ದೇವಾಲಯಗಳ ತಾತ್ಕಾಲಿಕ ನೌಕರರಿಗೆ ರಾಜ್ಯ ಸರ್ಕಾರದಿಂದ ಕೊಡುಗೆ
ಬೆಳಗಾವಿ, ಡಿಸೆಂಬರ್ 19: ದೇವಾಲಯಗಳಲ್ಲಿ ತಾತ್ಕಾಲಿಕ ನೌಕರರಾಗಿ ಕೆಲಸ ಮಾಡುತ್ತಿರುವವರಿಗೆ ರಾಜ್ಯ ಸರ್ಕಾರ ಸಂತಸ ಸುದ್ದಿ ನೀಡಿದೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 2011ರ 8ನೇ ನಿಯಮಕ್ಕೆ ತಿದ್ದುಪಡಿ ತಂದು ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ 2568 ತಾತ್ಕಾಲಿಕ ನೌಕರರಿಗೆ ವೇತನ ತಾರತಮ್ಯ ಸರಿಪಡಿಸಲು ಸೂಕ್ತ ವೇತನ ಶ್ರೇಣಿ ನಿಗದಿಪಡಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಮುಜರಾಯಿ ಸಚಿವ ರಾಜಶೇಖರ್ ಬಿ.ಪಾಟೀಲ ರಾಜ್ಯ ವಿಧಾನಪರಿಷತ್‌ನಲ್ಲಿ ಬುಧವಾರ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಎಂ.ಸಿ.ವೇಣುಗೋಪಾಲ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರು ದೇವಾಲಯದ ನೌಕರರಾಗಿರುತ್ತಾರೆಯೇ ಹೊರತು ಸರ್ಕಾರಿ ನೌಕರರಲ್ಲ.

ಇವರಿಗೆ ವೇತನ ಶ್ರೇಣಿ ನೀಡಲು ನಿಯಮ ರೂಪಿಸಲಾಗಿದೆ. ದೇವಾಲಯದ ವಾರ್ಷಿಕ ಆದಾಯದಲ್ಲಿ ಸಿಬ್ಬಂದಿ ವೆಚ್ಚವು ಶೇಕಡಾ 35 ಮೀರದಂತೆ ವೇತನ ಶ್ರೇಣಿ ನೀಡಬೇಕಾಗಿದೆ. ಈಗಾಗಲೇ 1111 ನೌಕರರುಗಳಿಗೆ ಐದನೇ ವೇತನ ಶ್ರೇಣಿ ನೀಡಲಾಗುತ್ತಿದೆ.
2568 ತಾತ್ಕಾಲಿಕ ನೌಕರರಿಗೆ ವೇತನ ತಾರತಮ್ಯ ಸರಿಪಡಿಸಲು ಧಾರ್ಮಿಕ ದತ್ತಿ ಆಯುಕ್ತರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ದಿನಾಂಕ ಡಿ. 7 ರಂದು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ವರದಿ ಪರಿಶೀಲಿಸಿ ದೇವಾಲಯಗಳ ಆದಾಯ ಮತ್ತು ವೆಚ್ಚದ ಪೂರ್ಣ ಅಂಕಿ ಅಂಶ ಪಡೆದು ವೇತನ ಶ್ರೇಣಿ ಜಾರಿಗೊಳಿಸಲಾಗುವುದು ಎಂದು ಸದನಕ್ಕೆ ಮಾಹಿತಿ ನೀಡಿದರು.












Click it and Unblock the Notifications