ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜ್ಯಾತಿಥ್ಯ: ನಟ ದರ್ಶನ್ & ಗ್ಯಾಂಗ್ ಹಿಂಡಲಗಾ ಜೈಲಿಗೆ ಶಿಫ್ಟ್?
ಬೆಳಗಾವಿ, ಆಗಸ್ಟ್ 27: ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಫೋಟೋ ವೈರಲ್ ಆಗಿದ್ದು, ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಹಾಗೂ ಇತರ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಹೀಗಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಸದ್ಯದಲ್ಲೇ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ಜೈಲಿನ ಡಿಜಿ ಮಾಲಿನಿ ಕೃಷ್ಣಮೂರ್ತಿ ಈಗಾಗಲೇ ಬೆಳಗಾವಿ ಹಿಂಡಲಗಾ ಜೈಲು ಸೇರಿ ರಾಜ್ಯದ ಪ್ರಮುಖ ಜೈಲುಗಳ ಸ್ಥಿತಿಗತಿ ಬಗ್ಗೆ ವರದಿ ತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಗಲ್ಲಿಗೇರಿಸುವ ಏಕೈಕ ಜೈಲು ಅಂದರೆ ಬೆಳಗಾವಿ ಹಿಂಡಲಗಾ ಜೈಲು. ಹೀಗಾಗಿ ಬೆಳಗಾವಿ ಹಿಂಡಲಗಾ ಜೈಲಿನ ಬಂದೋಬಸ್ತ್ ವ್ಯವಸ್ಥೆ ಕುರಿತು ಹಿರಿಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.

ಈಗಾಗಲೇ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ, ದಂಡುಪಾಳ್ಯ ಗ್ಯಾಂಗ್, ವೀರಪ್ಪನ್ ಸಹಚರರು, ಸೈನೈಡ್ ಮಲ್ಲಿಕಾ, ಬಳ್ಳಾರಿ ನಾಗಾ, ಸದಾಶಿವ ಡಾಂಗೆ, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿ ಹಲವರು ಸೆರೆವಾಸ ಅನುಭವಿಸಿದ್ದಾರೆ.
ಮರಣದಂಡನೆ ಶಿಕ್ಷೆಗೆ ಗುರಿಯಾದ ಖೈದಿಗಳು ಹಿಂಡಲಗಾ ಜೈಲಿನಲ್ಲಿ ಸೆರೆವಾಸವಾಗಿದ್ದಾರೆ. ಒಂದು ವೇಳೆ ಹಿಂಡಲಗಾ ಜೈಲಿಗೆ ದರ್ಶನ್ ಅಥವಾ ಇತರ ಆರೋಪಿಗಳನ್ನು ಶಿಪ್ಟ್ ಮಾಡಿದರೆ ಆಗುವ ಸಾಧಕಬಾಧಕ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಮಧ್ಯೆ ಜೈಲಿನಲ್ಲಿರುವ ಸೆಕ್ಯುರಿಟಿ ಕುರಿತು ಕೂಡ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಒಟ್ಟಿನಲ್ಲಿ ಬೆಳಗಾವಿ ಹಿಂಡಲಗಾ ಜೈಲು ಈಗಾಗಲೇ ಅನೇಕ ಅಪಖ್ಯಾತಿಯಿಂದ ಸುದ್ದಿಯಲ್ಲಿತ್ತು. ಈಗ ಕೊಲೆ ಆರೋಪಿ ದರ್ಶನ್ & ಗ್ಯಾಂಗ್ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ ಎನ್ನುವ ಚರ್ಚೆ ಜೋರಾಗಿದೆ. ಸದ್ಯ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕುಖ್ಯಾತ ಖೈದಿಗಳಿದ್ದಾರೆ. ಹೀಗಿರುವಾಗ ದರ್ಶನ್ ದರ್ಶನ್ ಗ್ಯಾಂಗ್‌ಅನ್ನು ಈ ಜೈಲಿಗೆ ಶಿಫ್ಟ್ ಮಾಡುವುದು ಎಷ್ಟು ಸುರಕ್ಷಿತ ಎನ್ನುವುದರ ಬಗ್ಗೆ ಅಧಿಕಾರಿಗಳು ತಲೆ ಕೆಡೆಸಿಕೊಂಡಿದ್ದಾರೆ.












Click it and Unblock the Notifications