ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬ್ಬು ಬೆಳೆಗಾರ ರೈತನ ಆತ್ಮಹತ್ಯೆಯ ಸುತ್ತಮುತ್ತ

By ಒನ್ಇಂಡಿಯಾ ಕನ್ನಡ ಪ್ರತಿನಿಧಿಯಿಂದ
|
Google Oneindia Kannada News

ಬೆಳಗಾವಿ, ನ. 28 : ನಮ್ಮ ರಾಜ್ಯದಲ್ಲಿ ವೋಲ್ವೊ ಬಸ್ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳಬೇಕಾದರೆ 40 ಜನ ಸುಟ್ಟುಹೋಗಬೇಕಾಗುತ್ತದೆ, ಎಟಿಎಂನಲ್ಲಿ ಗ್ರಾಹಕರಿಗೆ ಸೂಕ್ತವಾದ ಭದ್ರತೆ ಒದಗಿಸಬೇಕಾದರೆ ಓರ್ವ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಆಗಬೇಕಾಗುತ್ತದೆ, ಕಬ್ಬಿಗೆ ಬೆಂಬಲ ಬೆಲೆ ದೊರಕಿಸಿಕೊಡಬೇಕಾದರೆ ಒಬ್ಬ ಬಡ ರೈತ ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿದೆ.

ಬೆಂಗಳೂರಿನಲ್ಲಿ ನಾಯಂಡಹಳ್ಳಿಯಲ್ಲಿ ಎರ್ರಾಬಿರ್ರಿಯಾಗಿ ಸಾಗುವ ಸಂಚಾರವನ್ನು ಹದ್ದುಬಸ್ತಿಗೆ ಪೊಲೀಸರು ತರಬೇಕಾದರೆ ಒಂದೇ ಕುಟುಂಬದ ನಾಲ್ವರ ಹೆಣ ಬೀಳಬೇಕಾಗುತ್ತದೆ. ಇದು ವಿಪರ್ಯಾಸ, ಬೇಸರದ ಸಂಗತಿಯಾದರೂ ಸತ್ಯವಾದದ್ದು. ಬೆಳಗಾವಿಯಲ್ಲಿ ರೈತರ ಪರ ಸರಕಾರ ಎಚ್ಚೆತ್ತುಕೊಳ್ಳಬೇಕಾದರೆ ವಿಠಲ ಅರಭಾವಿ ಎಂಬ ರೈತನ ಹೆಣ ಉರುಳಬೇಕಾಯಿತು. [ರೈತನ ಆತ್ಮಹತ್ಯೆ]

ರೈತನ ಆತ್ಮಹತ್ಯೆಯ ಘಟನೆ, ಸಮಸ್ತ ರೈತರ ಬಡತನ ಮತ್ತು ಸಕ್ಕರೆ ಉದ್ಯಮಿಗಳ ಭಂಡತನ, ಸರಕಾರದ ಷಂಡತನ ಮಾತ್ರವಲ್ಲ ಹಲವಾರು ರಾಜಕೀಯ ಹುಳುಕುಗಳನ್ನು, ರಾಜಕಾರಣಿಗಳ ಕೊಳಕುಗಳನ್ನು ಹೊರಹಾಕುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಿಂದೆ ನಡೆದ ರೈತರ ಮೇಲಿನ ಗೋಲಿಬಾರ್ ವಿಷಯವನ್ನು ಹಿಡಿದುಕೊಂಡು ಬಾಯಿಗೆ ಬಂದಂತೆ ಬೈದಾಡಿಕೊಳ್ಳುವ ಮಟ್ಟಿಗೆ ಈ ಪ್ರಕರಣ ವಿಪರೀತಕ್ಕೆ ಹೋಗಿದೆ. [ಸಿದ್ದು, ಬಿಎಸ್ವೈ ಮಾತಿನ ಕದನ]

