ಬೆಳಗಾವಿ ಜಿಲ್ಲೆಯ ಈ ಪ್ರವಾಸಿ ತಾಣಗಳಿಗೆ ಪ್ರವಾಸಿರಿಗೆ ತಾತ್ಕಾಲಿಕ ನಿರ್ಬಂಧ-ಕಾರಣ ಏನು?
ಬೆಳಗಾವಿ, ಜುಲೈ, 04: ಇದೀಗ ರಾಜ್ಯದ ಹಲವೆಡೆ ಭಾರೀ ಮಳೆಯಿಂದ ಕೆರೆ-ಕಟ್ಟೆಗಳು ತಂಬಿ ಹರಿಯುತ್ತಿವೆ. ಮತ್ತೊಂದೆಡೆ ಪಶ್ಚಿಮಘಟ್ಟಗಳ ಪ್ರದೇಶದಲ್ಲಿ ಧಾರಕಾರ ಮಳೆಯಿಂದಾಗಿ ಜಲಪಾತಗಳು ಧುಮ್ಮಿಕ್ಕುತ್ತಿದ್ದು, ಈ ಸುಂದರ ದೃಶ್ಯಗಳನ್ನು ನೋಡಲು ಪ್ರವಾಸಿಗೆ ದಂಡೇ ಹರಿದುಬರುತ್ತಿದೆ. ಹಾಗೆಯೇ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಲಪ್ರಭಾ ಹಾಗೂ ಪಾಂಡ್ರೆ ನದಿಗೆ ಜೀವಕಳೆ ಬಂದಂತಾಗಿದೆ.
ಜಾಂಬೋಟಿ, ಕಣಕುಂಬಿ, ಖಾನಾಪುರದಲ್ಲಿ ಭಾರೀ ಮಳೆಯಿಂದ ಮಲಪ್ರಭಾ ನದಿ ರಭಸವಾಗಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆ ಮುಜಾಗ್ರತಾ ಕ್ರಮವಾಗಿ ಖಾನಾಪುರ ತಾಲೂಕಿನ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ತಾತ್ಕಾಲಿಕ ನಿರ್ಬಂಧ ಹೇರಿದೆ.

ಅದರಲ್ಲೂ ಖಾನಾಪುರದ ಜಲಪಾತಗಳು ಮಳೆಗಾಲದಲ್ಲಿ ಪ್ರವಾಸಿಗರ ಹಾಟ್ ಸ್ಪಾಟ್ ಆಗಿದ್ದು, ಇಲ್ಲಿ ಪ್ರತಿನಿತ್ಯವು ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ಇನ್ನು ಇದೀಗ ಇಲ್ಲಿನ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿನ ಫಾಲ್ಸ್ ವೀಕ್ಷಣೆಗೆ ಬೆಳಗಾವಿ ಜಿಲ್ಲಾಡಳಿತ ತಾತ್ಕಾಲಿಕ ನಿರ್ಬಂಧ ಹೇರಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನೆತಾಳು ಗ್ರಾಮದಲ್ಲಿ ಭಾರಿ ಮಳೆಯಾಗುತ್ತಿದ್ದು, ಪರಿಣಾಮ ಹೊನ್ನೆತಾಳು ಗ್ರಾಮದ ಯಕ್ಷಗಾನ ಕಲಾವಿದ ನಂದನ್ ಶೆಟ್ಟಿ ಅವರ ಮನೆ ಕುಸಿದು ಬಿದ್ದಿದೆ. ನಂದನ ಶೆಟ್ಟಿ ಮಂದಾರ್ತಿ ಮೇಳದಲ್ಲಿ ಯಕ್ಷಗಾನ ಕಲಾವಿದರಾಗಿದ್ದಾರೆ. ಇನ್ನು ಮನೆ ಕುಸಿಯುವ ವೇಳೆ ಅದೃಷ್ಟ ವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಈ ಕುಟುಂಬವು ಪರಿಹಾರದ ನಿರೀಕ್ಷೆಯಲ್ಲಿದೆ.
ಮಹಾರಾಷ್ಟ್ರ ಫಾಲ್ಸ್ ದುರಂತದ ಬೆನ್ನೆಲ್ಲೇ ಪ್ರವಾಸಿ ತಾಣಗಳ ಬಗ್ಗೆ ಕೊಡಗು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಪ್ರವಾಸಿಗರು ಜಲಪಾತಗಳು, ನದಿಗಳಿಗೆ ಇಳಿಯದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ನೀರಿನಲ್ಲಿ ಇಳಿದು ಕ್ರೀಡೆ, ಫೋಟೋ ತೆಗೆಯುವ ದುಸ್ಸಾಹಕ್ಕೆ ಕಡಿವಾಣ ಹಾಕಲಾಗಿದೆ.
ಇದೀಗ ಸುರಿಯುತ್ತಿರುವ ಭಾರೀ ಮಳೆ ಅವಾಂತರಗಳನ್ನೇ ಸೃಷ್ಟಿಸಿದೆ. ಈ ಹಿನ್ನೆಲೆ ಮುಂಜಾಜ್ರತಾ ಕ್ರಮವಾಗಿ ಈ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಇನ್ನು ಈ ಆದೇಶವನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟರಾಜ ಮಾಹಿತಿ ನೀಡಿದ್ದಾರೆ.
ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಹೊಳೆ-ಹಳ್ಳಗಳು ತುಂಬಿ ಹರಿಯುತ್ತಿವೆ. ಜಲಪಾತಗಳು ಧುಮ್ಮಿಕ್ಕುತ್ತಿವೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಜಲಪಾತಗಳತ್ತ ಹೋಗದಂತೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಬೆಟ್ಟಗುಡ್ಡಗಳಿಗೆ ಟ್ರೆಕ್ಕಿಂಗ್ ಹೋಗುವವರಿಗೂ ಮುಂದಿನ ಸೂಚನೆ ಸಿಗುವವರೆಗೂ ಮುಂದುವರೆಯದಂತೆ ಸೂಚನೆ ನೀಡಲಾಗಿದೆ.
ಹಾಗೆಯೇ ಯಲ್ಲಾಪುರ ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ. ಇನ್ನೂ ಮುಂಜಾಗ್ರತಾ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯ ಹಲವು ಜಲಪಾತಗಳಿಗೆ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ.












Click it and Unblock the Notifications