ರಮೇಶ್ ಜಾರಕಿಹೊಳಿ ರಾಜೀನಾಮೆಗೆ ತ್ರಿ ಈಡಿಯಟ್ಸ್ ಕಾರಣ!
ಬೆಳಗಾವಿ, ಜುಲೈ 02: ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡಲು ತ್ರಿ ಈಡಿಯಟ್ಸ್ ಕಾರಣವಂತೆ! ಹೌದು ಹೀಗೆಂದು ಹೇಳಿರುವುದು ರಮೇಶ್ ಅವರ ಸಹೋದರ ಸತೀಶ್ ಜಾರಕಿಹೊಳಿ.
ಸುದ್ದಿಗಾರರೊಂದಿಗೆ ಮಾತನಾಡಿರುವ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಲು ಅವರ ಮೂವರು ಅಳಿಯಂದಿರು ಕಾರಣ ಎಂದಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಅಳಿಯಂದಿರನ್ನೇ ಸತೀಶ್ ಜಾರಕಿಹೊಳಿ ತ್ರೀ ಇಡಿಯಟ್ಸ್ ಎಂದಿರುವುದು.
ಅಂಬಿರಾವ್, ಅಪ್ಪಿರಾವ್ ಮತ್ತು ಶಂಕರ್ ಎಂಬ ಮೂವರು ಅಳಿಯಂದಿರುವ ರಮೇಶ್ ಜಾರಕಿಹೊಳಿಗೆ ಇದ್ದಾರೆ, ಅವರಿಗೆ ಗೋಕಾಕ ತಾಲ್ಲೂಕಿನಲ್ಲಿ ತ್ರೀ ಇಡಿಯಟ್ಸ್ ಎಂಬ ಹೆಸರಿದೆ ಎಂದು ಸತೀಶ್ ವ್ಯಂಗ್ಯ ಮಾಡಿದರು.

'ಕಳೆದ ಒಂದು ವರ್ಷದಿಂದಲೂ ಮನವೊಲಿಸುತ್ತಿದ್ದೇವೆ'
ಕಳೆದ ಒಂದು ವರ್ಷಗಳಿಂದಲೂ ರಮೇಶ್ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದೇನೆ, ಆದರೆ ಆಗಿಲ್ಲ, ಈಗೇನಿದ್ದರೂ ಅವರ ಅಳಿಯಂದಿರೇ ರಮೇಶ್ ಜಾರಕಿಹೊಳಿ ಮನವೊಲಿಸಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ನಿಯಂತ್ರಣ ತಪ್ಪಿದ್ದಾರೆ: ಸತೀಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ನಿಯಂತ್ರಣ ತಪ್ಪಿಬಿಟ್ಟಿದ್ದಾರೆ, ಅವರು ಈಗ ಅವರ ಅಳಿಯಂದಿರ ನಿಯಂತ್ರಣದಲ್ಲಿದ್ದಾರೆ. ರಮೇಶ್ ರಾಜೀನಾಮೆ ಹಿಂಪಡೆಯಬೇಕೆಂದರೆ ಅವರ ಅಳಿಯಂದಿರನ್ನು ಕೇಳಬೇಕು ಅಷ್ಟೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

'ರಮೇಶ್ ಅವರ ಅಳಿಯಂದಿರ ನಿಯಂತ್ರಣದಲ್ಲಿದ್ದಾರೆ'
ರಮೇಶ್ ಅವರ ಅಳಿಯಂದಿರು ಅವರನ್ನು ಬಿಜೆಪಿಗೆ ಸೇರಿಸುತ್ತಾರೋ ಅಥವಾ ರಾಜೀನಾಮೆ ಹಿಂಪಡೆಯುವಂತೆ ಮಾಡುತ್ತಾರೋ ಅವರಿಗೇ ಗೊತ್ತು ಎಂದ ಅವರು, ಮೊದಲು ರಮೇಶ್ ಅವರ ರಾಜೀನಾಮೆ ಅಂಗೀಕಾರವಾಗಲಿ ಆ ನಂತರ ಗೋಕಾಕ ಉಪಚುನಾವಣೆ ಬಗ್ಗೆ ಮಾತನಾಡುತ್ತೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ನಿನ್ನೆ ರಾಜೀನಾಮೆ ಸಲ್ಲಿಸಿರುವ ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಅವರು ನಿನ್ನೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಅವರು ಇಂದು ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದ್ದು, ಅಲ್ಲಿ ಬಿಜೆಪಿಯ ಪ್ರಮುಖ ನಾಯಕರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.












Click it and Unblock the Notifications