ಅಂತಿಮವಾಗಿ ಕಬ್ಬು, ಹಣ, ಕುಟುಂಬ, ಮರ್ಯಾದೆ ಎಲ್ಲವನ್ನೂ ಕಳೆದುಕೊಂಡ ರೈತನಿಗೆ ಮತ್ತು ಆತನ ಕುಟುಂಬಕ್ಕೆ ನ್ಯಾಯ ದೊರಕಿತಾ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ದೊರೆಯುವುದೇ ಇಲ್ಲ. ರೈತರ ಹೋರಾಟಗಳು ಮುಂದುವರಿಯುತ್ತಲೇ ಇರುತ್ತವೆ, ರಾಜಕೀಯ ಪಕ್ಷಗಳು ರಾಜಕೀಯ ಮಾಡುತ್ತಲೇ ಇರುತ್ತಾರೆ, ಮತ್ತೊಂದು ರೈತನ ಆತ್ಮಾಹುತಿ ಆಗುವವರೆಗೆ. ಆದರೆ, ಹಾಗಾಗದಿರಲಿ.

ತವರೂರಲ್ಲಿ ಅಂತ್ಯ ಸಂಸ್ಕಾರ : ಕೀಟನಾಶಕ ಸೇವಿಸಿ (ಕೀಟನಾಶಕ ಕುಡಿದಾಗಿನ ಚಿತ್ರಗಳು ಕೆಳಗಿವೆ) ಬುಧವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡ 50 ವರ್ಷದ ರೈತ ವಿಠಲ ಅರಭಾವಿಯವರ ಅಂತ್ಯ ಸಂಸ್ಕಾರವನ್ನು ಅವರ ತವರು ನೆಲ ಅರಭಾವಿಯಲ್ಲಿ, ಸಾವಿರಾರು ರೈತರ ಪ್ರತಿಭಟನೆ, ಸರಕಾರದ ವಿರುದ್ಧದ ಧಿಕ್ಕಾರಗಳ ಉದ್ಘೋಷಗಳ ನಡುವೆ ಗುರುವಾರ ಬೆಳಿಗ್ಗೆ ಮಾಡಲಾಯಿತು. ಕಬ್ಬಿಗೆ ಬೆಂಬಲ ಬೆಲೆ ಘೋಷಿಸಿದ ಹಿನ್ನೆಲೆಯಲ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. [ಬೆಂಬಲ ಬೆಲೆ ಘೋಷಣೆ]

ರೈತನ ಹಿರಿಯ ಮಗ ಭೀಮಪ್ಪ ಅಂತ್ಯ ಸಂಸ್ಕಾರದ ವಿಧಿ ನೆರವೇರಿಸಿದರು. ಮತ್ತೊಬ್ಬ ಮಗ ರಾಘವೇಂದ್ರ, ಮದುವೆಯಾಗಿರುವ ಮೂವರು ಹೆಣ್ಣುಮಕ್ಕಳು ಮತ್ತು ಇಬ್ಬರು ಪತ್ನಿಯರು ಈ ಸಂದರ್ಭದಲ್ಲಿ ಹಾಜರಿದ್ದರು. 'ಶಾದಿ ಭಾಗ್ಯ' ಬಿಟ್ಟು ರೈತರ ಪರ ದಿಢೀರನೆ ದನಿ ಎತ್ತರಿಸಿರುವ ಯಡಿಯೂರಪ್ಪ ಅವರು ಪುಷ್ಪ ನಮನ ಸಲ್ಲಿಸಿದರು. ಸರಕಾರದಿಂದ ಮೃತರ ಕುಟುಂಬಕ್ಕೆ 10 ಲಕ್ಷ ರು. ಪರಿಹಾರ ಘೋಷಿಸಲಾಗಿದ್ದರೆ, ಯಡಿಯೂರಪ್ಪ ರೈತನ ಇಬ್ಬರು ಪತ್ನಿಯರಿಗೆ ತಲಾ ಎರಡು ಲಕ್ಷ ರು. ನೀಡುವುದಾಗಿ ವಾಗ್ದಾನ ನೀಡಿದ್ದಾರೆ.

