದಾಗಿದೆ. ಘಟನೆ ಬಗ್ಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ವಿಷಾದ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಪರಿಹರಿಸಲು ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.












Click it and Unblock the Notifications