ರೈತ ಸತ್ತದ್ದು ಹೇಗೆ? : ರಾಷ್ಟ್ರೀಯ ಹೆದ್ದಾರಿ 4ರ ಒಂದು ಬದಿಯಲ್ಲಿ ಸುವರ್ಣಸೌಧ ತಲೆಯೆತ್ತಿ ನಿಂತಿದ್ದರೆ, ಮತ್ತೊಂದು ಬದಿಯಲ್ಲಿ ಬೃಹತ್ ಬಯಲು. ಆ ಬಯಲಲ್ಲೇ ಸಾವಿರಾರು ರೈತರು ಕಬ್ಬಿಗೆ ಬೆಂಬಲ ಬೆಲೆ ಆಗ್ರಹಿಸಿ ಪ್ರತಿಭಟನೆಗಿಳಿದಿದ್ದಾರೆ. ಅಲ್ಲಿ ಹಾಕಿದ್ದ ಪೆಂಡಾಲಿನ ಹಿಂಬದಿಯಲ್ಲಿ ರೈತ ವಿಠಲ ಅರಭಾವಿ, ಅತಿ ವಿಷಕಾರಿ ಎಂದು ಹೇಳಲಾಗುವ ಹತ್ತಿಗೆ ಸಿಂಪಡಿಸುವ ಕೀಟನಾಶಕವನ್ನು ಸೇವಿಸಿದ್ದಾನೆ.

ಆತನಿಗೆ ಕೂಡಲೆ ಸುತ್ತಲಿನ ರೈತರು ನೀರು ಕುಡಿಸಿದ್ದಾರೆ. ತಪ್ಪು ಆದದ್ದು ಇಲ್ಲಿಯೆ. ವೈದ್ಯರು ಹೇಳುವ ಪ್ರಕಾರ, ಈ ಕಾರ್ಕೋಟಕ ವಿಷ ಸೇವಿಸಿದ ವ್ಯಕ್ತಿಗೆ ನೀರು ಕುಡಿಸಬಾರದು. ಇದನ್ನು ಅರಿಯದ ರೈತರು ನೀರು ಕುಡಿಸಿ ಹತ್ತಿರದಲ್ಲಿರುವ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರನ್ನು ಕೆಎಲ್ಇ ಆಸ್ಪತ್ರೆಗೆ ಕರೆದೊಯ್ಯಬೇಕೆಂದು ವೈದ್ಯರು ಹೇಳಿದ್ದಾರೆ. ಸರಕಾರಿ ಆಂಬುಲನ್ಸ್‌ನ ತುಕ್ಕುಹಿಡಿದ ಬಾಗಿಲು ತೆರೆಯಲು 6 ನಿಮಿಷ ತಗುಲಿದೆ. ನಂತರ 6 ಕಿ.ಮೀ. ದೂರದಲ್ಲಿರುವ ಆಸ್ಪತ್ರೆಗೆ ಸಾಗಿಸುವ ಹಂತದಲ್ಲಿ ರೈತ ಪ್ರಾಣ ಬಿಟ್ಟಿದ್ದಾನೆ.

ಅಲ್ಲಿಗೆ, ಕಬ್ಬು ಬೆಳೆದು ಹಣಸಿಗದೆ ನೆಮ್ಮದಿ ಕಳೆದುಕೊಳ್ಳುತ್ತಿರುವ, ಕಳಪೆ ಬೀಜದಿಂದ ಹತ್ತಿ ಬೆಳೆದು ನಷ್ಟ ಅನುಭವಿಸುತ್ತಿರುವ, ಬೆಳೆ ವಿಮೆ ಇಲ್ಲದೆ ಕಂಗಾಲಾಗುತ್ತಿರುವ ಲಕ್ಷಾಂತರ ರೈತರ ಹೋರಾಟದ ದನಿಯಾದ, ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕು, ಕಂಕನವಾಡಿ ಗ್ರಾಮದ ರೈತ ವಿಠಲ ಅರಭಾವಿ ಬದುಕು ದುರಂತದಲ್ಲಿ ಕೊನೆಗೊಂಡಿದೆ. ಈ ದುರಂತವನ್ನು ಬಂಡವಾಳ ಮಾಡಿಕೊಂಡು ಪುಢಾರಿಗಳು ರಾಜಕೀಯದ ಆಟವಾಡದಿರಲಿ, ಮೊಸಳೆ ಕಣ್ಣೀರು ಸುರಿಸದಿರಲಿ.

ಬಿಜೆಪಿಯಿಂದ ಕಪ್ಪುಪಟ್ಟಿ ಪ್ರತಿಭಟನೆ : ರೈತನ ಆತ್ಮಹತ್ಯೆಯನ್ನೇ ಅಸ್ತ್ರ ಮಾಡಿಕೊಂಡಿರುವ ಭಾರತೀಯ ಜನತಾ ಪಕ್ಷದ ಶಾಸಕರು ಆಡಳಿತ ಪಕ್ಷದ ವಿರುದ್ಧ ಸಿಡಿದೆದ್ದಿದ್ದಾರೆ. ಕತ್ತಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಸರಕಾರವನ್ನು ತರಾಮರಿ ಝಾಡಿಸುತ್ತಿದ್ದಾರೆ. ಕಬ್ಬಿನ ಬೆಲೆಗೆ ಘೋಷಿಸಲಾಗಿರುವ ರು.2,500 (ಪ್ರತಿ ಟನ್) ಬೆಲೆಯನ್ನು ರು.3,000ಕ್ಕೆ ಏರಿಸುವವರೆಗೆ ಕಲಾಪ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಈ ವಿಷಯದಲ್ಲಿ ಅಷ್ಟು ಸದ್ದು ಮಾಡದ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು, ಈ ಬೆಲೆಯನ್ನು ಬೆಂಬಲಿಸುವುದೂ ಇಲ್ಲ, ಬಿಜೆಪಿಯಂತೆ ಪ್ರತಿಭಟಿಸುವುದೂ ಇಲ್ಲ ಎಂದು ತಟಸ್ಥ ನಿಲುವನ್ನು ತಳೆದಿದ್ದಾರೆ. (ಚಿತ್ರಗಳು : ಏಕನಾಥ, ಬೆಳಗಾವಿ)

ಇದ್ದಕ್ಕಿದ್ದಂತೆ ಕೀಟನಾಶಕ ಸೇವಿಸಿದ ರೈತ

ಇದ್ದಕ್ಕಿದ್ದಂತೆ ಕೀಟನಾಶಕ ಸೇವಿಸಿದ ರೈತ

ರೈತರು ಹಾಕಿದ್ದ ಪೆಂಡಾಲಿನಲ್ಲಿ ಮುಖಂಡರು ಭಾಷಣ ಮಾಡುತ್ತಿದ್ದ ಸಮಯದಲ್ಲಿ ರೈತ ವಿಠಲ ಅರಭಾವಿ ಪೆಂಡಾಲ್ ಹಿಂಬದಿಯಲ್ಲಿ ಕೀಟನಾಶಕ ಸೇವಿಸಿದ್ದಾನೆ.

ಅಸ್ವಸ್ಥನಾದ ವಿಠಲ ಅರಭಾವಿ

ಅಸ್ವಸ್ಥನಾದ ವಿಠಲ ಅರಭಾವಿ

ಕೀಟನಾಶಕ ಅಂತಿಂಥ ಕೀಟನಾಶಕವಲ್ಲ. ಇತರೆ ಕೀಟನಾಶಕಗಳಿಗೆ ಸಾಯದ ಹತ್ತಿ ಹಾಳುಗೆಡವುವ ಕೀಟ ಸಾಯಿಸಲು ಇದೇ ಕೀಟನಾಶಕ ಬಳಸುತ್ತಾರೆ. ಇದನ್ನು ಕುಡಿದ ತಕ್ಷಣವೇ ವಿಠಲ ವಿಲವಿಲ ಒದ್ದಾಡಲು ಆರಂಭಿಸಿದ್ದಾನೆ.

ವಿಷ ಸೇವನೆಯ ಅಗತ್ಯವಿತ್ತಾ?

ವಿಷ ಸೇವನೆಯ ಅಗತ್ಯವಿತ್ತಾ?

ಆತ್ಮಹತ್ಯೆ ಬೆದರಿಕೆ ಒಡ್ಡಿಯಾದರೂ ಕಬ್ಬಿಗೆ ಬೆಂಬಲ ಬೆಲೆ ದೊರಕಿಸಿಕೊಡಬೇಕು ಎಂದು ಮೊದಲೇ ನಿರ್ಧರಿಸಿದ್ದ ವಿಠಲನಿಗೆ ಈ ಯತ್ನ ಮುಳುವಾಯಿತು.

ಕೀಟನಾಶಕ ತೋರಿಸುತ್ತಿರುವ ವ್ಯಕ್ತಿ

ಕೀಟನಾಶಕ ತೋರಿಸುತ್ತಿರುವ ವ್ಯಕ್ತಿ

ಆತ ವಿಷ ಸೇವಿಸುತ್ತಲೇ ಸ್ಥಳದಲ್ಲಿ ಕೋಲಾಹಲವೆದ್ದಿದೆ. ನೀರು ಕುಡಿಸಿದರೆ ವಿಷದ ಪ್ರಭಾವ ತಗ್ಗೀತೆಂದು ಸುತ್ತಲಿನವರು ನೀರು ಕುಡಿಸಿಬಿಟ್ಟಿದ್ದಾರೆ.

ನೀರು ಕುಡಿಸಬಾರದಿತ್ತು ಅಂತಾರೆ ವೈದ್ಯರು

ನೀರು ಕುಡಿಸಬಾರದಿತ್ತು ಅಂತಾರೆ ವೈದ್ಯರು

ನೀರು ಕುಡಿಸಿದಾಕ್ಷಣ ವಿಠಲ ಮತ್ತಷ್ಟು ಅಸ್ವಸ್ಥನಾಗಿದ್ದಾನೆ. ತೀವ್ರ ನಿತ್ರಾಣನಾದ ರೈತನನ್ನು ಉಳಿದ ರೈತರು ಹಿಡಿದೆತ್ತಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ.

ಕೆಎಲ್ಇ ಆಸ್ಪತ್ರೆಗೆ ಸ್ಥಳಾಂತರ

ಕೆಎಲ್ಇ ಆಸ್ಪತ್ರೆಗೆ ಸ್ಥಳಾಂತರ

ಹತ್ತಿರ ಖಾಸಗಿ ಆಸ್ಪತ್ರೆಯ ವೈದ್ಯರು ರೈತನನ್ನು ಕೆಎಲ್ಇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಶಿಫಾರಸು ಮಾಡಿದ್ದಾರೆ.

ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು

ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು

ಕೆಎಲ್ಇ ಆಸ್ಪತ್ರೆ ಇದ್ದಿದ್ದು 6 ಕಿ.ಮೀ. ದೂರದಲ್ಲಿ. ಈ ನಡುವೆ ತುರ್ತು ಚಿಕಿತ್ಸೆ ನೀಡಲಾಗಿದ್ದರೂ ವಿಠಲ ಬದುಕಿ ಉಳಿಯಲಿಲ್ಲ. ಆತನ ಸಾವು ಸಂಭವಿಸುತ್ತಿದ್ದಂತೆ ರೈತರೆಲ್ಲ ರೊಚ್ಚಿಗೆದ್ದು, ಲಬೋಲಬೋ ಎಂದು ಬಾಯಿ ಬಡಿದುಕೊಳ್ಳುತ್ತ ಸರಕಾರದ ವಿರುದ್ಧ ಧಿಕ್ಕಾರ ಕೂಗಲು ಆರಂಭಿಸಿದರು.

ಸಿದ್ದರಾಮಯ್ಯ ಅವರಿಂದ ಅಂತಿಮ ದರ್ಶನ

ಸಿದ್ದರಾಮಯ್ಯ ಅವರಿಂದ ಅಂತಿಮ ದರ್ಶನ

ವಿಧಾನಸಭೆಯ ಕಲಾಪದಲ್ಲಿ ತಲ್ಲೀನರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತನ ಆತ್ಮಹತ್ಯೆ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ವಿರೋಧ ಪಕ್ಷಗಳಿಗೆ ಈ ಸಾವು ಹೊಸ ಅಸ್ತ್ರ ಸಿಕ್ಕಂತಾಗಿತ್ತು. ಕೊನೆಗೆ, ರೈತರ ಹೋರಾಟಕ್ಕೆ ಮಣಿದ ಸರಕಾರ ಸಂಜೆಯ ಹೊತ್ತಿಗೆ ಬೆಂಬಲ ಬೆಲೆಯನ್ನು ಘೋಷಿಸಿತು.

English summary
It has taken life of a struggling farmer of Belgaum district to fix support price of Sugarcane by Karnataka govt. Opposition is demanding to increase the support price. But, the irony is the person who fought for this is no more. May his soul rest in peace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X